ADVERTISEMENT

ಗೋವಿನಜೋಳದ ಬೆಳೆಗೆ ಲದ್ದಿಹುಳು ಕಾಟ: ಕಂಗಾಲಾದ ರೈತರು

rog

​ಪ್ರಜಾವಾಣಿ ವಾರ್ತೆ
Published 16 ಜುಲೈ 2023, 14:24 IST
Last Updated 16 ಜುಲೈ 2023, 14:24 IST
ಲಕ್ಷ್ಮೇಶ್ವರ ಸಮೀಪದ ಗೊಜನೂರು ಗ್ರಾಮದಲ್ಲಿ ಹೊಲಗಳಲ್ಲಿ ಬೆಳೆಯುತ್ತಿರುವ ಗೋವಿನಜೋಳ ಬೆಳೆಗೆ ಲದ್ದಿ ಹುಳು ಕಾಟ ಶುರುವಾಗಿದೆ
ಲಕ್ಷ್ಮೇಶ್ವರ ಸಮೀಪದ ಗೊಜನೂರು ಗ್ರಾಮದಲ್ಲಿ ಹೊಲಗಳಲ್ಲಿ ಬೆಳೆಯುತ್ತಿರುವ ಗೋವಿನಜೋಳ ಬೆಳೆಗೆ ಲದ್ದಿ ಹುಳು ಕಾಟ ಶುರುವಾಗಿದೆ   

ಲಕ್ಷ್ಮೇಶ್ವರ: ಮೊದಲೇ ಮಳೆ ಕೊರತೆಯಿಂದ ರೈತರು ಕಂಗೆಟ್ಟಿದ್ದಾರೆ. ಇಂಥ ಸಮಯದಲ್ಲಿ ಸುರಿದಷ್ಟು ಮಳೆಯನ್ನೇ ನೆಚ್ಚಿ ರೈತರು ಗೋವಿನಜೋಳ ಬಿತ್ತನೆ ಮಾಡಿದ್ದರು. ಇಪ್ಪತ್ತು ದಿನಗಳ ಹಿಂದೆ ಬಿತ್ತಿದ ಬೀಜ ಮೊಳಕೆಯೊಡೆದು ಬೆಳೆಯುತ್ತಿದೆ. ಆದರೆ ಬೆಳೆಯುತ್ತಿರುವ ದಿರುವ ಗೋವಿನಜೋಳಕ್ಕೆ ಲದ್ದಿಹುಳು ಗಂಟು ಬಿದ್ದಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ.

ಒಮ್ಮೆ ಲದ್ದಿಹುಳು ಬಾಧೆ ಕಾಣಿಸಿಕೊಂಡರೆ ಅದರ ನಿಯಂತ್ರಣ ಕಷ್ಟ. ಹುಳು ಬಾಧೆಯಿಂದಾಗಿ ಇಳುವರಿಗೆ ಭಾರೀ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಬಾರಿ ತಾಲ್ಲೂಕಿನಾದ್ಯಂತ ಸಾವಿರಾರು ಹೆಕ್ಟೇರ್‍ನಲ್ಲಿ ಗೋವಿನಜೋಳದ ಬಿತ್ತನೆಯಾಗಿದೆ.

ಸಮೀಪದ ಗೊಜನೂರು ಗ್ರಾಮದ ವಿರುಪಾಕ್ಷಪ್ಪ ಗುಡ್ಡಣ್ಣವರ ಎಂಬ ರೈತರು ಆರು ಎಕರೆಯಲ್ಲಿ ಗೋವಿನಜೋಳ ಬಿತ್ತನೆ ಮಾಡಿದ್ದು ಬೆಳೆಯ ಸುಳಿಯಲ್ಲಿ ಹುಳು ಕಾಣಿಸಿಕೊಂಡು ಬೆಳೆಯನ್ನು ಹಾಳು ಮಾಡುತ್ತಿದೆ.

ADVERTISEMENT

‘ಹದಿನೈದು ದಿನದ ಬೆಳೆಗೆ ಲದ್ದಿಹುಳು ಗಂಟ ಬಿದ್ದೇತ್ರೀ. ಮದ್ಲ ಮಳಿ ಇಲ್ಲದ ತ್ರಾಸ ಆಗೇತಿ. ಇಂಥದರಾಗ ಹುಳ ನಮ್ಮ ಹೊಲದ ಬೆಳೀನ ಕಡದು ಹಾಳ ಮಾಡಕತ್ತೈತ್ರೀ’, ಲದ್ದಿಹುಳು ಬೆಳೆಯ ಸುಳಿಯಲ್ಲಿ ತತ್ತಿ ಇಟ್ಟು ಅಲ್ಲಿಯೇ ಮರಿ ಮಾಡುತ್ತದೆ. ಹುಳುಗಳು ಬೆಳೆದಂತೆ ರಸ ಹೀರುವುದರಿಂದ ಗಿಡದ ಎಲೆಗಳು ಒಣಗಲಾರಂಭಿಸುತ್ತವೆ. ಆದಷ್ಟು ಬೇಗನೇ ಹುಳುವನ್ನು ನಿಯಂತ್ರಿಸದಿದ್ದರೆ ಇಡೀ ಬೆಳೆಯೇ ಹಾಳಾಗುತ್ತದೆ’ ಎಂದು ಅಲವತ್ತುಕೊಂಡರು.

‘ಗ್ವಾನಜ್ವಾಳದ ಬೆಳೀನ ಲದ್ದಿಹುಳ ಹಾಳ ಮಾಡಕತ್ತಾವ್ರೀ. ಅಧಿಕಾರಿಗಳು ಆದಷ್ಟು ಲಗೂನ ರೈತರ ಹೊಲಕ್ಕ ಬಂದು ಹುಳಾನ ಹ್ಯಂಗ ನಿಯಂತ್ರಿಸಬೇಕು ಅನ್ನುವುದರ ಬಗ್ಗೆ ತಿಳಿಸಿಕೊಡಬೇಕು’ ಎಂದು ಗೊಜನೂರು ಗ್ರಾಮದ ರೈತ ಮುಖಂಡ ಚನ್ನಪ್ಪ ಷಣ್ಮುಖಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.