
ಹಜರತ್ ಮಹಮದ್ ಪೈಗಂಬರ್ ಅವರ ಜಯಂತಿಯ ಅಂಗವಾಗಿ ಮುಂಡರಗಿಯಲ್ಲಿ ಹಮ್ಮಿಕೊಂಡಿದ್ದ ಅದ್ಧೂರಿ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು
ಮುಂಡರಗಿ: 'ನಾವೆಲ್ಲ ನಿತ್ಯ ಹಲವು ಒತ್ತಡಗಳಲ್ಲಿ ಬದುಕುತ್ತಿದ್ದು, ಬದುಕಿನ ಜಂಜಾಟಗಳಲ್ಲಿ ಭಗವಂತನನ್ನು ಮರೆಯುತ್ತಿದ್ದೇವೆ. ಹೀಗಾಗಿ ಜಗತ್ತಿನೆಲ್ಲಡೆ ಅಶಾಂತಿ ಮೂಡುವಂತಾಗಿದೆ' ಎಂದು ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮೀಜಿ ತಿಳಿಸಿದರು.
ಹಜರತ್ ಮಹಮ್ಮದ್ ಪೈಗಂಬರ್ ಅವರ ಜಯಂತಿಯ ಅಂಗವಾಗಿ ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಜಾತಿಗಳ ಮಧ್ಯದಲಿ ನಾವು ಸೃಷ್ಟಿಸಿಕೊಂಡಿರುವ ಗೊಡೆಗಳು ನಮ್ಮನ್ನು ಬೇರ್ಪಡಿಸುತ್ತಲಿವೆ. ಆದ್ದರಿಂದ ನಾವೆಲ್ಲ ಜಾತಿ ಗೋಡೆಗಳನ್ನು ಕಿತ್ತೊಗೆದು ಎಲ್ಲರು ಸಹೋದರರಂತೆ ಸೌಹಾರ್ದದಿಂದ ಬದುಕಬೇಕು ಎಂದು ಸಲಹೆ ನೀಡಿದರು.
ಹಜರತ್ ಸೈಯದ್ ಷಾ ಮುಸ್ತಾಪಾ ಖಾದ್ರಿ ಮಾತನಾಡಿ, ಇಸ್ಲಾಂ ಧರ್ಮಕ್ಕೆ ತುಂಬಾ ಪ್ರಾಚೀನ ಇತಿಹಾಸವಿದ್ದು, ಅದು ಎಲ್ಲರನ್ನು ಸರಿದಾರಿಯಲ್ಲಿ ಸಾಗುವಂತೆ ಪ್ರೇರೇಪಿಸುತ್ತದೆ. ಸದ್ಗುಣಗಳುಳ್ಳವನೇ ಪರಮಾತ್ಮ ಎನ್ನುವುದನ್ನು ಇಸ್ಲಾಂ ಬೋಧಿಸುತ್ತದೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.
ಎಚ್.ಎಂ.ತಳಗಡೆ ಅವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮುಖಂಡರಾದ ನಬಿಸಾಬ್ ಕೆಲೂರ, ಕೆ.ವಿ.ಹಂಚಿನಾಳ, ಡಿ.ಡಿ.ಮೋರನಾಳ, ಎಸ್.ಡಿ.ಮಕಾಂದಾರ, ಡಿ.ಎಂ.ಕಾತರಕಿ, ಶಿವಪ್ಪ ಚಿಕ್ಕಣ್ಣವರ, ರಾಜಾಭಕ್ಷಿ ಬೆಟಗೇರಿ, ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ಮೈಲಾರೆಪ್ಪ ಕಲಕೇರಿ, ನಾಗರಾಜ ಕೊರ್ಲಹಳ್ಳಿ, ಡಿ.ಜಿ.ಪೂಜಾರ, ನಿಂಗಪ್ಪ ಹಾಲಿನವರ, ಎಚ್.ಡಿ.ಪೂಜಾರ, ಬೂದಪ್ಪ ಸಂಶಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.