ADVERTISEMENT

ಜನತಾ ಕರ್ಫ್ಯೂಗೆ ಜಿಲ್ಲೆ ಸ್ತಬ್ಧ: ಮನೆಗಳಲ್ಲೇ ಉಳಿದ ಜನ

ಜಿಲ್ಲೆಯಾದ್ಯಂತ ಉತ್ತಮ ಬೆಂಬಲ; ಚಪ್ಪಾಳೆ ಮೂಲಕ ಪ್ರೋತ್ಸಾಹ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 13:41 IST
Last Updated 22 ಮಾರ್ಚ್ 2020, 13:41 IST
ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಭಾನುವಾರ ಗದುಗಿನ ಸ್ಟೇಶನ್‌ ರಸ್ತೆಯಲ್ಲಿ ಜನ, ವಾಹನ ಸಂಚಾರ ಇಲ್ಲದೆ ಬಿಕೊ ಎನ್ನುತ್ತಿತ್ತು
ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಭಾನುವಾರ ಗದುಗಿನ ಸ್ಟೇಶನ್‌ ರಸ್ತೆಯಲ್ಲಿ ಜನ, ವಾಹನ ಸಂಚಾರ ಇಲ್ಲದೆ ಬಿಕೊ ಎನ್ನುತ್ತಿತ್ತು   

ಗದಗ: ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಭಾನುವಾರ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಮನೆಗಳಲ್ಲೇ ಉಳಿದ ಜನರು ‘ಸಾಮಾಜಿಕ ಅಂತರ’ ಕಾಯ್ದುಕೊಳ್ಳುವ ಮೂಲಕ ಜನತಾ ಕರ್ಫ್ಯೂವನ್ನು ಯಶಸ್ಸುಗೊಳಿಸಿದರು.

ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಗದಗ–ಬೆಟಗೇರಿ ಅವಳಿ ನಗರ ಸ್ತಬ್ಧಗೊಂಡಿತ್ತು. ಸರ್ಕಾರಿ, ಖಾಸಗಿ ವಾಹನಗಳು ಹಾಗೂ ಆಟೊ ರಸ್ತೆಗಿಳಿಯಲಿಲ್ಲ. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ನಗರದ ತರಕಾರಿ ಮಾರುಕಟ್ಟೆ, ಹೊಸ ಬಸ್ ನಿಲ್ದಾಣ, ಜನತಾ ಬಜಾರ್, ರೈಲು ನಿಲ್ದಾಣಗಳಲ್ಲಿ ಜನರ ಸುಳಿವೇ ಇರಲಿಲ್ಲ. ಮಹಾತ್ಮಾ ಗಾಂಧಿ ವೃತ್ತ, ಪಾಲಾ ಬಾದಾಮಿ ರಸ್ತೆ, ಸ್ಟೇಶನ್ ರಸ್ತೆಗಳು ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು. ಹೋಟೆಲ್ ಸೇರಿ ಎಲ್ಲ ಅಂಗಡಿ-ಮುಂಗಟ್ಟು ಬಂದ್ ಆಗಿತ್ತು.

ಸ್ವಯಂ ದಿಗ್ಬಂಧನ: ಭಾನುವಾರ ಬೆಳಿಗ್ಗೆ ನಸುಕಿನಲ್ಲಿ ವಾಯುವಿಹಾರ ಮತ್ತು ಹಾಲು ಖರೀದಿಗಾಗಿ ಒಂದಿಷ್ಟು ಜನರು ಹೊರಗೆ ಕಾಣಿಸಿಕೊಂಡಿದ್ದರು. ಆದರೆ, 7 ಗಂಟೆಯ ನಂತರ, ಜನರ ಸುಳಿವು ಇರಲಿಲ್ಲ. ಪೌರಕಾರ್ಮಿಕರು ಬೆಳಗಿನ 8 ಗಂಟೆಯವರೆಗೆ ಸ್ವಚ್ಚತಾ ಕಾರ್ಯ ಕೈಗೊಂಡರು.

ಬೆಳಿಗ್ಗೆ 7 ಗಂಟೆಯಿಂದಲೇ ಜನಸಂಚಾರ ಸಂಪೂರ್ಣ ನಿಂತು ಹೋಗಿತ್ತು. ನಗರದ ಯಾವುದೇ ಮುಖ್ಯರಸ್ತೆ, ಅದಕ್ಕೆ ಅಂಟಿಕೊಂಡ ಸಣ್ಣ ರಸ್ತೆ ಮತ್ತು ಓಣಿಗಳ ಒಳಗಿನ ಕಿರು ರಸ್ತೆಗಳಲ್ಲೂ ಕೂಡ ಜನ ಸಂಚಾರ ಸಂಪೂರ್ಣ ನಿಂತು ಹೋಗಿತ್ತು. ಆಸ್ಪತ್ರೆ, ಹಾಲು, ಔಷಧ ಅಂಗಡಿ, ಪತ್ರಿಕೆ ಪೂರೈಕೆ ಎಂದಿನಂತೆ ಇತ್ತು. ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಬಸ್‌ ಸಂಚಾರ ಪ್ರಾರಂಭಿಸಬೇಕೇ ಬೇಡವೇ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಾ.ಕ.ರ.ಸಾ.ಸ ಗದಗ ವಿಭಾಗೀಯ ಕಚೇರಿ ಹೇಳಿತ್ತು. ಆದರೆ, ಬಸ್‌ಗಳು ಸಂಜೆಯವರೆಗೆ ರಸ್ತೆಗಿಳಿಯಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.