ಶಿರಹಟ್ಟಿ: ಪಟ್ಟಣದ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಅವರ ನಕಲಿ ಫೇಸ್‌ಬುಕ್ ಖಾತೆ ತೆರೆದು ಅಶ್ಲೀಲ ವಿಡಿಯೊ ಪೋಸ್ಟ್ ಮಾಡಿದವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸ್ತುತ ವಿಷಯ ಕುರಿತು ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಠದ ಆಡಳಿತಾಧಿಕಾರಿ ಬಿ.ಎಸ್. ಹಿರೇಮಠ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೂಜ್ಯರ, ರಾಜ್ಯಪಾಲರ, ಗಣ್ಯರ ತೇಜೋವಧೆ ಮಾಡಲು ಹಾಗೂ ದುಡ್ಡಿನ ದುರಾಸೆಗೆ ನಕಲಿ ಫೇಸ್ ಬುಕ್ ಖಾತೆ ತೆರೆದು ಅನುಚಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸುವ ಸುದ್ದಿ ಹೆಚ್ಚಾಗಿದ್ದು, ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳ ಫೇಕ್ ಫೇಸ್‌ಬುಕ್ ಐಡಿ ತೆರೆಯಲಾಗಿದೆ. ಖಾತೆ ತೆರೆದವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಎಂದರು.
ಫಕೀರ ದಿಂಗಾಲೇಶ್ವರ ಶ್ರೀಗಳ ಹೆಸರಿನಲ್ಲಿ ಮೂರು ಫೇಕ್ ಐಡಿ ಗಳನ್ನು ಸೃಷ್ಟಿಸಲಾಗಿದ್ದು, ಅವುಗಳಲ್ಲಿ ಬರುವ ಯಾವುದೇ ರೀತಿಯ ಸುದ್ದಿಗಳಿಗೆ ಶ್ರೀಮಠದ ಉತ್ತರಾಧಿಕಾರಿಯಾದ ಫಕೀರ ದಿಂಗಾಲೇಶ್ವರ ಶ್ರೀಗಳಿಗೆ ಮತ್ತು ಮಠಕ್ಕೂ ಯಾವುದೇ ಸಂಬಂಧ ಇಲ್ಲ. ಈವರೆಗೂ ಫಕೀರ ದಿಂಗಾಲೇಶ್ವರ ಶ್ರೀಗಳು ಫೇಸ್ ಬುಕ್ ಖಾತೆ ಬಳಕೆ ಮಾಡುವುದಿರಲಿ ಒಂದೇ ಒಂದು ಪೋಸ್ಟ್ ಸಹ ಮಾಡಿಲ್ಲ. ಆದ್ದರಿಂದ ಮುಂದೆಯೂ ಕೂಡಾ ಈ ರೀತಿ ಸ್ವಾಮೀಜಿ ಮತ್ತು ಮಠದ ಹೆಸರನ್ನು ಬಳಸುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಜಾಲತಾಣದಿಂದ ಸುಳ್ಳು ಸುದ್ದಿ, ಅಶ್ಲೀಲ ವಿಡಿಯೊ ಹರಿಬಿಡುತ್ತಿರುವುದಲ್ಲದೇ ಶ್ರೀಗಳ ಘನತೆಗೆ ಧಕ್ಕೆ ತರುವ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಶೀಘ್ರವಾಗಿ ಸೂಕ್ತ ಕ್ರಮ ಜರುಗಿಸುವುದು ಅತ್ಯಗತ್ಯ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.