
ಗದಗ: ‘ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸುವ ಚಟುವಟಿಕೆಗಳಿಗೆ ನಮ್ಮ ದಿನಚರಿಯಲ್ಲಿ ಆದ್ಯತೆ ನೀಡಬೇಕು. ಮಕ್ಕಳ ಬಾಲ್ಯ ಈ ರೀತಿಯಾಗಿ ಇದ್ದರೆ ಮಾತ್ರ ಅವರು ಸದೃಢ ದೇಹದ ಜತೆಗೆ ಸದೃಢ ಮನಸ್ಸನ್ನೂ ಹೊಂದುತ್ತಾರೆ’ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ 14 ಮತ್ತು 17 ವಯೋಮಿತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ, ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
‘ಜಿಲ್ಲೆಯಲ್ಲಿ ಉತ್ತಮ ಕ್ರೀಡಾ ಸೌಲಭ್ಯಗಳಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು’ ಎಂದು ಹೇಳಿದರು.
‘ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ, ಪಾಲ್ಗೊಳ್ಳುವಿಕೆಯೇ ಮುಖ್ಯ. ಕ್ರೀಡೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಶಕ್ತಿ, ಉತ್ಸಾಹದ ಪ್ರತೀಕವಾಗಿರುವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಎಲ್ಲರೂ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು’ ಎಂದರು.
ಜಿಲ್ಲಾ ಕೆಡಿಪಿ ಸದಸ್ಯ ಎಸ್.ಎನ್.ಬಳ್ಳಾರಿ ಮಾತನಾಡಿ, ‘ಕ್ರೀಡಾಪಟುಗಳಿಗೆ ಪೂರಕವಾದ ವಾತಾವರಣ ಗದಗ ಜಿಲ್ಲೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆ ಹೆಚ್ಚಿನ ಸಾಧನೆ ಮಾಡಲಿ ಎಂಬುದು ಅವರ ಆಶಯವಾಗಿದೆ’ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಸವರಾಜ ಕಡೆಮನಿ, ಬಸವರಾಜ ಬಳ್ಳಾರಿ, ಬಿ.ಎಫ್.ಪೂಜಾರ, ವಿ.ಎಂ.ಹಿರೇಮಠ, ವಿ.ಎಫ್.ಕಲಕಂಬಿ, ಎಂ.ಕೆ.ಲಮಾಣಿ, ರಾಜು ಚವ್ಹಾಣ, ಶರಣಪ್ಪ ನಾವಳ್ಳಿ, ಎಲ್.ಸಿ.ಚೌಕಿಮಠ, ಎಸ್.ಡಿ.ಮುಳಗುಂದ, ರವಿರಾಜ ಪವಾರ, ವಿ.ವಿ.ನಡುವಿನಮನಿ, ಆರ್.ವಿ.ಶೆಟ್ಟೆಪ್ಪನವರ ಸೇರಿದಂತೆ ಹಲವರು ಇದ್ದರು.
ಕೆಕೆಪಿಪಿಜಿ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಎಂ.ಎಸ್. ಕುಚಬಾಳ ಕಾರ್ಯಕ್ರಮ ನಿರ್ವಹಿಸಿದರು. ಜೆ.ಬಿ. ಅಣ್ಣಿಗೇರಿ ವಂದಿಸಿದರು.
ಆಟದಲ್ಲಿ ಕ್ರೀಡಾಸ್ಫೂರ್ತಿ ಇರಲಿ: ಡಿಸಿ
‘ಜಿಲ್ಲಾ ಮಟ್ಟದ ಸ್ಪರ್ಧೆಗಳು ಯುವ ಪ್ರತಿಭೆಗಳಿಗೆ ರಾಜ್ಯ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳತ್ತ ಹೆಜ್ಜೆ ಇಡುವ ದಿಕ್ಕು ತೋರಿಸುತ್ತವೆ’ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹೇಳಿದರು. ಪ್ರತಿಯೊಬ್ಬ ಕ್ರೀಡಾಪಟುವೂ ಕ್ರೀಡಾಸ್ಪೂರ್ತಿ ಮೆರೆಯಬೇಕು. ಗೆಲ್ಲುವುದು ಗೌರವ. ಆದರೆ ಪಾಲ್ಗೊಳ್ಳುವುದು ಪ್ರೇರಣೆ ಎಂಬ ಮಾತನ್ನು ಕ್ರೀಡಾಪಟುಗಳು ಸದಾ ನೆನಪಿನಲ್ಲಿಡಬೇಕು ಎಂದರು.
ಅಥ್ಲೆಟಿಕ್ ಕ್ರೀಡೆಗಳು ನಮ್ಮ ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲ. ಮನೋಬಲ ಮತ್ತು ಧೈರ್ಯವನ್ನೂ ಪರೀಕ್ಷಿಸುತ್ತವೆ–ಸಿ.ಎನ್.ಶ್ರೀಧರ್ ಜಿಲ್ಲಾಧಿಕಾರಿ
ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೆಕು. ತೀರ್ಪುದಾರರು ಸರಿಯಾಗಿ ತೀರ್ಪು ನೀಡುವ ಮೂಲಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕುಆರ್.ಎಸ್.ಬುರಡಿ, ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.