ADVERTISEMENT

₹4 ಕೋಟಿ ಮೌಲ್ಯದ ಔಷಧ ಜಲಾವೃತ

ಗದಗ ಜಿಲ್ಲಾ ಆಸ್ಪತ್ರೆಯ ಔಷಧ ಉಗ್ರಾಣಕ್ಕೆ ನುಗ್ಗಿದ ಮಳೆನೀರು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 4:20 IST
Last Updated 9 ಸೆಪ್ಟೆಂಬರ್ 2022, 4:20 IST
ಗದಗ ಜಿಲ್ಲಾ ಆಸ್ಪತ್ರೆಯಲ್ಲಿನ ಔಷಧ ಉಗ್ರಾಣಕ್ಕೆ ಮಳೆನೀರು ನುಗ್ಗಿದ ಪರಿಣಾಮ ನೀರಿನಲ್ಲಿ ತೇಲುತ್ತಿದ್ದ ಔಷಧ ಸಾಮಗ್ರಿಗಳನ್ನು ಗುರುವಾರ ಬೇರೆಡೆಗೆ ಸ್ಥಳಾಂತರಿಸುತ್ತಿರುವ ಸಿಬ್ಬಂದಿ
ಗದಗ ಜಿಲ್ಲಾ ಆಸ್ಪತ್ರೆಯಲ್ಲಿನ ಔಷಧ ಉಗ್ರಾಣಕ್ಕೆ ಮಳೆನೀರು ನುಗ್ಗಿದ ಪರಿಣಾಮ ನೀರಿನಲ್ಲಿ ತೇಲುತ್ತಿದ್ದ ಔಷಧ ಸಾಮಗ್ರಿಗಳನ್ನು ಗುರುವಾರ ಬೇರೆಡೆಗೆ ಸ್ಥಳಾಂತರಿಸುತ್ತಿರುವ ಸಿಬ್ಬಂದಿ   

ಗದಗ: ಇಲ್ಲಿನ ಗದಗ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿನ ಔಷಧ ಉಗ್ರಾಣಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಕೋಟ್ಯಂತರ ಮೌಲ್ಯದ ಔಷಧಗಳು ನೀರಿನಲ್ಲಿ ತೇಲುತ್ತಿದ್ದು, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸಿಬ್ಬಂದಿ ಗುರುವಾರ ಹರಸಾಹಸಪಟ್ಟರು.

‘ಮೂರು ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಜಿಲ್ಲಾ ಆಸ್ಪತ್ರೆಯಲ್ಲಿನ ಔಷಧ ಉಗ್ರಾಣಕ್ಕೆ ನೀರು ನುಗ್ಗಿದೆ. ಇಲ್ಲಿ ಅಂದಾಜು ₹3ರಿಂದ ₹4 ಕೋಟಿ ಮೌಲ್ಯದ ಔಷಧ ಸಂಗ್ರಹವಿತ್ತು. ಅದರಲ್ಲಿ ಮಳೆಯಿಂದಾಗಿ ₹8 ರಿಂದ ₹10 ಲಕ್ಷ ಮೌಲ್ಯದ ಔಷಧ ಸಾಮಗ್ರಿಗಳು ಹಾಳಾಗಿವೆ’ ಎಂದು ಜಿಮ್ಸ್‌ ನಿರ್ದೇಶಕಿ ಡಾ. ರೇಖಾ ಸೋನಾವಣೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪ್ರಾಕೃತಿಕ ವಿಕೋಪವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜಿಲ್ಲಾ ಆಸ್ಪತ್ರೆಯ ನೆಲಮಹಡಿಯಲ್ಲೇ ವಿದ್ಯುತ್‌ ಪೂರೈಕೆ ನಿರ್ವಹಣಾ ಕೊಠಡಿ ಇದೆ. ಅದೃಷ್ಟಕ್ಕೆ ಶಾರ್ಟ್‌ ಸರ್ಕೀಟ್‌ ಆಗಿಲ್ಲ. ಆಸ್ಪತ್ರೆಗೆ ನೀರು ನುಗ್ಗಿದರೂ ಯಾವುದೇ ಜೀವ ಹಾನಿ ಆಗಿಲ್ಲ ಎಂಬುದೇ ನೆಮ್ಮದಿ ತರಿಸಿದೆ’ ಎಂದು ಅವರು ನಿಟ್ಟುಸಿರು ಬಿಟ್ಟಿದ್ದಾರೆ.

ADVERTISEMENT

‘ಹೆಚ್ಚಿನ ಔಷಧಿಗಳಿಗೆ ಪ್ಲಾಸ್ಟಿಂಗ್‌ ಕೋಟಿಂಗ್‌ ಇರುವುದರಿಂದ ಬಳಕೆ ಮಾಡಬಹುದಾಗಿದೆ. ಮಳೆನೀರಿನಿಂದ ತೊಯ್ದಿರುವ ಔಷಧಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮವಹಿಸಿದ್ದು, ರೋಗಿಗಳಿಗೆ ಔಷಧಗಳ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.