ADVERTISEMENT

ಮನೆಯಲ್ಲಿ ವಿಶ್ರಾಂತಿ; ಮತದಾರನಿಗೆ ಧನ್ಯವಾದ

ಚುನಾವಣೆ ಹಿನ್ನೆಲೆ ಮೆಲುಕು; ಸೋಲು ಗೆಲುವಿನ ಲೆಕ್ಕಾಚಾರದ ಚರ್ಚೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 19:47 IST
Last Updated 24 ಏಪ್ರಿಲ್ 2019, 19:47 IST
ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌ ಪಾಟೀಲ ಅವರು ಬುಧವಾರ, ರಾಜಕೀಯ ಜಂಜಾಟದಿಂದ ದೂರ ಇದ್ದು, ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದರು
ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌ ಪಾಟೀಲ ಅವರು ಬುಧವಾರ, ರಾಜಕೀಯ ಜಂಜಾಟದಿಂದ ದೂರ ಇದ್ದು, ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದರು   

ಗದಗ: ಆರೋಪ, ಪ್ರತ್ಯಾರೋಪ, ಜಯಘೋಷ, ಕಾರ್ಯಕರ್ತರ ಗದ್ದಲ ಎಲ್ಲದಕ್ಕೂ ಬುಧವಾರ ತಾತ್ಕಾಲಿಕ ವಿರಾಮ. ಕಳೆದ ಆರು ವಾರಗಳಿಂದ ನೆತ್ತಿ ಸುಡುವ ಕೆಂಡದಂತಹ ಬಿಸಿಲನ್ನೂ ಲೆಕ್ಕಿಸದೆ ಚುನಾವಣಾ ಕಣದಲ್ಲಿ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿದ್ದ ಅಭ್ಯರ್ಥಿಗಳು, ಕಾರ್ಯಕರ್ತರು ಬುಧವಾರ ರಾಜಕೀಯ ಬದಿಗಿರಿಸಿ, ಸಂಪೂರ್ಣ ವಿಶ್ರಾಂತಿ ಪಡೆದರು. ಒತ್ತಡ ಕಡಿಮೆ ಮಾಡಿಕೊಂಡರು.

ಒಂದೂವರೆ ತಿಂಗಳಿನಿಂದ ಚುನಾವಣೆ ಪ್ರಚಾರದ ಭರಾಟೆ, ಹಳ್ಳಿಗಳ ಸುತ್ತಾಟ, ಕಾರ್ಯಕರ್ತರ ಭೇಟಿ, ಮತದಾರರ ಮನವೊಲಿಕೆಯಲ್ಲಿ ಮಗ್ನರಾಗಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌ ಪಾಟೀಲ ಅವರು ಬುಧವಾರ ಮನೆಯಲ್ಲಿ ತುಸು ವಿಶ್ರಾಂತಿ ಪಡೆದರು. ಹಾವೇರಿ ಜಿಲ್ಲೆಯ ಮತದಾರರಿಗೆ ಧನ್ಯವಾದ ಸಲ್ಲಿಸಲು ಅಲ್ಲಿಗೆ ಹೋಗಿದ್ದ ಅವರು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಗೆ ಮರಳಿದರು. ಅವರ ಕುಟುಂಬದಲ್ಲಿ ಸಂಬಂಧಿಕರು ಸೇರಿದ್ದರು. ರಾಜಕೀಯ ಜಂಜಾಟದಿಂದ ದೂರ ಇದ್ದು, ಮೊಮ್ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಚುನಾವಣಾ ಒತ್ತಡ ಕಡಿಮೆ ಮಾಡಿಕೊಂಡರು. ಬಂಧುಗಳೊಡನೆ ಸೇರಿ ಉಪಾಹಾರ ಸೇವಿಸಿದರು.

ಪಾರ್ಲಿಮೆಂಟ್‌ಗೆ ಯಾವಾಗ ಹೋಗ್ತೀರಾ, ದೆಹಲಿಗೆ ಹೋಗೋದು ಯಾವಾಗ, ಪರಿಸರ ಮಾಲಿನ್ಯ ನಿಯಂತ್ರಣ ಮಾಡಲು ಏನು ಮಾಡಬೇಕು ಸೇರಿದಂತೆ ಮೊಮ್ಮಕ್ಕಳಿಂದ ತೂರಿಬಂದ ಹಲವು ಪ್ರಶ್ನೆಗಳಿಗೆ ಡಿ.ಆರ್‌ ಸಹನೆಯಿಂದಲೇ ಉತ್ತರಿಸಿದರು.‘ಸಂಸತ್ತು ಎಂದರೆ ದೇಶದ ದೇವಸ್ಥಾನ ಇದ್ದಂತೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಂಸದರು ಇರುತ್ತಾರೆ. ಪರಿಸರ ಮಾಲಿನ್ಯ ನಿಯಂತ್ರಣವನ್ನು ಸಂಸತ್ತಿನಿಂದಲೇ ಮಾಡಬೇಕೆಂದಿಲ್ಲ. ಇದು ಸಮುದಾಯದ ಸಹಭಾಗಿತ್ವದಲ್ಲಿ ನಡೆಯಬೇಕಾದ ಕೆಲಸ’ ಎಂದು ಮಕ್ಕಳಿಗೆ ವಿವರಿಸಿದರು.

ADVERTISEMENT

ಕುಟುಂಬ ಸದಸ್ಯರ ಜತೆಗೆ ಕೆಲ ಕಾಲ ಕಳೆದ ಅವರು ಬಳಿಕ, ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಬಂದು ಸ್ವಲ್ಪ ಹೊತ್ತು ಅಲ್ಲಿದ್ದರು. ನಂತರ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಭೇಟಿಯಾಗಿ ಚುನಾವಣೆ ಹಿನ್ನೆಲೆ ಮೆಲುಕು ಹಾಕಿದರು. ಸೋಲು ಗೆಲುವಿನ ಲೆಕ್ಕಾಚಾರದ ಚರ್ಚೆಯೂ ನಡೆಯಿತು.

ಮೇ 23ರ ಫಲಿತಾಂಶದ ಕುರಿತು ಸುದ್ದಿಗಾರು ಕೇಳಿದಾಗ, ‘ಈ ಬಾರಿ ನಮ್ಮ ನಿರೀಕ್ಷೆಯಂತೆಯೇ ಚುನಾವಣೆ ನಡೆದಿದೆ. ಇದೇ ಮೊದಲ ಬಾರಿಗೆ ನಮ್ಮ ಕಟುಂಬದ ಎಲ್ಲ ಸದಸ್ಯರು, ಮತದಾರರ ಮನೆ ಬಾಗಿ ಹೋಗಿ ಮತಯಾಚನೆ ಮಾಡಿದ್ದಾರೆ. ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಚುನಾವಣೆ ಕುಟುಂಬದ ಎಲ್ಲ ಸದಸ್ಯರಿಗೂ ಸಂತೋಷ ತಂದಿದೆ.ಖಂಡಿತ ಗೆಲುವಿನ ವಿಶ್ವಾಸ ಇದೆ’ ಎಂದರು.

ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು, ಮತದಾನದ ಬಳಿಕ ಮಂಗಳವಾರ ಸಂಜೆಯೇ ಗದುಗಿನಲ್ಲಿರುವ ಸಂಸದರ ಕಚೇರಿಗೆ ಬಂದು ಅಲ್ಲಿ ಪಕ್ಷದ ಜಿಲ್ಲಾ ಘಟಕದ ಸದಸ್ಯರ ಜತೆಗೆ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.