ADVERTISEMENT

ನರಗುಂದ: ಜಿಲ್ಲಾಮಟ್ಟದ ಕನ್ನಡ ನುಡಿ ವೈಭವ, ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 25 ಮೇ 2025, 13:58 IST
Last Updated 25 ಮೇ 2025, 13:58 IST
ನರಗುಂದದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ನುಡಿವೈಭವ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಸಾಹಿತಿ ಮಧುನಾಯ್ಕ ಲಂಬಾಣಿ ಉದ್ಘಾಟಿಸಿದರು
ನರಗುಂದದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ನುಡಿವೈಭವ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಸಾಹಿತಿ ಮಧುನಾಯ್ಕ ಲಂಬಾಣಿ ಉದ್ಘಾಟಿಸಿದರು   

ನರಗುಂದ: ‘ಕವಿತೆ ನಿರಂತರ ಉಳಿಯಬೇಕು. ಸಮಾಜಕ್ಕೆ ಮಾರ್ಗದರ್ಶಿಯಾಗಬೇಕು. ಕವಿಗಳು ಅಧ್ಯಯನಶೀಲರಾಗಬೇಕು’ ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಘಟಕದ ಅಧ್ಯಕ್ಷ ಮಧು ನಾಯ್ಕ ಲಂಬಾಣಿ ಸಲಹೆ ಮಾಡಿದರು.

ಪಟ್ಟಣದ ಸರಸ್ವತಿ ನಗರದ ಸರಸ್ವತಿ ಮಂದಿರದಲ್ಲಿ ಶನಿವಾರ ನಡೆದ ಕನ್ನಡ ನುಡಿವೈಭವ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೃತಕ ಬುದ್ಧಿಮತ್ತೆ ಸಾಹಿತಿಗಳ ಸೃಜನಶೀಲತೆಗೆ ಸವಾಲಾಗಿದೆ. ಇದರ ಜೊತೆ ಸಾಮಾಜಿಕ ಜಾಲತಾಣ, ಮಾಧ್ಯಮಗಳ ನಡುವೆಯೂ ಕಾವ್ಯ ಸಮಾಜವನ್ನು, ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕಿದೆ. ಕವಿಗಳು, ಕಥೆಗಾರರು ಸಮಾಜಮುಖಿ ಸಾಹಿತ್ಯ ಸೃಷ್ಟಿಸಬೇಕು. ಹೊಸ ಆಯಾಮಗಳ ಬಗ್ಗೆ ಆಲೋಚಿಸಬೇಕು. ಹೊಸ ಹೊಸ ಸಾಹಿತ್ಯ ಪ್ರಕಾರ ರೂಢಿಸಿಕೊಳ್ಳಬೇಕು. ಆಗ ಸಾಹಿತ್ಯ ಚಿರಂತನವಾಗಿ ಉಳಿಯಲು ಸಾಧ್ಯ’ ಎಂದರು.

ADVERTISEMENT

‘ಐದು ವರ್ಷಗಳಿಂದ ಬರಹಗಾರರ ಸಂಘ ಸೃಜನಶೀಲ ಚಟುವಟಿಕೆಗಳೊಂದಿಗೆ ಕವಿಗಳನ್ನು, ಹೊಸ ಪ್ರಕಾರದ ಸಾಹಿತಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಗದಗ ಜಿಲ್ಲಾ ಘಟಕ ನುಡಿ ವೈಭವ, ಕವಿಗೋಷ್ಠಿ ನಡೆಸಿದ್ದು ಬೇರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.

ಶರಣಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಜಿ. ಮಣ್ಣೂರಮಠ ಮಾತನಾಡಿ, ‘ಉತ್ತಮ ಕಾವ್ಯ ಹೊರಬರಲು ಕನ್ನಡ ಕಾವ್ಯ ಪರಂಪರೆ ಅರಿಯಬೇಕು. ಕವಿಗಳು ಸತತ ಅಭ್ಯಾಸಿಗಳಾಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಬರಹಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕಲಾಶ್ರೀ ಹಾದಿಮನಿ ಮಾತನಾಡಿ, ‘ಸಂಘದಿಂದ ನಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ’ ಎಂದರು.

ಕಲಾಶ್ರೀ ರಚಿತ ‘ವೀರಯೋಧ ಬಸವರಾಜ ಯರಗಟ್ಟಿ’ ಕಥಾಸಂಕಲನ ಬಿಡುಗಡೆ ಮಾಡಲಾಯಿತು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ಹನಮಂತಗೌಡ್ರ ಪುಸ್ತಕ ಪರಿಚಯಿಸಿದರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಬಸವರಾಜ ಹಲಕುರ್ಕಿ ಮಾತನಾಡಿ, ‘ಕವಿತೆ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಬೇಕು. ಕಾವ್ಯ ಪ್ರಯಾಣವಾಗದೇ ಪ್ರವಾಸವಾಗಬೇಕು. ಸಮಕಾಲೀನ ಕವಿಗಳ ಕಾವ್ಯ ಓದಬೇಕು. ಆಗ ನವನವೀನ ಕಾವ್ಯ ಸೃಜಿಸಲು ಸಾಧ್ಯ’ ಎಂದರು.

ಹಾವೇರಿ ಬಿಆರ್‌ಸಿ ಸಮನ್ವಯಾಧಿಕಾರಿ ಎಂ.ಡಿ. ಮಾದರ, ವೈ.ವೈ. ಕುಂಬಾರ, ದೊಡಮನಿ ಮಾತನಾಡಿದರು.

ಕವಿಗೋಷ್ಠಿಯಲ್ಲಿ ದೀನು ಆದಿ, ಎಸ್.ವಿ. ಈಟಿ, ಸುಮಿತ ಅಂಗಡಿ, ಈರಣ್ಣ ಅಂಗಡಿ, ಸವಿತಾ ಕಲಹಾಳ, ಶ್ರೀಧರ ಹಂದಿಗೋಳ, ನೀಲಕಂಠ ಮಡಿವಾಳರ, ಮುತ್ತಣ್ಣ ಕೊಣ್ಣೂರ, ಮುತ್ತಣ್ಣ ಭಜಂತ್ರಿ, ಕೊಟ್ರಯ್ಯ, ಜ್ಯೋತಿ ಮ್ಯಾಗೇರಿ, ಮುತ್ತು ಬನ್ನಿಕೊಪ್ಪ, ಜೆ.ಎಸ್. ರಾಮಶೆಟ್ರ
ಆನಂದ ಹಕ್ಕೆನ್ನವರ, ಶಶಿಕಲಾ ಕುಲಕರ್ಣಿ, ಬಸವರಾಜ ವೈ, ಶರಣು ಪೂಜಾರ ಸ್ವರಚಿತ ಕವನ ವಾಚಿಸಿದರು.

ಗದಗ ಜಿಲ್ಲೆಯ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾಗಿ ಶರಣು ಪೂಜಾರ, ಹೊಂಬಾಳೆ, ರಾಮಶೆಟ್ಟರ, ಮುತ್ತು ಎಚ್. ಬನ್ನಿಕೊಪ್ಪ, ದೀಕ್ಷಾ ಪ್ರಮಾಣ ಪತ್ರ ವಿಚರಿಸಿದರು. ಸಾಧಕರಾದ ಸಿ.ಬಿ. ಸುಬೇದಾರ, ಎಸ್.ವಿ. ಈಟಿ, ಜಿ.ಬಿ. ಕಂಟೆನ್ನವರ, ಸುಕನ್ಯಾ ಸಾಲಿ, ತುಳಸಪ್ಪ ಯರಗಟ್ಟಿ, ಲಿಲಿತಾ ದೊಡಮನಿ, ಕರಮಡಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಬಸವರಾಜ ಕ್ಯಾರಕೊಪ್ಪ, ಕನ್ನಡ ಉಪನ್ಯಾಸಕ ಎಸ್.ಎಸ್. ಪೂಜಾರ ಇದ್ದರು.

ನರಗುಂದದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ನುಡಿವೈಭವ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕಲಾಶ್ರೀ ಹಾದಿಮನಿ ರಚಿತ ವೀರಯೋಧ ಬಸವರಾಜ ಯರಗಟ್ಟಿ ಕೃತಿ ಯನ್ನು ಬಿಡುಗಡೆ ಮಾಡಲಾಯಿತು.
ನರಗುಂದದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ನುಡಿವೈಭವ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ನೂತನ ತಾಲ್ಲೂಕು ಅಧ್ಯಕ್ಷರಿಗೆ ದೀಕ್ಷಾ ಪ್ರಮಾಣ ಪತ್ರ ವಿತರಿಸಿಗೌರವಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.