ಗದಗ: ವಿದೇಶದಲ್ಲಿ ವ್ಯಾಸಂಗ ಮಾಡಿ ಹುಟ್ಟಿದ ಊರು ಹಾಗೂ ಊರಿನ ಜನರ ಆರೋಗ್ಯ ಸೌಕರ್ಯಗಳ ಬಗ್ಗೆ ವಿಚಾರ ಮಾಡುವವರು ತುಂಬ ವಿರಳ.
ಆದರೆ, ಯುನೈಟೆಡ್ ಕಿಂಗ್‌ಡಂನಲ್ಲಿ ಓದಿ, ಕಿಡ್ನಿ ಕಸಿ ಮತ್ತು ರೊಬೋಟಿಕ್ ಸರ್ಜರಿಯಲ್ಲಿ ವಿಶೇಷ ಪರಿಣತಿ ಸಾಧಿಸಿರುವ ಡಾ. ಅವಿನಾಶ್ ಆರ್. ಓದುಗೌಡರ ತಮ್ಮ ವೈದ್ಯಕೀಯ ಸೇವೆಗೆ ಆಯ್ದುಕೊಂಡಿದ್ದು ಗದಗ ಮತ್ತು ಹುಲಕೋಟಿ ಗ್ರಾಮವನ್ನು.
ಇವರು ಮಣಿಪಾಲ್‌ನ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಯುರಾಲಜಿ ವಿಷಯದಲ್ಲಿ ಸೂಪರ್ ಸ್ಪೆಷಲೈಸೇಶನ್ ಮಾಡುವಾಗ ಶೇ 50ಕ್ಕಿಂತ ಹೆಚ್ಚಿನ ರೋಗಿಗಳು ಉತ್ತರ ಕರ್ನಾಟದವರೇ ಇರುವುದನ್ನು ಗಮನಿಸುತ್ತಾರೆ. ಸ್ಥಳೀಯವಾಗಿ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಇಲ್ಲದ ಕಾರಣಕ್ಕೆ ಅವರು ದೂರದ ಊರಿಗೆ ಹೋಗಿ ತೊಂದರೆ ಅನುಭವಿಸುತ್ತಿರುವುದನ್ನು ಕಂಡು ‘ನನ್ನ ಸೇವೆ ಏನಿದ್ದರೂ ಹುಟ್ಟಿದ ಊರಿಗೆ ಮೀಸಲು’ ಎಂಬ ಸಂಕಲ್ಪ ಮಾಡುತ್ತಾರೆ.
ಬಳಿಕ ಉನ್ನತ ವಿದ್ಯಾಭ್ಯಾಸಕ್ಕಾಗಿ ಯುಕೆಯಲ್ಲಿ ಇರುವ ದಿ ರಾಯಲ್ ಲಿವರ್‌ಪೂಲ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ತೆರಳುತ್ತಾರೆ. ಅಲ್ಲಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಫೆಲೋಶಿಪ್ ಮುಗಿಸಿ, ರೊಬೋಟಿಕ್ ಸರ್ಜರಿಯಲ್ಲೂ ಪರಿಣತಿ ಗಳಿಸುತ್ತಾರೆ. ಇಷ್ಟೆಲ್ಲಾ ಕಲಿತ ನಂತರ ಅಲ್ಲೇ ವೈದ್ಯಕೀಯ ವೃತ್ತಿ ಮುಂದುವರಿಸುವ ಸಾಕಷ್ಟು ಅವಕಾಶಗಳು ಇದ್ದರೂ ಅವರು ಈ ಮೊದಲೇ ನಿಶ್ಚಯಿಸಿದಂತೆ ಹುಟ್ಟಿದೂರಿಗೆ ಬಂದು ಆಸ್ಪತ್ರೆ ಆರಂಭಿಸುತ್ತಾರೆ.
‘ಹೆತ್ತ ತಾಯಿ ಮತ್ತು ಜನ್ಮಸ್ಥಳ ಸ್ವರ್ಗಕ್ಕಿಂತಲೂ ಮಿಗಿಲು. ಒಂದು ಮಗು ಸಮಾಜಕ್ಕೆ ಕೊಡುಗೆ ನೀಡುವಂತೆ ಸಂಪನ್ಮೂಲ ವ್ಯಕ್ತಿಯಾಗಿ ಬೆಳೆಯುವಲ್ಲಿ ಪೋಷಕರು ಮತ್ತು ಸಮಾಜದ ಪಾತ್ರ ದೊಡ್ಡದಿರುತ್ತದೆ. ಹೀಗಿದ್ದಾಗ, ನಾವು ಬೆಳೆದು ದೊಡ್ಡವರಾದ ಮೇಲೆ ಆ ಸಮಾಜಕ್ಕೆ ತಿರುಗಿ ಏನಾದರೂ ಕೊಡಲಿಲ್ಲ ಅಂದರೆ ಹೇಗೆ? ಈ ಆಲೋಚನೆಯಲ್ಲಿಯೇ ಅವಕಾಶಗಳು ಸಾಕಷ್ಟಿದ್ದರೂ ಎಲ್ಲೂ ಹೋಗದೇ ಸ್ಥಳೀಯವಾಗಿಯೇ ವೈದ್ಯಕೀಯ ವೃತ್ತಿ ಆರಂಭಿಸಿದೆ’ ಎನ್ನುತ್ತಾರೆ ಸಂಕಲ್ಪ ಆಸ್ಪತ್ರೆಯ ವೈದ್ಯ ಡಾ. ಅವಿನಾಶ್ ಆರ್.ಓದುಗೌಡರ.
ಕಿಡ್ನಿ ಕಸಿ ತಜ್ಞರಾಗಿ ಖ್ಯಾತಿ ಗಳಿಸಿರುವ ಡಾ. ಅವಿನಾಶ್ ಆರ್. ಓದುಗೌಡರ ಸಮಾನ ಮನಸ್ಕ ಯುವ ವೈದ್ಯರ ಜತೆಗೂಡಿ ಹುಲಕೋಟಿಯ ಕೆ.ಎಚ್.ಪಾಟೀಲ ಆಸ್ಪತ್ರೆಯಲ್ಲಿ ಕಿಡ್ನಿಕಸಿ ಮಾಡುತ್ತಿದ್ದಾರೆ. ಈವರೆಗೆ ಆರು ಜನರಿಗೆ ಕಡ್ನಿ ಕಸಿಯನ್ನು ಯಶಸ್ವಿಯಾಗಿ ಮಾಡಿದ್ದಾರೆ.
‘ಕಿಡ್ನಿ ಕಸಿ ಮಾಡಿಸಿಕೊಳ್ಳಲು ಈ ಭಾಗದ ಜನರು ಬೆಂಗಳೂರು, ಮಣಿಪಾಲ್‌ನಂತಹ ಊರುಗಳಿಗೆ ಹೋಗಬೇಕಿತ್ತು. ಒಮ್ಮೆ ಕಿಡ್ನಿ ಕಸಿ ಆದನಂತರ ಐದಾರು ತಿಂಗಳು ಎರಡು ದಿನಕ್ಕೊಮ್ಮೆ ಆಸ್ಪತ್ರೆಗೆ ಹೋಗಬೇಕಿರುತ್ತದೆ. ಇಂತಹ ಸಂದರ್ಭದಲ್ಲಿ ಬಡವರಿಗೆ ತುಂಬ ಕಷ್ಟ ಆಗುತ್ತಿತ್ತು. ಅದನ್ನು ಮನಗಂಡು ಸ್ಥಳೀಯವಾಗಿಯೇ ಕಿಡ್ನಿ ಕಸಿ ಚಿಕಿತ್ಸಾ ಸೌಲಭ್ಯ ಆರಂಭಿಸಲಾಗಿದೆ’ ಎನ್ನುತ್ತಾರೆ ಅವರು.
‘ಹುಲಕೋಟಿ ಒಂದು ಹಳ್ಳಿ. ಇಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಸಿಗುವುದಿಲ್ಲ ಅಂತ ಯಾರಿಗೂ ಅನ್ನಿಸಬಾರದು. ಹಳ್ಳಿಯಾದರೂ ದಿಲ್ಲಿಯಂತಹ ಸೌಕರ್ಯ ಸಿಗಬೇಕು ಎಂಬ ಆಲೋಚನೆಯಿಂದ ಕೆ.ಎಚ್.ಪಾಟೀಲ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಸೌಲಭ್ಯ ಆರಂಭಿಸಲಾಗಿದೆ. ಮುಂದೆ ಮೂತ್ರಪಿಂಡ ಕಸಿ ಸೌಲಭ್ಯ ಒದಗಿಸುವ ಆಲೋಚನೆ ಕೂಡ ಇದ್ದು, ಅದಕ್ಕೆ ತಯಾರಿ ನಡೆದಿದೆ. ನಮ್ಮ ಈ ಪ್ರಯತ್ನಕ್ಕೆ ಪೋಷಕರು, ಮಡದಿ ಸೇರಿದಂತೆ ಹಲವರು ನೆರವಾಗುತ್ತಿದ್ದಾರೆ’ ಎಂದು ತಿಳಿಸಿದರು.
ಅಂಗಾಂಗ ದಾನ
ಜಾಗೃತಿಗೂ ಮುಂದಡಿ ಡಾ. ಅವಿನಾಶ್ ಆರ್.ಓದುಗೌಡರ ಅಂಗಾಂಗ ದಾನ ಕುರಿತಾಗಿ ಜನಜಾಗೃತಿ ಮೂಡಿಸುವಲ್ಲಿಯೂ ಮುಂದಡಿ ಇರಿಸಿದ್ದಾರೆ. ಒಬ್ಬ ವ್ಯಕ್ತಿ ಸತ್ತ ನಂತರವೂ ಹಲವರನ್ನು ಬದುಕಿಸುವ ಅಂಗಾಂಗಗಳನ್ನು ನಾವು ವಿವಿಧ ಕಾರಣಗಳಿಂದ ಸುಟ್ಟು ಹಾಕುವುದು ಅಥವಾ ಹೂಳುವುದು ಮಾಡುತ್ತಿದ್ದೇವೆ. ಪಾಶ್ಚಾತ್ಯ ದೇಶಗಳಲ್ಲಿ ಯಾವುದೇ ಒಂದು ಅಂಗಾಂಗದ ಕಸಿ ಮಾಡಿದರೆ ಅದಕ್ಕೆ ಶೇ 70ರಷ್ಟು ಅಂಗಗಳು ದಾನಿಗಳಿಂದ ಸಿಗುತ್ತವೆ. ಆದರೆ ನಮ್ಮ ದೇಶದಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ಇದೆ. ಅಂಗಾಂಗ ದಾನದ ಕುರಿತು ಜನಜಾಗೃತಿ ಮೂಡಿಸಿದರೆ ಸಮಾಜಕ್ಕೆ ಒಳಿತಾಗುತ್ತದೆ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.