ADVERTISEMENT

ರೈತರಿಂದ ಉಗ್ರಾಣಕ್ಕೆ ಮುತ್ತಿಗೆ: ಆಕ್ರೋಶ

ನರಗುಂದ: ಐದು ದಿನಗಳಿಂದ ವಿಲೇವಾರಿಯಾಗದ ಹೆಸರು, ಸಾಲುಗಟ್ಟಿ ನಿಂತ ಹೆಸರು ತುಂಬಿದ ಲಾರಿಗಳು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 6:34 IST
Last Updated 8 ಅಕ್ಟೋಬರ್ 2022, 6:34 IST
ರೈತರು ಕೇಂದ್ರಿಯ ಉಗ್ರಾಣ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು
ರೈತರು ಕೇಂದ್ರಿಯ ಉಗ್ರಾಣ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು   

ನರಗುಂದ: ಸರ್ಕಾರವು ಬೆಂಬಲ ಬೆಲೆಯಡಿ ಹೆಸರು ಖರೀದಿ ಆರಂಭಿಸಿದೆ. ಆದರೆ ಖರೀದಿಯಾಗುತ್ತಿರುವ ಹೆಸರು ಕಾಳು ಕಳೆದ ಐದು ದಿನಗಳಿಂದ ವಿಲೇವಾರಿಯಾಗದಿರುವುದಕ್ಕೆ ಶುಕ್ರವಾರ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಹಾಗೂ ಖರೀದಿ ಕೇಂದ್ರಗಳ ವ್ಯವಸ್ಥಾಪಕರು ನರಗುಂದ ಪಟ್ಟಣದ ಕೇಂದ್ರಿಯ ಉಗ್ರಾಣ ನಿಗಮಕ್ಕೆ ಮುತ್ತಿಗೆ ಹಾಕಿದರು.

ದಾಸ್ತಾನು ಮಾಡಿಕೊಳ್ಳಬೇಕಾದ ಸಹಕಾರಿ ಮಾರಾಟ ಮಂಡಳ ಹಾಗೂ ಉಗ್ರಾಣ ನಿಗಮದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದರಿಂದ ಉಗ್ರಾಣ ನಿಗಮದ ಆವರಣ ಗೊಂದಲದ ಗೂಡಾಯಿತು. ರೈತರನ್ನು ನಿಯಂತ್ರಿಸುವಲ್ಲಿ ಪೊಲೀಸರು ತೀವ್ರ ಹರಸಾಹಸ ಪಡಬೇಕಾಯಿತು.

5 ದಿನಗಳಿಂದ ನಿಂತ 25 ಲಾರಿಗಳು: ತಾಲ್ಲೂಕಿನ 9 ಬೆಂಬಲ ಬೆಲೆಯ ಖರೀದಿ ಕೇಂದ್ರಗಳಿಂದ ಆಗಮಿಸಿದ ಹೆಸರುಕಾಳು ತುಂಬಿದ 25 ಲಾರಿಗಳು ಎಪಿಎಂಸಿ ಆವರಣದಲ್ಲಿರುವ ಕೇಂದ್ರೀಯ ಉಗ್ರಾಣ ನಿಗಮದ ಎದುರಿಗೆ ನಿಂತಿವೆ. ಆದರೇ ಉಗ್ರಾಣ ನಿಗಮದ ಅಧಿಕಾರಿಗಳು ದಾಸ್ತಾನಿಗೆ ಜಾಗ ಇಲ್ಲವೆಂದು ವಿಲೇವಾರಿ ಗೆ ಮುಂದಾಗದೇ ಇರುವುದು ಕಂಡು ಬಂತು.

ADVERTISEMENT

ಇದನ್ನು ಅರಿತ ರೈತರು ಹಾಗೂ ಖರೀದಿ ಕೇಂದ್ರದ ವ್ಯವಸ್ಥಾಪಕರು ಶುಕ್ರವಾರ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಉಗ್ರಾಣ ನಿಗಮಕ್ಕೆ ಆಗಮಿಸಿ ಪ್ರತಿಭಟನೆಗೆ ಮುಂದಾದರು. ಮೂರು ಗಂಟೆ ಪ್ರತಿಭಟನೆ ನಡೆದರೂ ಅಧಿಕಾರಿಗಳಿಂದ ಸ್ಪಂದಿಸಲೇ ಇಲ್ಲ. ಇದರಿಂದ ಕುಪಿತರಾದ ರೈತರು ಆರ್.ಎನ್. ಪಾಟೀಲ ನೇತೃತ್ವದಲ್ಲಿ ಬಸ್ ನಿಲ್ದಾಣದ ಸಮೀಪ ಶಿವಾಜಿ ವೃತ್ತಕ್ಕೆ ತೆರಳಿ ರಸ್ತೆ ತಡೆ ಮಾಡಲು ಹೊರಟಿದ್ದರು. ಇದರ ಮಾಹಿತಿ ಅರಿತ ಸಿಪಿಐ ಮಲ್ಲಯ್ಯ ಮಠಪತಿ ದಾರಿಯಲ್ಲೇ ಅವರನ್ನು ತಡೆದು ಅವರನ್ನು ಉಗ್ರಾಣ ನಿಗಮದ ಕಡೆ ಕರೆ ತಂದರು. ರೈತರ ಜತೆ ನಿಗಮದ ಕಚೇರಿಗೆ ತೆರಳಿದರು.

ಆದರೆ ಅಲ್ಲಿ ಮಾರಾಟ ಮಂಡಳದ ಅಧಿಕಾರಿಯಾಗಲಿ, ಉಗ್ರಾಣ ನಿಗಮದ ಅಧಿಕಾರಿಗಳು. ಇರದೇ ಇರುವುದರಿಂದ ಸುಮಾರು ಎರಡು ಗಂಟೆ ರೈತರ ಜತೆ ಸಿಪಿಐ. ಅಲ್ಲಿಯೇ ಬೀಡು ಬಿಟ್ಟ ಘಟನೆ ನಡೆಯಿತು. ಪೋನ್ ಮಾಡಿದರೂ ಅಧಿಕಾರಿಗಳು ಬರಲೇ ಇಲ್ಲ. ಇದರಿಂದ ರೈತರ ಆಕ್ರೋಶ ಹೆಚ್ಚಾಗಿತ್ತು. ಇದ್ದ ಸಿಬ್ಬಂದಿ ಜತೆ ವಾಗ್ವಾದ ನಡೆಯಿತು. ಕೊನೆಗೂ ಸಹಕಾರ ಮಾರಾಟ ಮಂಡಳ ಅಧಿಕಾರಿ ಸಚಿನ್ ಪಾಟೀಲ, ಉಗ್ರಾಣ ನಿಗಮದ ಅಧಿಕಾರಿ ಬಾರಕೇರ ಆಗಮಿಸಿದರು. ವಿಳಂಬವಾಗಿ ಬಂದಿದ್ದಕ್ಕೆ ರೈತರು ಮುತ್ತು ಕುರಿ ನೇತೃತ್ವದಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೆಲ ಕಾಲ ವಾಗ್ವಾದ ಉಂಟಾಗಿ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿತು.

ರೈತರು, ಜೆಡಿಎಸ್, ಕಾಂಗ್ರೆಸ್ ಮುಖಂಡರು ಅಧಿಕಾರಿಗಳಿಗೆ ಯಾವ ಗ್ರೇಡಿಂಗ್ ನೆಪ ಒಡ್ಡದೇ ಎಲ್ಲ ಹೆಸರು ಕಾಳು ವಿಲೇವಾರಿ ಯಾಗಲೇಬೇಕು. ಇಲ್ಲವಾದರೇ ಇಲ್ಲಿಂದ
ಕದಲುವುದಿಲ್ಲವೆಂದು ಪಟ್ಟು ಹಿಡಿದರು. ಕೊನೆಗೂ ಸಿಪಿಐ ಹಾಗೂ ರೈತ ಮುಖಂಡರ ನಡುವೆ ಚರ್ಚೆ ನಡೆದು ಅಧಿಕಾರಿಗಳು ವಿಲೇವಾರಿಗೆ ಒಪ್ಪಿಕೊಂಡರು. ನಂತರ ಸಂಜೆ ಐದು ಗಂಟೆ ಹೊತ್ತಿಗೆ ರೈತರು ಪ್ರತಿಭಟನೆ ಕೈಬಿಟ್ಟರು.

ಈ ಸಂದರ್ಭದಲ್ಲಿ ವಿಠ್ಠಲ ರಡ್ಡಿ ತಿಮ್ಮರಡ್ಡಿ,ವೀರೇಶ ಚುಳಕಿ, ಮುದಕಣ್ಣ ವಾಗಾತಿ, ಹನುಮರಡ್ಡಿ ರಿತ್ತಿ, ಸುಭಾಸಗೌಡ ಪಾಟೀಲ, ವಿಜಯ ಚಲವಾದಿ,ಬಾಪುಗೌಡ ಪಾಟೀಲ, ಬುಳಗನ್ನವರ ,ನಿಂಗಪ್ಪ ಹಾದಿಮನಿ ಹಾಗೂ ಚಿಕ್ಕನರಗುಂದ, ಸಂಕದಾಳ, ಹಿರೇಕೊಪ್ಪ, ಸುರಕೋಡ,ಬೆನಕನಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.