ADVERTISEMENT

ನರೇಗಲ್: ವಿದ್ಯಾರ್ಥಿಗಳ ಓದಿಗೆ ಸ್ಫೂರ್ತಿಯಾದ ಪರಿಸರ

ದಾನದ ಭೂಮಿಯಲ್ಲಿ ಬಡಮಕ್ಕಳಿಗೆ ಉತ್ತಮ ಶಿಕ್ಷಣ ಸೌಲಭ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಜುಲೈ 2021, 3:28 IST
Last Updated 23 ಜುಲೈ 2021, 3:28 IST
ಕೃಷ್ಣಾಜೀ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢ ಶಾಲೆ
ಕೃಷ್ಣಾಜೀ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢ ಶಾಲೆ   

ನರೇಗಲ್: ವಿಶಾಲವಾದ ಶಾಲಾ ಅಂಗಳದ ಎದುರು ಹಸಿರು ಹೊದಿಸಿರುವಂತೆ ನಿಂತಿರುವ ಗಿಡಗಳು ಹಾಗೂ ಎತ್ತರದ ಕಟ್ಟಡಗಳ ನಡುವೆ ದಿನವೂ ಇಲ್ಲಿನ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಪಾಠ ನಡೆಯುತ್ತದೆ. ಸರ್ಕಾರಿ ಶಾಲೆ ‘ಹಿಂಗೂ ಇದೆಯಾ’ ಎನ್ನುವ ರೀತಿಯಲ್ಲಿ ಸ್ಥಳೀಯ ಕೃಷ್ಣಾಜೀ ರಂಗರಾವ್‌ ಕುಲಕರ್ಣಿ ಸರ್ಕಾರಿ ಪ್ರೌಢ ಶಾಲೆ ಆಕರ್ಷಿಸುತ್ತದೆ.

ನರೇಗಲ್‌ ಹಾಗೂ ಸುತ್ತಮುತ್ತಲಿನ ಬಡ ಮಕ್ಕಳ ಶಿಕ್ಷಣಕ್ಕಾಗಿ ಕೃಷ್ಣಾಜೀ ರಂಗರಾವ್‌ ಕುಲಕರ್ಣಿ ಅವರ ಕುಟುಂಬಸ್ಥರು ಗ್ರಾಮದ ಪಕ್ಕದಲ್ಲೇ ಇರುವ ಅಂದಾಜು ₹5 ಕೋಟಿ ಮೌಲ್ಯದ ಆಸ್ತಿಯನ್ನು ಸರ್ಕಾರಕ್ಕೆ ಶಾಲೆ ನಿರ್ಮಾಣಕ್ಕಾಗಿ ಉಚಿತವಾಗಿ ದಾನ ಮಾಡಿದ್ದಾರೆ. 3.5 ಎಕರೆ ಜಾಗದಲ್ಲಿ 16 ಕೊಠಡಿಗಳನ್ನು ನಿರ್ಮಿಸಲಾಗಿದೆ. ಹಾಗಾಗಿ ಇಂದು ಸಾವಿರಾರು ಮಕ್ಕಳ ಬದುಕಿಗೆ ಬೆಳಕು ನೀಡಿದೆ. ಸದ್ಯ 8ರಿಂದ 10ನೇ ತರಗತಿಯವರೆಗೆ 128 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಈ ಶಾಲೆಯ ಸಿಬ್ಬಂದಿ ನಾಲ್ಕು ಗೋಡೆಗಳ ಮಧ್ಯೆ ಅಕ್ಷರ ಕಲಿಸುವ ಜತೆಗೆ ಪರಿಸರ, ನೆಲ, ಜಲ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಾರೆ. ಶೌಚಾಲಯ ಬಳಕೆ, ಶುಚಿತ್ವ, ನೀರಿನ ಮಿತಬಳಕೆ, ಮಳೆನೀರು ಕೊಯ್ಲು, ಅಂತರ್ಜಲ ವೃದ್ಧಿಗೆ ಜಾಗೃತಿ ಮೂಡಿಸಲಾಗುತ್ತದೆ. ಹಸಿರೀಕರಣದಂತಹ ಪರಿಸರ ಚಟುವಟಿಕೆಗಳ ಮೂಲಕ ಪ್ರೌಢಾವಸ್ಥೆಯಲ್ಲಿ ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಪರಿಸರ ಸಂಪತ್ತಿನ ಮಹತ್ವವನ್ನು ತುಂಬುತ್ತಿದ್ದಾರೆ. ಹಾಗಾಗಿ ಕಾಂಪೌಂಡ್‌ ಇಲ್ಲದೆ ಇದ್ದರೂ ಸಹ ಶಾಲಾ ಆವರಣದಲ್ಲಿ ನೂರಾರು ಗಿಡಗಳು ಉತ್ತಮವಾಗಿ ಬೆಳೆದು ನಿಂತಿವೆ.

ADVERTISEMENT

ಮೂರು ವರ್ಷ ಹಿಂದೆ ನೆಟ್ಟ ಬೇವು, ಬಾದಾಮಿ, ಚೆರ್ರಿ, ಗುಲ್‌ ಮೊಹರ್, ಆಲ, ಹೊಂಗೆ, ಹೆಬ್ಬೇವು ಸೇರಿದಂತೆ ವಿವಿಧ ತಳಿಯ 100ಕ್ಕೂ ಹೆಚ್ಚು ಗಿಡಗಳು ಶಾಲಾ ಆವರಣದಲ್ಲಿ ಬೆಳೆದು ನಿಂತು ಶಾಲೆಯ ಸೌಂದರ್ಯ ಹೆಚ್ಚಿಸಿವೆ. ಪ್ರತಿದಿನ ಶಾಲೆಗೆ ಬರುವ ಮಕ್ಕಳು ಗಿಡಗಳಿಗೆ ನೀರು ಹಾಕುತ್ತಾರೆ. ಮಕ್ಕಳ ಕಲಿಕೆಗೆ ಅನಕೂಲವಾಗಲು ತರಗತಿಗಳನ್ನು ಆಗಾಗ ಗಿಡದ ನೆರಳಿನ ಕೆಳಗೆ ನಡೆಸಲಾಗುತ್ತದೆ. ಇದು ವಿದ್ಯಾರ್ಥಿಗಳ ಓದಿಗೆ ಸ್ಫೂರ್ತಿಯಾಗಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಆರ್.‌ಎಸ್.‌ನರೇಗಲ್‌ ಹೇಳಿದರು.

ಮಾಹಿತಿ ತಂತ್ರಜ್ಞಾನದಲ್ಲೂ ಮುಂದು

ಈ ಶಾಲೆಯ ವಿದ್ಯಾರ್ಥಿಗಳು ಕಂಪ್ಯೂಟರ್‌ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಮುಂದಿದ್ದಾರೆ. ಅಮೆರಿಕ-ಇಂಡಿಯನ್‌ ಫೌಂಡೇಷನ್‌ ನವರು ಲ್ಯಾಪ್‌ಟಾಪ್‌, ಪ್ರೊಜೆಕ್ಟರ್‌ ನೀಡಿ ಅಗತ್ಯವಿರುವ ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸಿ ಇಲ್ಲಿನ ಮಕ್ಕಳಿಗೆ ಕಂಪ್ಯೂಟರ್‌ ತರಬೇತಿ ನೀಡಿದ್ದಾರೆ. ಪರಿಣಾಮ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆಯವರು ಬೆಂಗಳೂರಿನಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ನಡೆಸಿದ ಮಾಹಿತಿ ತಂತ್ರಜ್ಞಾನದ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದುಮುಖ್ಯ ಶಿಕ್ಷಕ ಎಸ್‌.ಬಿ.ನಿಡಗುಂದಿ ಹೇಳಿದರು.

* ಬಡಮಕ್ಕಳ ಶಿಕ್ಷಣಕ್ಕಾಗಿ ದಾನ ನೀಡಿರುವ ಭೂಮಿಯಲ್ಲಿ ಶಿಕ್ಷಕರು ವಿದ್ಯಾರ್ಥಿ ಎಂಬ ಬೀಜಬಿತ್ತನೆ ಮಾಡಿ ಪ್ರತಿವರ್ಷ ಉತ್ತಮ ಫಲವನ್ನು ನೀಡುತ್ತಿದ್ದಾರೆ.

-ಆನಂದರಾವ್‌ ಕುಲಕರ್ಣಿ, ಭೂದಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.