ಎಸ್.ವಿ.ಸಂಕನೂರ
ಗದಗ: ‘ಅತ್ಯಂತ ಪವಿತ್ರವಾದ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ದಾಖಲೆರಹಿತ ಸುಳ್ಳು ಆರೋಪಗಳನ್ನು ಮಾಡಿ ಎಸ್‌ಐಟಿ ತನಿಖೆಗೆ ಒಳಪಡಿಸಿರುವ ವ್ಯಕ್ತಿ ಹಾಗೂ ಸಂಘಟನೆಗಳ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ಎರಡು ಮೂರು ವಾರಗಳಿಂದ ಅನಾಮಧೇಯ ವ್ಯಕ್ತಿಯೊಬ್ಬ ಧರ್ಮಸ್ಥಳದ ಕುರಿತು ಇಲ್ಲಸಲ್ಲದ ಆರೋಪ ಮಾಡಿ ಅಸ್ಥಿಪಂಜರ ಶೋಧನೆಗಾಗಿ ಭೂಮಿ ಅಗೆದು ಅಲ್ಲಿ ಯಾವುದೇ ಒಂದು ಕಳೆಬರ ಪತ್ತೆ ಆಗದೇ, ಆರೋಪ ಸುಳ್ಳಾಗಿದೆ. ಎಸ್‌ಐಟಿ ತನಿಖೆಯ ಪ್ರಕ್ರಿಯೆಯನ್ನು ಲಕ್ಷಾನುಗಟ್ಟಲೆ ಭಕ್ತರು ದಿನವಿಡೀ ಟೀವಿ ಮತ್ತು ಪತ್ರಿಕೆಗಳಲ್ಲಿ ನೋಡಿ ಮನಸ್ಸಿಗೆ ನೋವು ಹಾಗೂ ಆಘಾತ ಉಂಟಾಗಿದ್ದನ್ನು ಯಾರು ಸರಿಪಡಿಸಲಿಕ್ಕೆ ಆಗುವುದಿಲ್ಲ’ ಎಂದು ತಿಳಿಸಿದ್ದಾರೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಪ್ರಾರಂಭದಲ್ಲಿ ಬೆಳಕಿಗೆ ಬಂದಾಗ ರಾಜ್ಯದ ಪೊಲೀಸ ಇಲಾಖೆ ಸಮರ್ಥವಾಗಿದೆ, ಎಸ್‌ಐಟಿ ರಚನೆ ಮಾಡುವುದು ಅವಶ್ಯಕತೆ ಇಲ್ಲ ಎಂದು ಹೇಳಿ ಒಂದೇ ದಿನದಲ್ಲಿ ತಮ್ಮ ನಿರ್ಧಾರ ಬದಲಿಸಿ ಎಸ್‌ಐಟಿ ತನಿಖೆಗೆ ಆದೇಶ ಮಾಡಿದ್ದರ ಹಿಂದೆ ಯಾವ ವ್ಯಕ್ತಿ ಅಥವಾ ಸಂಘಟನೆ ಕೈವಾಡ ಇದೆ ಎಂಬುದನ್ನು ಬಹಿರಂಗಪಡಿಸಬೇಕು. ಅದೇರೀತಿ ಎಸ್‌ಐಟಿ ತನಿಖೆ ನಡೆಯುತ್ತಿರುವಾಗ ಕೆಲವೊಂದು ವ್ಯಕ್ತಿ ಹಾಗೂ ಸಂಘಟನೆಗಳು ಕೆಟ್ಟ ಶಬ್ದಗಳಿಂದ ಅಂತರ್ಜಾಲದಲ್ಲಿ ಟೀಕೆ ಮಾಡಿ ಧರ್ಮಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ಮಾಡಿದ್ದಾಗ್ಯೂ, ಅಂತಹ ಅಪಪ್ರಚಾರಗಳನ್ನು ನಿಲ್ಲಿಸಲು ಗೃಹ ಸಚಿವರು ವಿಫಲರಾಗಿದ್ದಾರೆ. ಅಂತರ್ಜಾಲದಲ್ಲಿ ಅಪಪ್ರಚಾರ ಮಾಡಿದವರ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ ಎಂಬುದರ ಬಗ್ಗೆ ಸ್ಪಷ್ಟೀಕರಣ ಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.