ADVERTISEMENT

ಗದಗ: ದೀಡ್‌ ನಮಸ್ಕಾರ ಹಾಕಿ ರೈತರ ಆಕ್ರೋಶ

ಹಕ್ಕುಪತ್ರ ಕೊಡುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ: ರವಿಕಾಂತ ಅಂಗಡಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 5:04 IST
Last Updated 5 ಸೆಪ್ಟೆಂಬರ್ 2025, 5:04 IST
ಗದಗ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಗುರುವಾರ ದೀಡ್‌ ನಮಸ್ಕಾರ ಹಾಕಿ ಪ್ರತಿಭಟನೆ ನಡೆಸಿದರು
ಗದಗ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಗುರುವಾರ ದೀಡ್‌ ನಮಸ್ಕಾರ ಹಾಕಿ ಪ್ರತಿಭಟನೆ ನಡೆಸಿದರು   

ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 17 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ಗುರುವಾರ ನಗರದ ಚನ್ನಮ್ಮ ವೃತ್ತದಿಂದ ಗದಗ ಜಿಲ್ಲಾಧಿಕಾರಿ ಕಚೇರಿವರೆಗೆ ದೀಡ್‌ ನಮಸ್ಕಾರ ಹಾಕುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ನಗರದ ಚನ್ನಮ್ಮ ವೃತ್ತದಿಂದ ರೈತರು, ಮಹಿಳೆಯರು ದೀಡ್ ನಮಸ್ಕಾರ ಹಾಕುತ್ತ ಮುಳುಗುಂದ ನಾಕಾ, ಟಿಪ್ಪು ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಈ ವೇಳೆ ವಾದ್ಯಮೇಳದ ಜತೆಗೆ ಭಜನೆ ಮಾಡುತ್ತಾ ಮುಂದೆ ಸಾಗಿದ ರೈತರು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು.

ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ‘ಹಕ್ಕುಪತ್ರಕ್ಕಾಗಿ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ, ಸರ್ಕಾರ ಹಕ್ಕುಪತ್ರ ನೀಡುವುದಾಗಿ ಹೇಳಿ ಉಪವಿಭಾಗಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಮಿಟಿಗಳನ್ನು ಮಾತ್ರ ರಚಿಸಿ, ರೈತರನ್ನು ಮೋಸಗೊಳಿಸುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಹಾರಿಕೆ ಉತ್ತರ ಹೇಳುವ ಬದಲು ರೈತರ ಬೇಡಿಕೆಗಳನ್ನು ಈಡೇರಿಸಲು ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಬದಲು ಹುಯಿಲಗೋಳ ಕುಟುಂಬಕ್ಕೆ ₹11 ಕೋಟಿ ಹಣ ನೀಡಿರುವುದು ಯಾವ ನ್ಯಾಯ? ಜಿಲ್ಲಾ ಉಸ್ತುವಾರಿ ಸಚಿವರು ಕೊಟ್ಟ ಮಾತಿನಂತೆ ರೈತರಿಗೆ ಹಕ್ಕುಪತ್ರ ಹಾಗೂ ಪರಿಹಾರ ಒದಗಿಸಬೇಕು. ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ಮುಖಂಡರಾದ ಫಿರೋಜ್ ನದಾಫ್‌, ಶ್ರೀನಿವಾಸ ಶಿರಹಟ್ಟಿ, ಬಸವಣ್ಣೆಪ್ಪ ಚಿಂಚಲಿ, ಚಂಬಣ್ಣ, ಹನುಮಂತ ಚೆನ್ನಪಟ್ಟಣ, ಖಾದೀರ್ ಸಾಬ್, ಮಹಮ್ಮದ ಶಲವಡಿ, ಮಂಜುನಾಥ ಮಾಗಡಿ, ಹೊನ್ನಪ್ಪ ವಡ್ಡರ, ಎಸ್.ಎಸ್.ಪಾಟೀಲ, ಪರಮೇಶ ಲಮಾಣಿ, ದ್ಯಾಮಣ್ಣ ಲಮಾಣಿ, ಪರಶುರಾಮ ಜಲ್ಲಿಗೇರಿ, ರಮೇಶ ಮಜ್ಜೂರ ಸೇರಿದಂತೆ ಜಿಲ್ಲೆಯ ರೈತರು, ಮಹಿಳೆಯರು ಪ್ರತಿಭಟನೆಯಲ್ಲಿ ಇದ್ದರು.

ರೈತರ ಬೇಡಿಕೆಗಳಿಗೆ ಸ್ಪಂದಿಸದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ನಡೆಯನ್ನು ಖಂಡಿಸಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪೊರಕೆ ಚಳವಳಿ ನಡೆಸಲಾಗುವುದು
ರವಿಕಾಂತ ಅಂಗಡಿ ರಾಜ್ಯ ಘಟಕದ ಅಧ್ಯಕ್ಷ ಉತ್ತರ ಕರ್ನಾಟಕ ಮಹಾಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.