ADVERTISEMENT

ಸಾಧನೆಯ ಹಂಬಲದೊಂದಿಗೆ ಅಂಗಣಕ್ಕಿಳಿಯಿರಿ: ಶಾಸಕ ಜಿ.ಎಸ್. ಪಾಟೀಲ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 14:49 IST
Last Updated 2 ಆಗಸ್ಟ್ 2024, 14:49 IST
ಗಜೇಂದ್ರಗಡದ ಶ್ರೀ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ನಡೆದ ತಾಲ್ಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದಲ್ಲಿ ಶಾಸಕ ಜಿ.ಎಸ್.‌ ಪಾಟೀಲ ಕ್ರೀಡಾ ಜ್ಯೋತಿ ಸ್ವೀಕರಿಸಿದರು
ಗಜೇಂದ್ರಗಡದ ಶ್ರೀ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ನಡೆದ ತಾಲ್ಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದಲ್ಲಿ ಶಾಸಕ ಜಿ.ಎಸ್.‌ ಪಾಟೀಲ ಕ್ರೀಡಾ ಜ್ಯೋತಿ ಸ್ವೀಕರಿಸಿದರು   

ಗಜೇಂದ್ರಗಡ: ‘ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಹಂಬಲದೊಂದಿಗೆ ಕ್ರೀಡೆಗಳಲ್ಲಿ ಸ್ಪರ್ಧಿಸಬೇಕು’ ಎಂದು ಶಾಸಕ ಜಿ.ಎಸ್.‌ ಪಾಟೀಲ ಹೇಳಿದರು.

ಪಟ್ಟಣದ ಸಮೀಪದ ಪುರ್ತಗೇರಿ ಕ್ರಾಸ್‌ನಲ್ಲಿರುವ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆಡದ 2024-25ನೇ ಸಾಲಿನ ಗಜೇಂದ್ರಗಡ ತಾಲ್ಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ. ಕ್ರೀಡೆಯಲ್ಲಿ ಜಾತಿ, ಧರ್ಮ ಭೇದವಿಲ್ಲ. ಸಾಮರಸ್ಯ, ಸಹಬಾಳ್ವೆಯಿಂದ ಬಾಳಲು ಕ್ರೀಡೆಗಳು ಸಹಕಾರಿ’ ಎಂದರು.

ADVERTISEMENT

ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಮುಪ್ಪಿನ ಬಸವಲಿಂಗ ಶ್ರೀ, ‘ದೈಹಿಕ ಚಟುವಟಿಕೆಗಳು ಇಲ್ಲದಿದ್ದರೆ ಜನರು ರೋಗಿಗಳಾಗುತ್ತಾರೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ವ್ಯಾಯಾಮವಾಗುತ್ತದೆ’ ಎಂದರು.

ಡಿಡಿಪಿಯು ಜಿ.ಎನ್.‌ ಕುರ್ತಕೋಟಿ ಮಾತನಾಡಿ, ‘ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಈಗಾಗಲೇ ಅನೇಕ ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಉತ್ತಮ ಫಲಿತಾಂಶ ದಾಖಲಿಸಲು ಸಾಂಘಿಕ ಪ್ರಯತ್ನ ಮಾಡಲಾಗುವುದು’ ಎಂದರು.

ಗಜೇಂದ್ರಗಡ ತಾಲ್ಲೂಕಿನ 14 ಪಿಯು ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು, ತರಬೇತುದಾರರು, 20ಕ್ಕೂ ಹೆಚ್ಚು ನಿರ್ಣಾಯಕರು ಭಾಗವಹಿಸಿದ್ದರು. ಡಿಡಿಪಿಯು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಪಿಯು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ವಿ.ವಿ. ವಸ್ತ್ರದ, ಶೈಕ್ಷಣಿಕ ಸಲಹೆಗಾರ ಬಿ.ಎಸ್.‌ ಗೌಡರ, ಗಜೇಂದ್ರಗಡ-ಉಣಚಗೇರಿ ವೀರಶೈವ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಎಪಿಎಂಸಿ ಮಾಜಿ ಅಧ್ಯಕ್ಷ ವೀರಣ್ಣ ಶೆಟ್ಟರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹುಲಿಗವ್ವ ಸಣ್ಣಕ್ಕಿ, ಪಿಎಸ್‌ಐ ಸೋಮನಗೌಡ ಗೌಡ್ರ, ಪ್ರಾಚಾರ್ಯರಾದ ವಸಂತರಾವ್ ಗಾರಗಿ, ವೈ.ಸಿ. ಪಾಟೀಲ, ಎ.ಪಿ. ಗಾಣಗೇರ, ಬಿ.ಎಸ್.‌ ಹಿರೇಮಠ, ಆರ್.‌ಎಸ್.‌ ಮರಾಠಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.