ADVERTISEMENT

ಹಸಿರು ಸಿರಿಯ ಖಬರಸ್ತಾನ್‌..!

3 ಸಾವಿರ ಸಸಿಗಳನ್ನು ನೆಟ್ಟು ಬೆಳೆಸಿದ ಅಂಜುಮನ್ ಎ–ಇಸ್ಲಾಂ ಕಮಿಟಿ

ಕಾಶಿನಾಥ ಬಿಳಿಮಗ್ಗದ
Published 28 ಜೂನ್ 2019, 19:46 IST
Last Updated 28 ಜೂನ್ 2019, 19:46 IST
ಮುಂಡರಗಿಯ ಅಂಜುಮನ್ ಏ ಇಸ್ಲಾಂ ಕಮೀಟಿ ಆದೀನದಲ್ಲಿರುವ ಖಬರಸ್ಥಾನ್ ಹಾಗೂ ಈದ್ಗಾ ಮೈದಾನಗಳ ಸುತ್ತ ಮುತ್ತ ಸಮೃದ್ಧವಾಗಿ ಬೆಳೆದು ನಿಂತಿರುವ ಗಿಡಮರಗಳು
ಮುಂಡರಗಿಯ ಅಂಜುಮನ್ ಏ ಇಸ್ಲಾಂ ಕಮೀಟಿ ಆದೀನದಲ್ಲಿರುವ ಖಬರಸ್ಥಾನ್ ಹಾಗೂ ಈದ್ಗಾ ಮೈದಾನಗಳ ಸುತ್ತ ಮುತ್ತ ಸಮೃದ್ಧವಾಗಿ ಬೆಳೆದು ನಿಂತಿರುವ ಗಿಡಮರಗಳು   

ಮುಂಡರಗಿ: ಸಾಮಾನ್ಯವಾಗಿ ಸ್ಮಶಾನಗಳು ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುತ್ತವೆ.ಅಂತ್ಯ ಸಂಸ್ಕಾರಕ್ಕೆ ಹೋಗಬೇಕಾದರೆ ಸೂಕ್ತ ದಾರಿಯೂ ಇಲ್ಲದೆ ಹರಸಾಹಸ ಪಡಬೇಕು. ಆದರೆ, ಪಟ್ಟಣದಲ್ಲಿ ಅಂಜುಮನ್ ಎ–ಇಸ್ಲಾಂ ಕಮಿಟಿ ನಿರ್ವಹಣೆ ಮಾಡುತ್ತಿರುವ ಮುಸ್ಲಿಂ ಸಮುದಾಯದ ಖಬರಸ್ತಾನ ಹಾಗೂ ಈದ್ಗಾ ಮೈದಾನ ಹಸಿರಿನಿಂದ ಕಂಗೊಳಿಸುತ್ತಿವೆ.

ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮತ್ತು ಶಾದಿ ಮಹಲಿನ ಹಿಂಬದಿಯಲ್ಲಿ ಸುಮಾರು 16 ಎಕರೆ ವಿಶಾಲವಾದ ಪ್ರದೇಶದಲ್ಲಿ ಈ ಖಬರಸ್ತಾನ ಇದೆ. ಇಲ್ಲಿ ಬೇವು, ಆಲ, ಹುಣಸೆ, ಜಂಬು ನೀರಳೆ ಸೇರಿದಂತೆ 15ಕ್ಕೂ ಹೆಚ್ಚು ಜಾತಿಯ 3 ಸಾವಿರ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ.ಇವುಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದರಿಂದ ಹಸಿರು ಹೊನ್ನು ಮಿನುಗುತ್ತಿದೆ. ಜತೆಗೆ ಈ ಭಾಗದ ಅಂತರ್ಜಲ ವೃದ್ಧಿಗೂ ಈ ವೃಕ್ಷಗಳು ಮಹತ್ವದ ಕೊಡುಗೆ ನೀಡಿವೆ.

ದಶಕಗಳ ಹಿಂದೆ ಈ ಪ್ರದೇಶವು ಪಾಳು ಬಿದ್ದಿತ್ತು. ಇಲ್ಲಿ ಸಸಿಗಳನ್ನು ನೆಟ್ಟರೆ, ನೆರಳಾಗುತ್ತದೆ ಮತ್ತು ಪಕ್ಷಿಗಳಿಗೆ ನೆರಳು ಮತ್ತು ಆಶ್ರಯ ನೀಡಿದಂತಾಗುತ್ತದೆ ಎಂದು ಭಾವಿಸಿದ ಅಂಜುಮನ್ ಎ ಇಸ್ಲಾಂ ಕಮೀಟಿ ಪದಾಧಿಕಾರಿಗಳು 2 ಸಾವಿರ ಸಸಿಗಳನ್ನು ನೆಟ್ಟರು. 2 ವರ್ಷಗಳ ಹಿಂದೆ ಇನ್ನುಳಿದ ಖಾಲಿ ಪ್ರದೇಶದಲ್ಲಿ ಸುಮಾರು ಒಂದು ಸಾವಿರ ಸಸಿಗಳನ್ನು ನೆಟ್ಟರು. ಈಗ ಅವೂ ಸಹಿತ ಸೊಗಸಾಗಿ ಬೆಳೆದು ನಿಂತಿವೆ.

ADVERTISEMENT

ಬಕ್ರಿದ್, ರಂಜಾನ್ ಹಾಗೂ ಮತ್ತಿತರ ಧಾರ್ಮಿಕ ಸಂದರ್ಭದಲ್ಲಿ ಮುಸ್ಲಿಮರೆಲ್ಲ ತಂಪಾದ ನೆರಳಿನಲ್ಲಿ ಕುಳಿತು ನಮಾಜ್ ಮಾಡುತ್ತಾರೆ. ಅಂತ್ಯ ಸಂಸ್ಕಾರಕ್ಕೆ ತೆರಳಿದ ವಯೋವೃದ್ಧರು ತಂಪಾದ ಗಿಡಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಸಾವಿರಾರು ಪಕ್ಷಿಗಳು ಹಾಗೂ ಜೇನುಹುಳುಗಳು ಗಿಡಗಳಲ್ಲಿ ಗೂಡು ಕಟ್ಟಿಕೊಂಡು ಸಂತೋಷದಿಂದ ಜೀವಿಸುತ್ತಿವೆ.

‘ಖಬರಸ್ತಾನದ ಸುತ್ತ ಬೇಲಿ ಇಲ್ಲದ್ದರಿಂದ ಜನ, ಜಾನುವಾರುಗಳಿಂದ ಸಸಿಗಳನ್ನು ಸಂರಕ್ಷಣೆ ಮಾಡುವುದು ಸವಾಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ಸ್ಮಶಾನದ ಸುತ್ತಲೂ ತಂತಿ ಬೇಲಿ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ' ಎನ್ನುವುದು ಅಂಜುಮನ್ ಎ– ಇಸ್ಲಾಂ ಕಮಿಟಿ ಅಧ್ಯಕ್ಷ ಎನ್.ಡಿ.ಕೆಲೂರ ಹಾಗೂ ಪದಾಧಿಕಾರಿಗಳ ಒತ್ತಾಯ.

*
ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಇಲ್ಲಿಗೆ ಬರುವವರಿಗೆ ಮರಗಳ ನೆರಳಿನಲ್ಲಿ, ಮಲೆನಾಡಿನ ಕಾಡಿನಂಚಿನಲ್ಲಿ ಸಂಚರಿಸಿದ ಅನುಭವವಾಗುತ್ತದೆ.
–ಎನ್.ಡಿ.ಕೆಲೂರ, ಅಂಜುಮನ್ ಎ– ಇಸ್ಲಾಂ ಕಮಿಟಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.