ಗದಗ: ‘ಅರಣ್ಯ ಸಂರಕ್ಷಣೆಯಲ್ಲಿ ಹುತಾತ್ಮರಾದವರ ಬಲಿದಾನ ರಾಷ್ಟ್ರಕ್ಕೆ ಆದ ನಷ್ಟ. ಇದು ಕೇವಲ ಹುತಾತ್ಮರನ್ನು ಸ್ಮರಿಸುವ ದಿನವಷ್ಟೇ ಅಲ್ಲ. ಅದರ ಜತೆಗೆ, ನಾವೆಲ್ಲರೂ ಪರಿಸರ ಸಂರಕ್ಷಣೆಯ ಹೊಣೆ ಹೊರುವ ಬಗ್ಗೆ ಸಂಕಲ್ಪ ಕೈಗೊಳ್ಳುವ ದಿನವಾಗಿದೆ’ ಎಂದು ಸೆಷನ್ಸ್ ನ್ಯಾಯಾಧೀಶ ಗಂಗಾಧರ ಎಂ.ಸಿ. ಹೇಳಿದರು.
ತಾಲ್ಲೂಕಿನ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಾಡಿನ ರಕ್ಷಣೆಯಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯ ಶ್ರಮ ಅಪಾರವಾಗಿದೆ. ಅವರ ಜತೆಗೆ ನೈಸರ್ಗಿಕ ಸಂಪತ್ತಿನ ರಕ್ಷಣೆಯ ಕೆಲಸ ನಮ್ಮೆಲ್ಲರದ್ದೂ ಆಗಿದೆ. ಅರಣ್ಯ ಸಂಪತ್ತು ರಕ್ಷಿಸಲು ಪ್ರಾಣತ್ಯಾಗ ಮಾಡಿ ಹುತಾತ್ಮರಾದ ಅವರ ಸೇವೆಯನ್ನು ನಾವೆಲ್ಲ ಪ್ರತಿನಿತ್ಯ ನೆನೆಯಬೇಕು. ನಿರಂತರವಾಗಿ ನಡೆಯುವ ಅಕ್ರಮ ಪ್ರಾಣಿ ಬೇಟೆ ತಡೆಯಬೇಕು’ ಎಂದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ‘ನಾವು ಇಂದು ಪರಿಸರ ಬದಲಾವಣೆಯಿಂದಾಗುವ ಅನಾಹುತಗಳನ್ನು ಎದುರಿಸುತ್ತಿದ್ದೇವೆ. ಪರಿಸರ ಸಂರಕ್ಷಣೆಯ ಕಾಳಜಿ, ಹೊಣೆಗಾರಿಕೆಯನ್ನು ನಿಭಾಯಿಸುತ್ತಿಲ್ಲ. ಮನುಷ್ಯನನ್ನು ಬಿಟ್ಟು ಎಲ್ಲವನ್ನೂ ಪರಿಸರವೆಂದು ಪರಿಗಣಿಸಲಾಗುತ್ತದೆ. ಮನುಷ್ಯನ ಅಗತ್ಯತೆಗಳು ಅಗಾಧವಾಗಿ ಪರಿಸರ ಸಂಪತ್ತು ವಿನಾಶದತ್ತ ಸಾಗಿದೆ’ ಎಂದರು.
ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಅತಿಥಿಗಳು ಹಾಗೂ ವಿವಿಧ ರಂಗಗಳ ಪ್ರತಿನಿಧಿಗಳಿಂದ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಹುತಾತ್ಮರಾದವರಿಗೆ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಮೌನಾಚರಣೆ ಮಾಡಲಾಯಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ ಸಜ್ಜನರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಚಂದ್ರಹಾಸ ವೆರ್ಣೆಕರ್, ವಾರ್ತಾಧಿಕಾರಿ ವಸಂತ ಮಡ್ಲೂರ, ಎಸಿಎಫ್ ಪ್ರಕಾಶ ಪವಾಡಿಗೌಡ್ರ, ಆರ್‌ಎಫ್‌ಒಗಳಾದ ಮೇಘನಾ ಎಚ್., ವೀರೇಂದ್ರ ಮರಿಸಬಣ್ಣವರ, ಮಂಜುನಾಥ ಮೇಗಲಮನಿ, ರಾಮಪ್ಪ ಪೂಜಾರ, ಸ್ನೇಹಾ ಕೊಪ್ಪಳ, ವೀರಭದ್ರಪ್ಪ ಕುಂಬಾರ, ಅನ್ವರ್ ಕೊಲ್ಹಾರ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ರಾಜ್ಯದಲ್ಲಿ 1966ರಿಂದ ಈವರೆಗೆ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರತರಾಗಿದ್ದ 62 ನೌಕರರು ಹುತಾತ್ಮರಾಗಿದ್ದು ಅವರೆಲ್ಲರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅರಣ್ಯ ಹುತಾತ್ಮರ ಸ್ಮಾರಕ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಸಂತೋಷ್ಕುಮಾರ ಕೆಂಚಪ್ಪನವರ ಡಿಸಿಎಫ್ ಗದಗ
ಅರಣ್ಯ ಹುತಾತ್ಮರು ಪ್ರಾಣಿಗಳಿಂದ ಆದವರು ಕಡಿಮೆ; ಮನುಷ್ಯರಿಂದಲೇ ಹತ್ಯೆಯಾದವರ ಸಂಖ್ಯೆ ಅಧಿಕವಾಗಿದೆ. ಪರಿಸರ ಸಂರಕ್ಷಣೆಯೊಂದಿಗೆ ನಾಳಿನ ಭವಿಷ್ಯದ ಪೀಳಿಗೆಗೆ ಉತ್ತಮ ಪ್ರಕೃತಿ ನೀಡುವ ವಾಗ್ದಾನ ನಮ್ಮದಾಗಲಿಸಿ.ಎನ್.ಶ್ರೀಧರ್ ಜಿಲ್ಲಾಧಿಕಾರಿ
ಹುತಾತ್ಮರನ್ನು ಸದಾ ಸ್ಮರಿಸಿ: ಡಿಸಿಎಫ್
‘ಅರಣ್ಯ ಸಂಪತ್ತೆಂದರೆ ಕೇವಲ ಮರ ಗಿಡಗಳು ಪ್ರಾಣಿ– ಪಕ್ಷಿಗಳಷ್ಟೇ ಅಲ್ಲ. ಅರಣ್ಯ ಇಲ್ಲದೇ ಮಳೆಯೂ ಇಲ್ಲ ಜೀವನವೂ ಇಲ್ಲ ಎಂಬುದನ್ನು ನಾವೆಲ್ಲರೂ ಅರಿತುಕೊಂಡು ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಡಿಸಿಎಫ್ ಸಂತೋಷ್ ಕುಮಾರ್ ಕೆಂಚಪ್ಪನವರ ಹೇಳಿದರು. ‘ಅರಣ್ಯ ಸಂರಕ್ಷಣೆಯಲ್ಲಿ ಅನೇಕರ ತ್ಯಾಗ ಬಲಿದಾನ ಸಮರ್ಪಣಾ ಮನೋಭಾವದಿಂದಾಗಿ ಇಂದು ಅರಣ್ಯಗಳು ಜೀವಂತವಾಗಿವೆ. ಅದಕ್ಕಾಗಿಯೇ ನಾವೆಲ್ಲರೂ ಜೀವಂತವಾಗಿದ್ದೇವೆ ಎಂಬುದನ್ನು ಮರೆಯಬಾರದು’ ಎಂದರು. ‘ನಮ್ಮ ಉತ್ತಮ ಭವಿಷ್ಯಕ್ಕಾಗಿ ತ್ಯಾಗ ಬಲಿದಾನದ ಮೂಲಕ ಅರಣ್ಯ ಸಂರಕ್ಷಣೆ ಮಾಡಿದವರನ್ನು ಸದಾ ಸ್ಮರಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.