ಗದಗ: ‘ಸೆ.15ರಿಂದ ಸಮೀಕ್ಷೆ ಆರಂಭವಾಗಿದ್ದು ದೇವದಾಸಿ ಮಹಿಳೆಯರು, ಮಕ್ಕಳು, ಮೊಮ್ಮಕ್ಕಳು ಸಮೀಕ್ಷೆಯಿಂದ ಹೊರಗೆ ಉಳಿಯಬಾರದು. ಇದರಿಂದ ಸರ್ಕಾರದಿಂದ ಜಮೀನು, ಜಾಗ, ಪುನರ್ವಸತಿ, ಉದ್ಯೋಗ, ಸಾಲ ಸೌಲಭ್ಯ, ಪರಿಹಾರ ಪಡೆಯಲು ಅನುಕೂಲ ಆಗಲಿದೆ’ ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಗೌರವಾಧ್ಯಕ್ಷ ಯು.ಬಸವರಾಜ ಹೇಳಿದರು.
ಇಲ್ಲಿನ ನಗರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.
‘ದೇವದಾಸಿ ಪದ್ಧತಿಯನ್ನು ಅನಿಷ್ಟ ಪದ್ಧತಿ ಎಂದು ಸರ್ಕಾರ ಹೇಳುತ್ತದೆ. ದೇವದಾಸಿಯಾದರೆ ಜೈಲಿಗೆ ಹಾಕುವುದಾಗಿ ಹೇಳುತ್ತದೆ. ದೇವದಾಸಿ ನಾವಾಗಿಲ್ಲ, ಸಾಮಾಜಿಕ ವ್ಯವಸ್ಥೆ ದೇವದಾಸಿಯನ್ನಾಗಿ ಮಾಡಿ ದೌರ್ಜನ್ಯ ಎಸಗುತ್ತಿದೆ. ಚಂದ್ರಗುತ್ತಿ ದೇವಸ್ಥಾನದಲ್ಲಿ ಬೆತ್ತಲೆ ಸೇವೆ ಆಚರಣೆಗೆ ಈ ದೇವದಾಸಿ ಪದ್ಧತಿ ಉಳಿಸಿಕೊಂಡು ಬಂದಿದೆ. ಹರಪನಹಳ್ಳಿ ಒಂದರಲ್ಲಿ ದೇವದಾಸಿಯರು ಸಿಡಿಗಂಬವನ್ನು ಸುತ್ತುವರಿಯಬೇಕಿತ್ತು. ಹೀಗೆ ಮಾಡಿದರೆ ನಮ್ಮಗೆ ಒಳ್ಳೆಯದಾಗುತ್ತೆ ಎಂದು ದೇವದಾಸಿ ಪದ್ದತಿಯನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಮುಂದುವರಿಸುತ್ತಾ ಬಂದಿದ್ದಾರೆ. ಇಂತಹವುಗಳನ್ನು ನಾವು ಸಂಘಟನೆ ಮೂಲಕ ವಿರೋಧಿಸಿ ತಡೆಗಟ್ಟುತ್ತಾ ಬಂದಿದ್ದೇವೆ’ ಎಂದರು.
‘ಸರ್ಕಾರ ದೇವದಾಸಿ ಪದ್ಧತಿ ನಿಷೇಧ ಮಾಡಿದ್ದೇವೆ ಎಂದು ಹೇಳುತ್ತಿದೆ. ಆದರೆ, ದೇವದಾಸಿಯರ ಹೆಣ್ಣುಮಕ್ಕಳು ಮದುವೆ ಆದರೆ ಇನ್ನೂ ಅವಮಾನ ಅನುಭವಿಸುತ್ತಿದ್ದಾರೆ. ಹಾಗಾಗಿ ದೇವದಾಸಿ ಮಕ್ಕಳಿಗೂ ಸೌಲಭ್ಯಗಳು ದೊರೆಯಬೇಕು’ ಎಂದು ಆಗ್ರಹಿಸಿದರು.
‘ದೇವದಾಸಿ ಮಹಿಳೆಯರಿಗಷ್ಟೇ ಅಲ್ಲ, ಅವರ ಮಕ್ಕಳೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದರ ವಿರುದ್ಧ ಕಾನೂನು ತಿದ್ದುಪಡಿ ಆಗಬೇಕು. ತಂದೆಯ ಆಸ್ತಿಯಲ್ಲಿ ಪಾಲು ಸಿಗಬೇಕು. ನಿರಂತರ ಹೋರಾಟ, ಚಳವಳಿಗಳನ್ನು ಮಾಡಿದ್ದರ ಪರಿಣಾಮ ದೇವದಾಸಿ ಮಗಳು, ದೇವದಾಸಿ ಮಗ ಮದುವೆ ಆದರೆ ಸರ್ಕಾರದಿಂದ ಹಣಕಾಸಿನ ನೆರವು ಸಿಗುತ್ತಿದೆ’ ಎಂದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ, ‘ದೇವದಾಸಿ ಕುಟುಂಬಕ್ಕೆ ಸಾಕಷ್ಟು ಸೌಲಭ್ಯಗಳಿವೆ. ಅವುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಬೇಕು. ಸರ್ಕಾರದ ಮೇಲೆ ಒತ್ತಡ ಹೇರವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕು. ದೇವದಾಸಿಯ ಹೆಣ್ಣುಮಕ್ಕಳ ಮಕ್ಕಳು, ಮಗ, ಮಗಳು, ಮರಿಮಕ್ಕಳು ಹೀಗೆ ಸಮೀಕ್ಷೆಯಲ್ಲಿ ಎಲ್ಲರ ಹೆಸರನ್ನು ಕಡ್ಡಾಯವಾಗಿ ದಾಖಲಿಸಬೇಕು’ ಎಂದು ಹೇಳಿದರು.
ಸಂಯೋಜನೆ ಸಂಘಟನಾ ಅಧಿಕಾರಿಗಳಾದ ನಾಗರತ್ನಾ, ಸಮೀರ ಗಾಡಿವಾಲೆ, ಪ್ರದೀಪ ಬಾರಕೇರ ಹಾಗೂ ಸಂಘದ ಮುಖಂಡರಾದ ಫಕೀರಮ್ಮ ಪೂಜಾರ ಅಡಿವ್ವಮ್ಮ ಹರಿಜನ, ಮಲ್ಲಿಕಾರ್ಜುನ ಮಾದರ, ಶರಣಪ್ಪ ಲಕ್ಕಲಕಟ್ಟಿ, ಪಡಿಯಪ್ಪ ಮಾದರ, ರಮೇಶ ಮಾದರ, ಶಿದ್ದು ಪೂಜಾರ, ದಂಡಮ್ಮ ಮಾದರ, ಕಲ್ಲವ್ವ ಮಾದರ, ಶಿವವ್ವ ಹರಿಜನ, ಕೆಂಚವ್ವ ಹಳ್ಳಿಕೇರಿ, ಗಣೇಶ ರಾಠೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.