ಗದಗ: ‘ತತ್ವಜ್ಞಾನಿ, ಶ್ರೇಷ್ಠ ಶಿಕ್ಷಕ, ರಾಷ್ಟಪತಿಯಾಗಿ ಡಾ. ರಾಧಾಕೃಷ್ಣನ್ ಅವರ ಶಿಸ್ತು, ಶ್ರದ್ದೆ ನಮಗೆಲ್ಲ ಮಾದರಿಯಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ದೇಶದ ಭವಿಷ್ಯ ನಾಲ್ಕು ಕೊಠಡಿಗಳ ಒಳಗೆ ನಿರ್ಮಾಣ ಆಗುತ್ತದೆ. ತಾಯಿ ಮಗುವಿಗೆ ಜನ್ಮ ನಿಡುತ್ತಾಳೆ. ಆ ಮಗುವಿನ ಜೀವನ ಉನ್ನತ ಮಟ್ಟದಲ್ಲಿ ಸಾಗಲು ಶಿಕ್ಷಕರ ಶ್ರಮ ಅಡಗಿರುತ್ತದೆ’ ಎಂದರು.
ಕೊಟಾರಿ ಕಮಿಷನ್ ಪ್ರಕಾರ ತ್ರಿಭಾಷಾ ಸೂತ್ರ ಇರಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಇದನ್ನೇ ಹೇಳುತ್ತದೆ. ಇಷ್ಟೆಲ್ಲಾ ಇರುವಾಗ ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಬೇಕೇ? ದ್ವಿಭಾಷಾ ಸೂತ್ರ ಜಾರಿ ತರುವ ನಿರ್ಧಾರವನ್ನು ರಾಜ್ಯ ಸರ್ಕಾರ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ‘ಗದಗ ಶೈಕ್ಷಣಿಕ ಪ್ರಗತಿಗೆ ಒತ್ತು ಕೊಡುವ ಜಿಲ್ಲೆಯಾಗಿದೆ. ಆದರೂ ಫಲಿತಾಂಶ ಸುಧಾರಣೆ ಅಷ್ಟೇನು ಸಮಾಧಾನಕರವಿಲ್ಲ. ಇನ್ನು ಮುಂದಾದರೂ ಫಲಿತಾಂಶ ಸುಧಾರಣೆಗೆ ಶ್ರಮಿಸಬೇಕಿದೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಸಹ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ಶಾಲೆಗಳ ಕಟ್ಟಡ, ಶೌಚಾಲಯ ದುರಸ್ತಿಗೆ ಬೇಕಿರುವ ಅನುದಾನ ಬಿಡುಗಡೆಗೆ ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷಕರಿಗೆ ಇರುವ ಕೊರತೆಗಳ ಬಗ್ಗೆ ಸಹ ಸಮಾಲೋಚನೆ ಮಾಡಲಾಗುತ್ತಿದೆ ಎಂದರು.
ಕೆಂದ್ರದಂತೆ, ರಾಜ್ಯ ಶಿಕ್ಷಣ ನೀತಿಯಲ್ಲೂ ಅಷ್ಟೇನು ಬದಲಾವಣೆ ಇರದು. ಮಕ್ಕಳ ಶಿಕ್ಷಣಕ್ಕೆ ರಾಜ್ಯ ಶಿಕ್ಷಣ ನೀತಿ ಸಹ ಹೆಚ್ಚು ಸಹಕಾರಿಯಾಗಲಿದೆ. ಈ ವರ್ಷ ಪಬ್ಲಿಕ್ ಶಾಲೆ ಆರಂಭಕ್ಕೆ ಆರ್ಥಿಕ ಇಲಾಖೆ ಅನುಮೋದನೆ ಪಡೆದಿದೆ. ಶೀಘ್ರದಲ್ಲೇ ಇನ್ನಷ್ಟು ಪಬ್ಲಿಕ್ ಶಾಲೆ ಆರಂಭಿಸಲು ಕ್ರಮ ವಹಿಸಲಾಗುವುದು ಎಂದರು.
18 ಮಂದಿ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿವೃತ್ತ ಶಿಕ್ಷಕ ಎಸ್.ಎನ್.ಬಳ್ಳಾರಿ, ಎಡಿಸಿ ಡಾ. ದುರಗೇಶ್ ಕೆ.ಆರ್., ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಳ್ಳಾರಿ ಸೇರಿದಂತೆ ಹಲವರು ಇದ್ದರು.
ದೇಶದಲ್ಲಿ ಉನ್ನತಮಟ್ಟದ ಗೌರವಯುತ ಹುದ್ದೆ ಎಂದರೆ ಅದು ಶಿಕ್ಷಕ ವೃತ್ತಿ. ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕ ಪಾತ್ರ ಮಹತ್ವದ್ದಾಗಿದೆಡಾ. ಚಂದ್ರು ಲಮಾಣಿ ಶಾಸಕ
ರಾಜ್ಯ ಪುರಸ್ಕೃತ ಶಿಕ್ಷಕ ಬಿ.ಜಿ.ಅಣ್ಣಿಗೇರಿ ಕೂಡ ಉತ್ತಮ ಶಿಕ್ಷಕರಾಗಿದ್ದರು. ಅವರ ಹೆಸರನ್ನು ನಗರದ ಒಂದು ಉದ್ಯಾನಕ್ಕೆ ನಾಮಕರಣ ಮಾಡಲಾಗಿದೆಬಿ.ಬಿ.ಅಸೂಟಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ
ಒಬ್ಬ ಒಳ್ಳೆ ಶಿಕ್ಷಕ ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಶಿಕ್ಷಕರಾದವರು ತಮ್ಮ ಕರ್ತವ್ಯ ಜವಾಬ್ದಾರಿಗಳನ್ನು ಅರಿತು ಪ್ರಾಮಾಣಿಕವಾಗಿ ಪಾಠ ಮಾಡಬೇಕುಆರ್.ಎಸ್.ಬುರಡಿ ಡಿಡಿಪಿಐ
‘ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು. ಆಗ ಮಾತ್ರ ಗುರಿ ಸಾಧನೆ ಸಾಧ್ಯ’ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹೇಳಿದರು. ‘ಶಿಕ್ಷಕರು ಇಲ್ಲದ ಸಮಾಜ ಪರಿಪೂರ್ಣ ಆಗಲಾರದು. ಹಿಂದೆ ಮಠಮಾನ್ಯಗಳಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಶಿಕ್ಷಣದ ನೀತಿಗಳನ್ನು ಜಾರಿ ತರುವ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ನಮ್ಮನ್ನು ತಿದ್ದಿ ತೀಡಿ ಶಿಲ್ಪಿಗಳಾಗಿಸಿದವರು ಶಿಕ್ಷಕರು. ಯಾವುದೇ ಸಂದರ್ಭದಲ್ಲಿ ನಮಗೆ ಕಲಿಸಿದ ಶಿಕ್ಷಕರು ಕಂಡ ತಕ್ಷಣ ನಮಸ್ಕರಿಸುತ್ತೇವೆ. ಅದು ನಮಗೆ ಅವರ ಮೇಲಿರುವ ಗೌರವ ಜಾಗೃತ ಮನಸ್ಸಿನಿಂದ ಬರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.