ಗದಗ: ‘ಮನುಷತ್ವ, ಅಹಿಂಸೆ, ಸತ್ಯ, ನಿಷ್ಠೆ ಹಾಗೂ ಧರ್ಮ ಜಾಗೃತಿಯನ್ನು ಮೂಡಿಸುವ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಗುರುದೇವ ಪುಷ್ಕರ ಮುನಿಜೀಯವರ ತತ್ವಾದರ್ಶಗಳು ನಮಗೆಲ್ಲ ಮಾದರಿ’ ಎಂದು ಆಚಾರ್ಯ ವಿಮಲಸಾಗರ ಸುರಜೀ ಹೇಳಿದರು.
ನಗರದ ತೀಸ್ ಬಿಲ್ಡಿಂಗ್ ಬಳಿಯ ಜೈನ ಸ್ಥಾನಕ ಭವನದಲ್ಲಿ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘ ಹಾಗೂ ವರ್ಧಮಾನ ಸ್ಥಾನಕವಾಸಿ ಜೈನ ಯುವಕ ಮಂಡಳದ ವತಿಯಿಂದ ಏರ್ಪಡಿಸಿದ್ದ ಗುರುದೇವ ಪುಷ್ಕರ ಮುನಿಜೀ ಮಹಾರಾಜರ 116ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಗುರುದೇವ ಪುಷ್ಕರ ಮುನಿಜೀ ಮಹಾರಾಜರ ಜಯಂತಿ ಕೇವಲ ಸಾಂಕೇತಿಕ ಕಾರ್ಯಕ್ರಮ ಆಗಬಾರದು. ಅವರು ಬೋಧಿಸಿದ ಧರ್ಮ ಚಿಂತನೆ, ತತ್ವ ಸಂದೇಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆದುಕೊಂಡಲ್ಲಿ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಇದರಿಂದ ನಮ್ಮ ಬದುಕು ಸನ್ಮಾರ್ಗದಲ್ಲಿ ಸಾಗುವುದು’ ಎಂದರು.
ಗದಗ ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಜೈನ ಬಾಂಧವರು ಗದುಗಿನಲ್ಲಿ ನಡೆಯುತ್ತಿರುವ ಚಾತುರ್ಮಾಸ ಧಾರ್ಮಿಕ ಚಿಂತನ, ಧರ್ಮೋಪದೇಶ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರದ್ಧೆ ಮತ್ತು ಭಕ್ತಿಯನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಗದುಗಿನ ಜೈನ್ ಮಹಾಜನತೆ ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ರೂಪಿಸಿರುವುದು ಶ್ಲಾಘನೀಯ ಎಂದರು.
ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು.
ಜೈನ ಯುವಕ ಮಂಡಳದ ಅಧ್ಯಕ್ಷ ರಾಹುಲ್‍ಕುಮಾರ ಬಾಫಣಾ, ಸಮಾಜದ ಹಿರಿಯರಾದ ರೂಪಚಂದ ಪಾಲರೇಚಾ, ದೀಪಕಚಂದ ಬಾಗಮಾರ, ದೀಪಕಚಂದ ತಾತೇಡ, ಪೃಥ್ವಿರಾಜ ಭಂಡಾರಿ, ಮೂಲಚಂದ ಸಂಕಲೇಚಾ, ನಲೀನ ಬಾಗಮಾರ, ನರೇಶ ಜೈನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.