ಮುಂಡರಗಿ: ‘ರಾಜ್ಯದಲ್ಲಿ ನೂರು ವರ್ಷ ಪೂರೈಸಿದ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಸರ್ಕಾರ ವಿಶೇಷ ಅನುದಾನ ನೀಡುತ್ತಿರುವುದು ಸ್ವಾಗತಾರ್ಹವಾಗಿದ್ದು, ಅದೇ ರೀತಿ ನೂರು ವರ್ಷ ಪೂರೈಸಿದ ಅನುದಾನಿತ ಶಾಲಾ, ಕಾಲೇಜುಗಳಿಗೂ ಸರ್ಕಾರ ವಿಶೇಷ ಅನುದಾನ ನೀಡಬೇಕು’ ಎಂದು ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ನೂರು ವರ್ಷಗಳ ಹಿಂದೆ ಸರ್ಕಾರಿ ಶಾಲಾ, ಕಾಲೇಜುಗಳಿಲ್ಲದ ಸಂದರ್ಭದಲ್ಲಿ ಈ ನಾಡಿನ ವಿರಕ್ತ ಮಠಾಧೀಶರು, ಸ್ವಾಮೀಜಿಗಳು ನಾಡಿನ ತುಂಬಾ ಶಾಲಾ ಕಾಲೇಜುಗಳನ್ನು ತೆರೆದು ಎಲ್ಲ ವರ್ಗ ಹಾಗೂ ಎಲ್ಲ ಧರ್ಮಗಳ ಬಡ ಮಕ್ಕಳಿಗೆ ಉಚಿತವಾಗಿ ಅನ್ನ, ಆಶ್ರಯ ಹಾಗೂ ವಿದ್ಯಾದಾನ ಮಾಡಿದ್ದಾರೆ. ಅಂತಹ ನೂರಾರು ಶಿಕ್ಷಣ ಸಂಸ್ಥೆಗಳು ನೂರಾರು ವರ್ಷಗಳ ಕಾಲ ಈ ನಾಡಿನ ಬಡ ಜನರ ಮಕ್ಕಳ ವಿದ್ಯಾಭ್ಯಾಸದ ಕೊರತೆಯನ್ನು ನೀಗಿಸಿವೆ ಎಂದು ತಿಳಿಸಿದರು.
ಈ ನಾಡಿನ ಮಠ, ಮಾನ್ಯಗಳ ಉದಾರ ಮನೋಭಾವದ ಕಾರಣದಿಂದ ಇಂದು ನಮ್ಮ ರಾಜ್ಯವು ಭಾರತದಲ್ಲಿ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣದ ಮಹತ್ವ ಅರಿತ ನಮ್ಮ ಸ್ವಾಮೀಜಿಗಳು ಧರ್ಮ ಪ್ರಚಾರದ ಜೊತೆಗೆ ಶಿಕ್ಷಣ ನೀಡುಲು ಶ್ರಮಿಸಿದರು. ಅವರ ಶ್ರಮದ ಫಲವಾಗಿ ಇಂದು ನಾಡಿನ ಕೋಟ್ಯಂತರ ಜನರು ಶಿಕ್ಷಣವಂತರಾಗಿದ್ದಾರೆ ಎಂದು ತಿಳಿಸಿದರು.
ಆಪತ್ ಕಾಲದಲ್ಲಿ ಹಲವು ಮಠಾಧೀಶರು ತಮ್ಮ ಮಠದ ಆಸ್ತಿಯನ್ನು ಮಾರಾಟ ಮಾಡಿ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿದ್ದಾರೆ. ಆದ್ದರಿಂದ ಸರ್ಕಾರ ನೂರು ವರ್ಷ ಪೂರೈಸಿದ ಖಾಸಗಿ ಶಾಲಾ, ಕಾಲೇಜುಗಳಿಗೂ ವಿಶೇಷ ಅನುದಾನ ನೀಡಬೇಕು. ಆ ಮೂಲಕ ಅವುಗಳ ಅಭಿವೃದ್ಧಿಗೆ ನೆರವಾಗಬೇಕು ಎಂದು ಒತ್ತಾಯಿಸಿದ್ದಾರೆ.
ವಿದ್ಯಾ ಸಮಿತಿಯ ಪದಾಧಿಕಾರಿಗಳಾದ ಆರ್.ಆರ್.ಹೆಗ್ಗಡಾಳ, ಕೆ.ವಿ.ಹಂಚಿನಾಳ, ಎಂ.ಎಸ್.ಶಿವಶೆಟ್ಟಿ, ಯು.ಸಿ.ಹಂಪಿಮಠ. ಸಿದ್ದಲಿಂಗಯ್ಯ ಹಿರೇಮಠ, ವೀರನಗೌಡ ಗುಡದಪ್ಪನವರ, ಜಯಣ್ಣ ಗುಜ್ಜರ, ಆರ್.ಎಸ್.ಪೋಲೀಸ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.