ADVERTISEMENT

2.38 ಲಕ್ಷ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಶಿಕ್ಷಣ: ಸಚಿವ ಜಮೀರ್ ಅಹ್ಮದ್ ಖಾನ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:47 IST
Last Updated 22 ಜನವರಿ 2026, 2:47 IST
ಗದಗ ತಾಲ್ಲೂಕಿನ ಹರ್ತಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮವನ್ನು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಉದ್ಘಾಟಿಸಿದರು
ಗದಗ ತಾಲ್ಲೂಕಿನ ಹರ್ತಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮವನ್ನು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಉದ್ಘಾಟಿಸಿದರು   

ಗದಗ: ‘ರಾಜ್ಯದ ಅಲ್ಪಸಂಖ್ಯಾತ ಇಲಾಖೆಯ ಎಲ್ಲ ವಸತಿ ಶಾಲೆಗಳಿಗೂ ಡಿಜಿಟಲ್ ಕ್ಲಾಸ್ ರೂಮ್ ಸೌಲಭ್ಯ ಕಲ್ಪಿಸಲಾಗುವುದು’ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ತಾಲ್ಲೂಕಿನ ಹರ್ತಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದರು.

ರಾಜ್ಯದಲ್ಲಿ ಪ್ರಸ್ತುತ 2.38 ಲಕ್ಷಕ್ಕೂ ಅಧಿಕ ಮಕ್ಕಳು ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ಅನೇಕ ವಸತಿ ಶಾಲೆಗಳು ಆರಂಭಗೊಂಡಿದ್ದು, ಇದೀಗ ಮತ್ತಷ್ಟು ಹೊಸ ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ರಾಜ್ಯದ ಎಲ್ಲಾ ವಸತಿ ಶಾಲೆಗಳಲ್ಲಿ ಮಕ್ಕಳ ಆರೋಗ್ಯ, ವಸತಿ ಹಾಗೂ ಆಹಾರದ ಗುಣಮಟ್ಟ ಉತ್ತಮವಾಗಿರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ವಿವಿಧ ಜಿಲ್ಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ವೇಳೆ ನೌಕರರ ಬೇಜವಾಬ್ದಾರಿ ಕಂಡುಬಂದ ಹಿನ್ನೆಲೆಯಲ್ಲಿ ಇದುವರೆಗೆ 9 ನೌಕರರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

ಸಚಿವ ಎಚ್.ಕೆ. ಪಾಟೀಲ ಅವರ ಮನವಿಗೆ ಸ್ಪಂದಿಸಿದ ಸಚಿವರು, ಹರ್ತಿ ವಸತಿ ಶಾಲೆಗೆ ಡಿಜಿಟಲ್ ಗ್ರಂಥಾಲಯ, ಕ್ರಿಕೆಟ್ ಟರ್ಫ್ ಕೋಚಿಂಗ್ ಗ್ರೌಂಡ್, ಚೆಸ್, ಕೇರಮ್ ಹಾಗೂ ಟೇಬಲ್ ಟೆನ್ನಿಸ್ ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಒದಗಿಸುವುದಾಗಿ  ಘೋಷಿಸಿದರು.

ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ‘ಹರ್ತಿ ನೂತನ ವಸತಿ ಶಾಲೆ ಪ್ರದೇಶ ಅತ್ಯಂತ ಆಕರ್ಷಕ ಕೇಂದ್ರವಾಗಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ದೇವರಂತೆ ಕಾಣುತ್ತಿದ್ದಾರೆ. ನಿಮ್ಮೆಲ್ಲರ ಬಾಳು ಅಂದವಾಗಿ ರೂಪುಗೊಳ್ಳಲಿ’ ಎಂದರು. 

ಸಭಾ ಕಾರ್ಯಕ್ರಮದ ನಂತರ ಸಚಿವದ್ವಯರು ವಸತಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ, ಅವರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಮಕ್ಕಳು ಕುತೂಹಲದಿಂದ ತಮ್ಮ ಅಗತ್ಯಗಳನ್ನು ಸಚಿವರ ಮುಂದೆ ಮಂಡಿಸಿದ್ದು, ಅವುಗಳನ್ನು ಪೂರೈಸುವ ಭರವಸೆ ಸಚಿವರು ನೀಡಿದರು.

ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಎ.ಎಂ.ಹಿಂಡಸಗೇರಿ, ಹರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಲವ್ವ ಕುಬೇರಪ್ಪ ಕುರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ರಾಮಕೃಷ್ಣ ರೊಳ್ಳಿ, ಅನ್ವರ ಭಾಷಾ, ಶರಣಬಸನಗೌಡ ಪಾಟೀಲ, ಪ್ರಭು ಹುಡೇದ, ನಿಂಗಪ್ಪ ಛಲವಾದಿ, ಬಾಪು ಕಿಲ್ಲೇದಾರ, ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಮಿತ್ ಬಿದರಿ ಸೇರಿದಂತೆ ಹಲವರು ಇದ್ದರು.

ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಈ ಉದ್ದೇಶಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ₹4500 ಕೋಟಿ ಬಜೆಟ್ ಒದಗಿಸಲಾಗಿದೆ
ಜಮೀರ್ ಅಹ್ಮದ್ ಖಾನ್ ವಕ್ಫ್ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.