ರೋಣ: ‘ತಾಲ್ಲೂಕಿನ ಯಾವುದೇ ಬಡ ಕುಟುಂಬವೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಹೊರ ಉಳಿಯಬಾರದು’ ಎಂದು ಗದಗ ಜಿಲ್ಲಾ ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ ಹೇಳಿದರು.
ತಾಲ್ಲೂಕಿನ ಹಿರೇಹಾಳ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು.
ಪಂಚ ಉಚಿತ ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರ ಜಾರಿಗೆ ತಂದ ಕ್ರಾಂತಿಕಾರಕ ಯೋಜನೆಗಳಾಗಿವೆ. ಗೃಹಲಕ್ಷ್ಮೀ ಯೋಜನೆಯಿಂದ ಯಾವುದೇ ಕುಟುಂಬ ವಂಚಿತವಾಗಬಾರದು. ಮನೆ ಯಜಮಾನಿ ನಿಧನವಾಗಿದ್ದರೆ ಅಂತಹ ಪ್ರಕರಣಗಳನ್ನು ಗುರುತಿಸಿ ಹೆಸರು ಬದಲಾಯಿಸಿ ಯೋಜನೆ ದೊರೆಯುವಂತೆ ಮಾಡಬೇಕು. ಪ್ರತಿ ಮನೆಮನೆಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಸರ್ವೆ ಮಾಡಿಸುವುದು ಕಡ್ಡಾಯವಾಗಿದ್ದು, ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು’ ಎಂದರು.
‘ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡದಂತೆ ತಡೆಹಿಡಿಯಬೇಕು. ಗೃಹ ಜ್ಯೋತಿ ಹಾಗೂ ಯುವ ನಿಧಿ ಯೋಜನೆ ಮತ್ತು ಶಕ್ತಿ ಯೋಜನೆ, ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಶಕ್ತಿ ಯೋಜನೆಯಿಂದ ರಾಜ್ಯದ ಹೆಚ್ಚಿನ ಮಹಿಳೆಯರು ಅನುಕೂಲ ಪಡೆದಿದ್ದು ಬಸ್ ನಿಲ್ದಾಣಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಬೇಕು. ಗ್ಯಾರಂಟಿ ಯೋಜನೆಗಳ ಪ್ರತಿಶತ ನೂರರಷ್ಟು ಗುರಿ ಸಾಧನೆ ಮಾಡಲು ಎಲ್ಲರೂ ಶ್ರಮಿಸಬೇಕು‘ ಎಂದು ತಿಳಿಸಿದರು.
ಸಭೆಯಲ್ಲಿ ರೋಣ ತಾಲ್ಲೂಕು ಪಂಚ ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಪರಶುರಾಮಪ್ಪ ಅಳಗವಾಡಿ, ತಾಲ್ಲೂಕು ಸಮಿತಿ ಸದಸ್ಯರಾದ ಶಫಿಕ ಮೂಗನೂರ, ಬಿ.ಎಸ್.ರೆಡ್ಡೇರ,ಸಂಗು ನವಲಗುಂದ, ಮೇಘರಾಜ ಬಾವಿ, ಸಿದ್ದಪ್ಪ ಯಾಳಗಿ, ಹನುಮಂತಪ್ಪ ಸ್ವಾಲದ,ನಾಜಬೇಗಂ ಎಲಿಗಾರ, ಬಸವರಾಜ ತಳವಾರ, ಸುರೇಶ ರೆಡ್ಡೇರ, ಯಲ್ಲಪ್ಪ ಕಿರೇಸೂರ, ಬಸವರಾಜ ಜಗ್ಗಲ, ಶಿವಪ್ಪ ಗಾಣಿಗೇರ, ಗೀತಾ ಕೊಪ್ಪದ, ಶರಣಪ್ಪ ಕುರಿಯವರ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.