ADVERTISEMENT

ರೈತರನ್ನು ಅಲಕ್ಷ್ಯಿಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಶಾಸಕ ಎಚ್‌.ಕೆ. ಪಾಟೀಲ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 2:27 IST
Last Updated 26 ಫೆಬ್ರುವರಿ 2021, 2:27 IST
ಗದುಗಿನಲ್ಲಿ ಗುರುವಾರ ಕಾಂಗ್ರೆಸ್‌ ಪಕ್ಷದ ವತಿಯಿಂದ ನಡೆದ ಬೃಹತ್‌ ಟ್ರ್ಯಾಕ್ಟರ್‌ ರ‍್ಯಾಲಿಯಲ್ಲಿ 500ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಭಾಗವಹಿಸಿದ್ದವು
ಗದುಗಿನಲ್ಲಿ ಗುರುವಾರ ಕಾಂಗ್ರೆಸ್‌ ಪಕ್ಷದ ವತಿಯಿಂದ ನಡೆದ ಬೃಹತ್‌ ಟ್ರ್ಯಾಕ್ಟರ್‌ ರ‍್ಯಾಲಿಯಲ್ಲಿ 500ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಭಾಗವಹಿಸಿದ್ದವು   

ಗದಗ: ‘ರೈತರ ವಿಷಯದಲ್ಲಿ ಅಲಕ್ಷ್ಯ, ಅಗೌರವ ತೋರಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಶಾಸಕ ಎಚ್‌.ಕೆ.‍ಪಾಟೀಲ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಗದುಗಿನಲ್ಲಿ ಗುರುವಾರ ನಡೆದ ಬೃಹತ್‌ ‍ಟ್ರ್ಯಾಕ್ಟರ್‌ ರ‍್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿ, ‘ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕುಣಿಯುತ್ತಿದೆ. ಇದನ್ನು ರಾಜ್ಯದ ರೈತರು, ಎಪಿಎಂಸಿಯಲ್ಲಿರುವ ದಲ್ಲಾಳಿಗಳು, ಮಾರಾಟಗಾರರು, ಹಮಾಲಿಗಳಾಗಲೀ ಸರ್ವತಾ ಒಪ್ಪುವುದಿಲ್ಲ. ಎಪಿಎಂಸಿಯಂತಹ ರೈತ‍ಪರ ಸಂಸ್ಥೆಗಳನ್ನು ನಾಶ ಮಾಡಿ ಅದಾನಿ ಅಂಬಾನಿಯಂತವರಿಗೆ ರೈತರ ಸರಕಿನ ಮೇಲೆ ಹತೋಟಿ ಬರುವಂತೆ ಮಾಡುವ ಕುತಂತ್ರ ನಡೆಯುತ್ತಿದೆ. ಈ ಬಗ್ಗೆ ರೈತರು ರೊಚ್ಚಿಗೆದ್ದಿದ್ದಾರೆ’ ಎಂದು ಹೇಳಿದರು.

‘ರೈತರ ಬಗ್ಗೆ ಇದೇ ನಿಲುವು ಮುಂದುವರಿಸಿದ್ದೇ ಆದಲ್ಲಿ ಪ್ರಧಾನಿ ಮೋದಿ ಅವರ ಸ್ಥಾನಕ್ಕೂ ಕುತ್ತು ಬರಲಿದೆ. ಕೇಂದ್ರ ಸರ್ಕಾರ ಎಲ್ಲಿಯವರೆಗೆ ರೈತ ವಿರೋಧಿ ಕಾನೂನುಗಳನ್ನು ವಾಪಸ್‌ ಪಡೆಯುವುದಿಲ್ಲವೋ; ಅಲ್ಲಿಯವರೆಗೆ ಕಾಂಗ್ರೆಸ್‌ ಹೋರಾಟ ಮುಂದುವರಿಸಲಿದೆ. ಪೆಟ್ರೋಲ್‌, ಡಿಸೇಲ್‌ ಬೆಲೆ ಗಗನಕ್ಕೇರಿದೆ. ಮಧ್ಯಮ ವರ್ಗದ ಜನರು, ರೈತರು ಬದುಕುವುದು ಕಷ್ಟವಾಗಿದೆ. ಅಡುಗೆ ಅನಿಲ ಬೆಲೆ ಹೆಚ್ಚಾಗುತ್ತಲೇ ಇದೆ’ ಎಂದು ಹೇಳಿದರು.

ADVERTISEMENT

‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವರ್ಷಗಳು ಕಳೆದರೂ ರೈತರು, ಬಡವರ ಕೆಲಸಗಳು ಆಗುತ್ತಿಲ್ಲ. ಜಿಲ್ಲೆಯಲ್ಲಿ ಬಡವರು, ರೈತರನ್ನು ಶೋಷಿಸುವುದು ಕಂಡುಬಂದರೆ ಸಹಿಸುವುದಿಲ್ಲ. ಗದಗ ಜಿಲ್ಲೆಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಬರಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾನೂನುಗಳಿಂದ ರೈತರಿಗೆ ಸಾಕಷ್ಟು ತೊಂದರೆಗಳಾಗುತ್ತಿವೆ. ಈ ಸಂಬಂಧ ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. 400 ಮಂದಿ ರೈತರು ಸಾವನ್ನಪ್ಪಿದ್ದಾರೆ. ಆದರೂ, ಪ್ರಧಾನಿ ಮೋದಿ ತಮ್ಮ ಹಠಮಾರಿ ಧೋರಣೆ ಕೈಬಿಟ್ಟಿಲ್ಲ’ ಎಂದು ಗದಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

‘ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಬೃಹತ್‌ ಟ್ರ್ಯಾಕ್ಟರ್‌ ರ‍್ಯಾಲಿ ನಡೆಡುತ್ತಿದೆ. 500ಕ್ಕೂ ಹೆಚ್ಚು ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನು ತಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕೇಂದ್ರ ಸರ್ಕಾರ ರೈತ
ವಿರೋಧಿ ಕಾನೂನುಗಳನ್ನು ಹಿಂಪಡೆಯುವವರೆಗೂ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಅವರು ತಿಳಿಸಿದರು.

ಗದಗ-ಬೆಟಗೇರಿ ಶಹರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ವಿ.ಬಳಗಾನೂರ, ಮಾಜಿ ಶಾಸಕ ಡಿ.ಆರ್.ಪಾಟೀಲ, ಬಿ.ಆರ್.ಯಾವಗಲ್, ರಾಮಕೃಷ್ಣ ದೊಡ್ಡಮನಿ, ಕೆ.ಸಿ.ಸಿ.ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್.ಪಾಟೀಲ ಹಾಗೂ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಮೇಲೆ ಶಾಸಕ ಕೆಂಡಾಮಂಡಲ

‘ಹಿಂದೆ ಇದ್ದಂತಹ ಜಿಲ್ಲಾಧಿಕಾರಿಗಳಾದ ಪಟೇಲ್‌, ಹಿರೇಮಠ ಅವರು ಪ್ರತಿಭಟನಕಾರರ ಮನವಿಪತ್ರಗಳನ್ನು ಮುಖ್ಯದ್ವಾರಕ್ಕೆ ಬಂದು ತೆಗೆದುಕೊಳ್ಳುತ್ತಿದ್ದರು. ಇವತ್ತು ನಾವು ನಾಲ್ಕು ಗಂಟೆಗಳ ಕಾಲ ಜಾಥಾ ನಡೆಸಿ, ಮನವಿ ನೀಡಲು ಜಿಲ್ಲಾಡಳಿತ ಭವನಕ್ಕೆ ಬಂದರೆ ಕಚೇರಿಯಲ್ಲಿ ಜಿಲ್ಲಾಧಿಕಾರಿಯೇ ಇಲ್ಲ’ ಎಂದು ಜಿಲ್ಲಾಧಿಕಾರಿ ಸುಂದರೇಶ್‌ ಬಾಬು ಅವರ ಮೇಲೆ ಶಾಸಕ ಎಚ್‌.ಕೆ.ಪಾಟೀಲ ಹರಿಹಾಯ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ನಾನು ಕೂಡ ಜಿಲ್ಲಾಧಿಕಾರಿ ಕಚೇರಿಯ ಗೇಟ್‌ ಬಳಿಗೆ ಬಂದು ಮನವಿ ಸ್ವೀಕರಿಸಲು ಸಿದ್ಧನಿದ್ದೆ. ಅದಕ್ಕಾಗಿ ಬೆಳಿಗ್ಗೆ 11 ಗಂಟೆಯಿಂದಲೂ ಕಚೇರಿಯಲ್ಲೇ ಇದ್ದೇನೆ. ಸರಿಯಾದ ಸಂವಹನ ನಡೆಯದ ಕಾರಣ ಈ ರೀತಿ ಆಗಿದೆ’ ಎಂದು ತಿಳಿಸಿದರು.

ಆಗ ಶಾಸಕ ಎಚ್‌.ಕೆ.ಪಾಟೀಲ, ‘ನೀವು ಹೊರಕ್ಕೆ ಬರದ ಕಾರಣದಿಂದಲೇ ನಾವೆಲ್ಲರೂ ಒಳಕ್ಕೆ ಬಂದೆವು. ಮೊದಲೇ ತಿಳಿಸಿದಂತೆ ಮಧ್ಯಾಹ್ನ 2.40ಕ್ಕೆ ಜಾಥಾದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಬಳಿಗೆ ಬಂದಿದ್ದೇವೆ. ಅಲ್ಲಿ ಯಾರೂ ಇಲ್ಲ. ನೀವ್ಯಾರೂ ಇಲ್ಲ ಅಂದರೆ ನಮ್ಮ ಮನವಿಯನ್ನು ಗೇಟ್‌ನಲ್ಲಿರುವ ವಾಚ್‌ಮನ್‌ಗೆ ಕೊಟ್ಟು ಹೋಗಬೇಕಿತ್ತೇ? ನಿಮ್ಮ ಈ ಧೋರಣೆ ಮೂಲಕ ರೈತ ಸಮುದಾಯವನ್ನು ಅವಮಾನಿಸಿದ್ದೀರಿ’ ಎಂದು ವ್ಯಗ್ರರಾದರು.

ಸರ್ಕಾರದ ವಿರುದ್ಧ ಘೋಷಣೆ

ಗದುಗಿನ ಕಾಟನ್‌ ಸೊಸೈಟಿ ಆವರಣದಲ್ಲಿರುವ ಕಾಂಗ್ರೆಸ್‌ ಕಚೇರಿಯಿಂದ ಆರಂಭಗೊಂಡ ಟ್ರ್ಯಾಕ್ಟರ್‌ ರ‍್ಯಾಲಿ, ಗಾಂಧಿ ವೃತ್ತ, ಚೆನ್ನಮ್ಮ ಸರ್ಕಲ್‌, ಮುಳಗುಂದ ನಾಕ, ಟಿಪ್ಪು ಸುಲ್ತಾನ್‌ ಸರ್ಕಲ್‌ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ಈ ನಡುವೆ ಪ್ರತಿಭಟನಕಾರರು ರಸ್ತೆಯುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾಧಿಕಾರಿ ಮನವಿ ಸ್ವೀಕರಿಸಲು ಮುಖ್ಯದ್ವಾರಕ್ಕೆ ಬರದ ಕಾರಣ, ಶಾಸಕ ಎಚ್‌.ಕೆ.ಪಾಟೀಲ ಟ್ರ್ಯಾಕ್ಟರ್‌ ಅನ್ನು ಮುಖ್ಯದ್ವಾರದ ಮೂಲಕ ಒಳಕ್ಕೆ ಚಲಾಯಿಸಿಕೊಂಡು ಬಂದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿ ಅವರು ಅಲ್ಲಿ ಇಲ್ಲದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಅವರು ಬಂದ ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಹೊರಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.