ADVERTISEMENT

ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ಎನ್‌ಐಎ ತನಿಖೆಗೆ ಸಿ.ಸಿ. ಪಾಟೀಲ ಆಗ್ರಹ

ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 3:23 IST
Last Updated 27 ಆಗಸ್ಟ್ 2025, 3:23 IST
ನರಗುಂದದಲ್ಲಿ ಧರ್ಮಸ್ಥಳ ಪ್ರಕರಣ ವಿರುದ್ಧ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಶಾಸಕ ಸಿ.ಸಿ. ಪಾಟೀಲ ಹಾಗೂ ವಿವಿಧ ಮಠಾಧೀಶರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು 
ನರಗುಂದದಲ್ಲಿ ಧರ್ಮಸ್ಥಳ ಪ್ರಕರಣ ವಿರುದ್ಧ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಶಾಸಕ ಸಿ.ಸಿ. ಪಾಟೀಲ ಹಾಗೂ ವಿವಿಧ ಮಠಾಧೀಶರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು    

ನರಗುಂದ: ಪಟ್ಟಣದ ಶಿವಾಜಿ ವೃತ್ತದಲ್ಲಿ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಶಾಸಕ ಸಿ.ಸಿ. ಪಾಟೀಲ ಹಾಗೂ ವಿವಿಧ ಮಠಾಧೀಶರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಧರ್ಮಸ್ಥಳ ಪ್ರಕರಣ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ‘ಎಸ್ಐಟಿ ತನ್ನ ಕೆಲಸ ಮಾಡಿದೆ. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮಾಧಿಗಳನ್ನು ಅಗೆಯಲಿಕ್ಕೆ ಹಚ್ಚಿರುವುದು ಇತಿಹಾಸದಲ್ಲಿಯೇ ಪ್ರಥಮ. ಹಿಂದೂ ಸಂಸ್ಕೃತಿ, ಧಾರ್ಮಿಕ ಕೇಂದ್ರಗಳನ್ನು ನಾಶ ಮಾಡುವುದೇ ಉದ್ದೇಶವಾಗಿದ್ದು, ಈ ಪ್ರಕರಣದ ಹಿಂದೆ ಕಾಂಗ್ರೆಸ್ ಸಂಸದನ ಕೈವಾಡವಿದೆ ಎಂದು ಕೇಳಿಬರುತ್ತಿದ್ದು, ಎನ್‌ಐಎ ತನಿಖೆಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಹಿಂದೂ ಧರ್ಮದ ರಕ್ಷಣೆಗಾಗಿ ನಾವೆಲ್ಲ ಜಾಗೃತರಾಗಬೇಕು. ಇದಕ್ಕಾಗಿ ಬಿಜೆಪಿ ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಕೈಗೊಂಡಿದ್ದು, ಪಕ್ಷಭೇದ ಮರೆತು ಬೆಂಬಲಿಸಬೇಕು. ಸೆ. 1ರಂದು ಧರ್ಮಸ್ಥಳಕ್ಕೆ ರಾಜ್ಯದ 224 ಕ್ಷೇತ್ರಗಳಿಂದ ಜನ ಆಗಮಿಸುತ್ತಿದ್ದು, ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ADVERTISEMENT

ಗಣಪತಿಗೂ ಅನುಮತಿ ಬೇಕೆ?: ‘ನೆರೆಯ ಮಹಾರಾಷ್ಟ್ರದಲ್ಲಿ 1800 ಸಾರ್ವಜನಿಕ ಗಣಪತಿ ಪ್ರತಿಷ್ಟಾಪನಾ ಮಂಡಳಿಗಳಿಗೆ ಸರ್ಕಾರವೇ ಹಣ ನೀಡುತ್ತದೆ. ಆದರೆ, ನಮ್ಮ ರಾಜ್ಯದಲ್ಲಿ ಗಣಪತಿ ಪ್ರತಿಷ್ಟಾಪನೆ ಹಾಗೂ ಡಿಜೆ ಹಚ್ಚಲು ಅನುಮತಿ ಕೇಳಬೇಕಿದೆ’ ಎಂದು ಶಾಸಕ ಸಿ.ಸಿ.ಪಾಟೀಲ ಕಿಡಿಕಾರಿದರು.

ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ಪತ್ರಿವನಮಠದ ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರು, ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ ಧರ್ಮದ ಉಳಿವಿಗಾಗಿ ನಡೆದಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದರು. ತಹಶೀಲ್ದಾರ್ ಶ್ರೀಶೈಲ ತಳವಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಲಿಂಗರಾಜ ಪಾಟೀಲ, ಚಂದ್ರು ದಂಡಿನ, ಶಿವಾನಂದ ಮುತವಾಡ, ಉಮೇಶಗೌಡ ಪಾಟೀಲ, ಬಸು ಪಾಟೀಲ, ನಾಗನಗೌಡ ತಿಮ್ಮನಗೌಡ್ರ, ಎಸ್.ಬಿ. ಕರಿಗೌಡ್ರ, ಎನ್.ಕೆ. ಸೋಮಾಪುರ, ಎ.ಎಂ. ಹುಡೇದ, ಬಿ.ಬಿ. ಐನಾಪುರ, ಎಸ್.ಆರ್. ಪಾಟೀಲ, ಜಿ.ಎಸ್. ಆದೆಪ್ಪನವರ, ಚಂಬಣ್ಣ ವಾಳದ, ಸಿದ್ದು ಹೂಗಾರ, ವಿಠ್ಠಲ ಹವಾಲ್ದಾರ ಇದ್ದರು.

ಪೊಲೀಸರ ವಿರುದ್ಧ ಆಕ್ರೋಶ

ಪ್ರತಿಭಟನೆ ನಡೆದ ಸಂದರ್ಭದಲ್ಲಿ ವಾಹನಗಳನ್ನು ಪೊಲೀಸರು ತಡೆಯಲು ಮುಂದಾಗದೆ ಇದ್ದಾಗ ಶಾಸಕ ಸಿ.ಸಿ. ಪಾಟೀಲ ಹಾಗೂ ಬಿಜೆಪಿ ಕಾರ್ಯಕರ್ತರು ಪೊಲೀಸ್‌ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪ್ರಯಾಣಿಕರ ಪರದಾಟ: ಅರ್ಧಗಂಟೆಗೂ ಹೆಚ್ಚು ಸಮಯ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಕಾರಣ ಪ್ರಯಾಣಿಕರು ತೀವ್ರ ಪರದಾಡಿದರು. ಪ್ರತಿಭಟನೆ ನಂತರ ಸಂಚಾರ ದಟ್ಟನೆ ತೆರವುಗೊಳಿಸಲು ಪೊಲೀಸರು ಹರಸಾಹಸಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.