ADVERTISEMENT

ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ: ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 5:07 IST
Last Updated 1 ಮಾರ್ಚ್ 2023, 5:07 IST
ನರಗುಂದದಲ್ಲಿ ನಡೆದ ಕಾಂಗ್ರೆಸ್ ಪಕ್ಷದಿಂದ ಶಡೆದ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಸಿದ್ತರಾಮಯ್ಯ ಮಾತನಾಡಿದರು
ನರಗುಂದದಲ್ಲಿ ನಡೆದ ಕಾಂಗ್ರೆಸ್ ಪಕ್ಷದಿಂದ ಶಡೆದ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಸಿದ್ತರಾಮಯ್ಯ ಮಾತನಾಡಿದರು   

ನರಗುಂದ: ‘ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯ ಒಂದೇ ಸರ್ಕಾರ ಇದ್ದರೂ ಅಭಿವೃದ್ಧಿ ಸಂಪೂರ್ಣ ಶೂನ್ಯವಾಗಿದೆ. ಬಿಜೆಪಿ ರಾಜ್ಯವನ್ನೇ ಲೂಟಿ ಹೊಡೆಯುವ ಸರ್ಕಾರವಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪಟ್ಟಣದ ಅಂಚೆ ಇಲಾಖೆ ಹಿಂದಿನ ಬಯಲು ಜಾಗದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಮಾತನಾಡಿದರು.

‘ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಲಿಬಾಬಾ ಮತ್ತು ನಲವತ್ತು ಕಳ್ಳರ ಸರ್ಕಾರವಾಗಿದೆ. 600 ಭರವಸೆ ನೀಡಿದ್ದ ಬಿಜೆಪಿ, ಅದರಲ್ಲಿ 50 ಭರವಸೆಗಳನ್ನು ಮಾತ್ರ ಈಡೇರಿಸಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿ, 30 ಹೊಸ ಕಾರ್ಯಕ್ರಮ ಜಾರಿಗೊಳಿಸಲಾಗಿತ್ತು’ ಎಂದರು.

ADVERTISEMENT

‘ಬಿಜೆಪಿ ಬರೀ ಸುಳ್ಳು ಹೇಳುವ ಪಕ್ಷ. ಪ್ರಧಾನಿ ಮೋದಿ ಸುಳ್ಳಿನ ಸರದಾರ. ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ, ಯುವಕರಿಗೆ ಉದ್ಯೋಗ ಸೃಷ್ಟಿಸಲಿಲ್ಲ, ಸೂರು ನೀಡಲಿಲ್ಲ, ಕರ್ನಾಟಕಕ್ಕೆ ಬಂದಾಗ ಮಹದಾಯಿ ಬಗ್ಗೆ ಚಕಾರ ಎತ್ತಲಿಲ್ಲ. ಕೇವಲ ರೋಡ್‌ ಶೋ ಮಾಡುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಈ ಮತಕ್ಷೇತ್ರದವರೇ ಲೋಕೋಪಯೋಗಿ ಸಚಿವರಿದ್ದರೂ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಇನ್ನು ರಾಜ್ಯದ ರಸ್ತೆಗಳ ಅಭಿವೃದ್ಧಿ ಹೇಗೆ ಮಾಡುತ್ತಾರೆ’ ಎಂದು ಕಿಡಿಕಾರಿದರು.

‘ಆರು ಜನರು ನರಗುಂದ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಯಾರಿಗೆ ಟಿಕೆಟ್‌ ದೊರೆತರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಗೆಲ್ಲಿಸಬೇಕು’ ಎಂದು ಕರೆ ನೀಡಿದರು.

ಮಾಜಿ ಸಚಿವ ಬಿ.ಆರ್.ಯಾವಗಲ್ ಮಾತನಾಡಿ, ‘ನರಗುಂದ ಕ್ಷೇತ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೋ, ಆ ಪಕ್ಷ ರಾಜ್ಯದಲ್ಲೂ ಅಧಿಕಾರಕ್ಕೆ ಬರುತ್ತದೆ. ಬಂಡಾಯ ನೆಲದ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಬೇಕು’ ಎಂದರು.

ಕಾಂಗ್ರೆಸ್ ಮುಖಂಡರಾದ ಸಲೀಂ ಅಹ್ಮದ್ ಹಾಗೂ ಜಮೀರ್ ಅಹ್ಮದ್ ಮಾತನಾಡಿದರು.

ಮುಖಂಡರಾದ ಜಿ.ಎಸ್.ಪಾಟೀಲ, ಪ್ರಕಾಶ ರಾಠೋಡ, ಜಿ.ಎಸ್. ಗಡ್ಡದೇವರಮಠ, ಡಾ.ಸಂಗಮೇಶ ಕೊಳ್ಳಿಯವರ, ದಶರಥ ಗಾಣಿಗೇರ, ಪ್ರಕಾಶ ಕರಿ,ರಾಜು ಕಲಾಲ, ಬಸವರಾಜ ಗುರಿಕಾರ, ಟಿ.ಈಶ್ವರ, ಪ್ರವೀಣ ಯಾವಗಲ್, ವಿವೇಕ ಯಾವಗಲ್ ಇದ್ದರು.

ಸಮಾವೇಶದಲ್ಲಿ ಸೇರಿದ್ದ ಸಿದ್ದರಾಮಯ್ಯ ಬೆಂಬಲಿಗರು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ತಮ್ಮ ನಾಯಕರ ಭಾವಚಿತ್ರ ಇರುವ ಪೋಸ್ಟರ್‌ ತೋರಿಸಿ, ಕೂಗುತ್ತಿದ್ದರು. ವೇದಿಕೆ ಏರುತ್ತಲೇ ಇದನ್ನು ಗಮನಿಸಿದ ಸಿದ್ದರಾಮಯ್ಯ, ಮೈಕ್ ಬಳಿ ಬಂದು ‘ಪೋಸ್ಟರ್‌ಗಳನ್ನು ಕೆಳಗಿಳಿಸ್ರಯ್ಯ’ ಎಂದು ತಾಕೀತು ಮಾಡಿದರು.

ಸೋಮಾಪುರ ಓಣಿಯ ಮಾರುತಿ ದೇವಾಲಯದಲ್ಲಿ ದರ್ಶನ ಪಡೆದ ಸಿದ್ದರಾಮಯ್ಯ, ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ತೆರೆದ ವಾಹನದಲ್ಲಿ ರ‍್ಯಾಲಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.