ADVERTISEMENT

ಗದಗ: ಅಂಬೇಡ್ಕರ್‌ ಸಾಹಿತ್ಯದತ್ತ ಒಲವು, ಲಾಕ್‌ಡೌನ್‌ ನಡುವೆಯೂ ಅಚ್ಚರಿಯ ವಹಿವಾಟು

ಸತೀಶ ಬೆಳ್ಳಕ್ಕಿ
Published 13 ಜೂನ್ 2021, 19:30 IST
Last Updated 13 ಜೂನ್ 2021, 19:30 IST
ಅಂಬೇಡ್ಕರ್‌ ಸಾಹಿತ್ಯದ ಪುಸ್ತಕ ಗುಚ್ಛ
ಅಂಬೇಡ್ಕರ್‌ ಸಾಹಿತ್ಯದ ಪುಸ್ತಕ ಗುಚ್ಛ   

ಗದಗ: ಕೊರೊನಾ ಸಂಕಷ್ಟದ ಮಧ್ಯೆಯೂ ಗದುಗಿನ ಲಡಾಯಿ ಪ್ರಕಾಶನದವರು ಎರಡು ತಿಂಗಳ ಅವಧಿಯಲ್ಲಿ ₹4.50 ಲಕ್ಷ ಮೌಲ್ಯದ ಪುಸ್ತಕಗಳನ್ನು ಮಾರಾಟ ಮಾಡಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಡಾ.ಅಂಬೇಡ್ಕರ್‌ ವಿಚಾರಧಾರೆಗಳನ್ನು ಓದಿಕೊಂಡವರ ಸಂಖ್ಯೆ ಹೆಚ್ಚಿದೆ ಎಂಬುದು ಗಮನಾರ್ಹ.

ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಓದಿನ ಅಭಿರುಚಿ ಉದ್ದೀಪಿಸಲು ಇವರು ವಿಶೇಷ ಸಂದರ್ಭಗಳಲ್ಲಿ ರಿಯಾಯಿತಿ ದರದಲ್ಲಿ ‘ಪುಸ್ತಕ ಗುಚ್ಛ’ಗಳನ್ನು ಒದಗಿಸುವ ಯೋಜನೆ ಆರಂಭಿಸಿದ್ದಾರೆ. ಪುಸ್ತಕಗಳು ಹೆಚ್ಚು ಮಾರಾಟವಾಗಲು ಈ ಅಂಶವೂ ಕಾರಣ.

‘ಹಲವು ಕಾರಣಗಳಿಂದಾಗಿ ಕನ್ನಡ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆ ಆಗಿದೆ. ಪೋಷಕರಿಗೆ ಇಂಗ್ಲಿಷ್‌ ಮಾಧ್ಯಮದ ಒಲವು ಹೆಚ್ಚಾಗಿದೆ. ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಮಾತೃಭಾಷೆಯ ಜ್ಞಾನ ಲಭಿಸದಿದ್ದರೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯೂ ಬೆಳೆಯುವುದಾದರೂ ಹೇಗೆ? ಹೀಗಾಗಿ ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿ ಬೆಳೆಸಲು ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡುವ ಯೋಜನೆ ಆರಂಭಿಸಿದೆವು. ಇದು ಯುವಜನರಲ್ಲಿ ಪರಿಣಾಮ ಬೀರಿದೆ’ ಎನ್ನುತ್ತಾರೆ ಗದುಗಿನ ಲಡಾಯಿ ಪ್ರಕಾಶನದ ಪ್ರಕಾಶಕ ಬಸವರಾಜ ಸೂಳಿಬಾವಿ.

ADVERTISEMENT

ಡಾ. ಬಿ.ಆರ್‌.ಅಂಬೇಡ್ಕರ್‌ ಜಯಂತ್ಯುತ್ಸವದ ಅಂಗವಾಗಿ ಅವರ ವಿಚಾರಧಾರೆಗಳಿಗೆ ಸಂಬಂಧಿಸಿದ 22 ಪುಸ್ತಕಗಳಿರುವ ಸೆಟ್‌ ಅನ್ನು ಲಡಾಯಿ ಪ್ರಕಾಶನ ಪರಿಚಯಿಸಿತ್ತು. ಅಂತೆಯೇ, ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳಾ ವಿಚಾರಧಾರೆಗಳ ಪುಸ್ತಕ ಗುಚ್ಛ, ಬಸವ ಜಯಂತಿ, ಬುದ್ಧ ಪೂರ್ಣಿಮೆ ಸಂದರ್ಭದಲ್ಲೂ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಪುಸ್ತಕ ಗುಚ್ಛಗಳನ್ನು ಇವರು ಹೊರತಂದಿದ್ದಾರೆ.

‘ಪುಸ್ತಕ ಗುಚ್ಛ ಯೋಜನೆಯಿಂದ ವಿಶೇಷವಾಗಿ ತಳಸಮುದಾಯದವರಲ್ಲಿ ಓದಿನ ಪ್ರಮಾಣ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಪರಿಶಿಷ್ಟ ಸಮುದಾಯಕ್ಕೆ ಸೇರಿದ ಯುವಕರು ಅಂಬೇಡ್ಕರ್‌ ವಿಚಾರಧಾರೆಗಳನ್ನು ಅರಿಯಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆಳವಾದ ಅಧ್ಯಯನಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಅವರ ಓದಿನ ಹಸಿವಿನಿಂದಲೇ ನಾವು ಏಪ್ರಿಲ್‌ ಮತ್ತು ಮೇನಲ್ಲಿ 200ಕ್ಕೂ ಹೆಚ್ಚು ಸೆಟ್‌ ಪುಸ್ತಕಗಳನ್ನು ಮಾರಾಟ ಮಾಡಿದ್ದೇವೆ. ₹4.50 ಲಕ್ಷ ಮೌಲ್ಯದ ಪುಸ್ತಕಗಳು ಕೊರೊನಾ ಕಾಲದಲ್ಲೂ ಮಾರಾಟವಾಗಿರುವುದು ಭರವಸೆ ಮೂಡಿಸಿದೆ’ ಎಂದು ಬಸವರಾಜ ಸೂಳಿಬಾವಿ ಹೇಳಿದರು.

*
ಪರಿಶಿಷ್ಟ ಸಮುದಾಯದ ಯುವಜನರಲ್ಲಿ ಓದಿನ ಹಸಿವು ಮೂಡಿದ್ದು, ಮುಂದಿನ ದಿನಗಳಲ್ಲಿ ಸಾಮಾಜಿಕ, ಆರ್ಥಿಕ,ರಾಜಕೀಯ ಬದಲಾವಣೆಗೆ ಕಾರಣವಾಗಲಿದೆ.
-ಬಸವರಾಜ ಸೂಳಿಬಾವಿ, ಪ್ರಕಾಶಕರು, ಲಡಾಯಿ ಪ್ರಕಾಶನ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.