ಲಕ್ಷ್ಮೇಶ್ವರ: ತಾಲ್ಲೂಕಿನ ಬಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಮಳೆ ನೀರು ಹತ್ತಾರು ಮನೆಗಳಿಗೆ ನುಗ್ಗಿ ದೊಡ್ಡ ಅವಾಂತರ ಸೃಷ್ಟಿಸುತ್ತಿದೆ.
ಕುಂದ್ರಳ್ಳಿಯಿಂದ ನಾದಿಗಟ್ಟಿ ಗ್ರಾಮಕ್ಕೆ ತೆರಳುವ ರಸ್ತೆಯ ಮೇಲ್ಭಾಗದಲ್ಲಿರುವ 40-50 ಎಕರೆ ಹೊಲಗಳಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಆದರೆ, ನೀರು ಸರಾಗವಾಗಿ ಮುಂದೆ ಹರಿದು ಹೋಗಲು ರಾಜಕಾಲುವೆ ಇಲ್ಲ. ಹೀಗಾಗಿ ಅದು ಸರ್ಕಾರಿ ಪ್ರಾಥಮಿಕ ಶಾಲೆಯ ಮೂಲಕ ಗ್ರಾಮದೊಳಗೆ ನುಗ್ಗುತ್ತಿದೆ.
ಇನ್ನು ಸ್ವಲ್ಪ ಮೇಲ್ಭಾಗದಲ್ಲಿರುವ ನಾದಿಗಟ್ಟಿ ಹಾಗೂ ಕುಂದ್ರಳ್ಳಿ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಆಗಾಗ ನಿರ್ಮಾಣ ಮಾಡಲಾಗಿದೆ. ರಸ್ತೆ ನಿರ್ಮಿಸುವಾಗ ದೊಡ್ಡ ಚರಂಡಿಗಳನ್ನು ಕಟ್ಟಬೇಕಾಗಿತ್ತು. ಆದರೆ ಕೆಲವು ಕಡೆ ಚರಂಡಿಗಳನ್ನೇ ನಿರ್ಮಿಸಿಲ್ಲ. ಅಲ್ಲದೆ ಇರುವ ಚರಂಡಿಗಳು ಅತಿಕ್ರಮಣಗೊಂಡು ಮುಚ್ಚಿಕೊಂಡಿವೆ. ಈ ಕಾರಣಕ್ಕಾಗಿ ಸಾಕಷ್ಟು ನೀರು ಊರೊಳಗೆ ನುಗ್ಗಿ ಬರುತ್ತಿದೆ.
ಎರಡು ವಾರಗಳ ಹಿಂದೆ ರಾತ್ರಿ ಸುರಿದ ಭಾರಿ ಮಳೆ ಗ್ರಾಮದಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿತ್ತು. ಹತ್ತಾರು ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಅದರಲ್ಲೂ ಹೂಗಾರ ಮನೆಗಳು ಇರುವ ಭಾಗದಲ್ಲಿ ಅಪಾರ ಪ್ರಮಾಣದ ನೀರು ನುಗ್ಗುತ್ತದೆ. ಹೀಗಾಗಿ ಈ ಭಾಗದಲ್ಲಿನ ಎಲ್ಲ ಮನೆಗಳಿಗೂ ನೀರು ನುಗ್ಗುವುದು ಸಾಮಾನ್ಯ ಎಂಬಂತಾಗಿದೆ.
ಘಟನೆ ನಂತರ ತಹಶೀಲ್ದಾರರು ತಮ್ಮ ಸಿಬ್ಬಂದಿಯೊಂದಿಗೆ ತಡರಾತ್ರಿ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರಲ್ಲದೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದರು. ಆದರೂ, ಏನೂ ಪ್ರಯೋಜನ ಆಗಿಲ್ಲ.
‘ಕುಂದ್ರಳ್ಳಿ ಗ್ರಾಮದಲ್ಲಿ ಚರಂಡಿ ನಿರ್ಮಿಸಲು ಜಾಗೆಯ ಕೊರತೆ ಇದೆ. ಆದರೂ ಸಹ ದಿಢೀರ್ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗದಂತೆ ಪರ್ಯಾಯವಾಗಿ ಯಾವ ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ ವರದಿ ನೀಡಲು ಜಿಲ್ಲಾ ಪಂಚಾಯಿತಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ವರದಿ ಬಂದ ನಂತರ ಅದನ್ನು ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಇಒ ಕೃಷ್ಣಪ್ಪ ಧರ್ಮರ ತಿಳಿಸಿದ್ದಾರೆ.
ಪ್ರತಿವರ್ಷ ಮಳೆಗಾಲದಾಗ ನೀರು ನಮ್ಮ ಮನಿ ಒಳಗ ಬರತೈತಿ. ನೀರ ಬರಲಾರದಂಗ ವ್ಯವಸ್ಥಾ ಮಾಡ್ರೀ ಅಂದ್ರೂ ನಮ್ಮ ಕಡೆ ಯಾರೂ ತಿರುಗಿ ನೋಡವಲ್ರು-ನೀಲವ್ವ ಫಕ್ಕೀರೇಶ ಹೂಗಾರ ಗ್ರಾಮಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.