ADVERTISEMENT

ನಡೆಯದ ‘ಗದಗ ಬಂದ್‌’; ಎಲ್ಲೆಡೆ ಪೊಲೀಸ್‌ ಸರ್ಪಗಾವಲು

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:20 IST
Last Updated 26 ಮೇ 2025, 16:20 IST
ಗದಗ ಬಂದ್‌ಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ಬಂದ್‌ ನಡೆಸಲು ಅವಕಾಶ ಕಲ್ಪಿಸದಂತೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಹಾಕಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು
ಗದಗ ಬಂದ್‌ಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ಬಂದ್‌ ನಡೆಸಲು ಅವಕಾಶ ಕಲ್ಪಿಸದಂತೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಹಾಕಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು   

ಗದಗ: ತೋಂಟದಾರ್ಯ ಮಠದ ರಥಬೀದಿಯಲ್ಲಿ 40 ದಿನಗಳ ಕಾಲ ನಡೆಯುವ ಜಾತ್ರೆಗೆ ವಿರೋಧ ವ್ಯಕ್ತಪಡಿಸಿ ಶ್ರೀರಾಮ ಸೇನೆಯು ವಿವಿಧ ಸಂಘಟನೆಗಳ ಜತೆಗೂಡಿ ಕರೆ ನೀಡಿದ್ದ ಸೋಮವಾರದ ‘ಗದಗ ಬಂದ್‌’ಗೆ ಪೊಲೀಸರು ಅವಕಾಶ ನೀಡಲಿಲ್ಲ. ಪೊಲೀಸ್‌ ಸರ್ಪಗಾವಲಿನ ನಡುವೆಯೂ ಪ್ರತಿಭಟನೆ ಮುಂದಾದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು, ಬಂದ್‌ ಸಂಪೂರ್ಣ ನಿಷ್ಕ್ರಿಯಗೊಳಿಸಿದರು.

‘ಸೋಮವಾರ ಕರೆ ನೀಡಿರುವ ಬಂದ್‌ಗೆ ಅವಕಾಶ ನೀಡುವುದಿಲ್ಲ. ಎಂದಿನಂತೆ ಸೋಮವಾರ ಕೂಡ ಜಾತ್ರೆ ನಡೆಯಲಿದೆ. ಸಾರ್ವಜನಿಕರು ಗೊಂದಲಕ್ಕೆ ಬೀಳಬಾರದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ ಭಾನುವಾರವೇ ಮಾಧ್ಯಮಗಳ ಮೂಲಕ ಜನರಿಗೆ ತಿಳಿಸಿದ್ದರು.

ಅದರಂತೆ, ಸೋಮವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಬೆಳಿಗ್ಗೆ 6 ಗಂಟೆಯಿಂದಲೇ ತೋಂಟದಾರ್ಯ ಮಠ ಪ್ರವೇಶ ಇರುವ ನಾಲ್ಕು ದಿಕ್ಕಿನಲ್ಲೂ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿತ್ತು.

ADVERTISEMENT

ನಿಷೇಧಾಜ್ಞೆ ನಡುವೆಯೇ ಬೆಳಿಗ್ಗೆ 10 ಗಂಟೆ ಸುಮಾರಿಗೆ ಶ್ರೀರಾಮ ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಲು ಮುಂದಾದರು. ಮಠದ ವಿರುದ್ಧ ಧಿಕ್ಕಾರ ಕೂಗಿದರು. ಜೈ ಶ್ರೀರಾಮ್‌ ಘೋಷಣೆ ಮೊಳಗಿಸುತ್ತ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು.

ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಡಿಆರ್‌ ವ್ಯಾನ್‌ನಲ್ಲಿ ಕರೆದೊಯ್ದರು.

ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಾಗೂ ತೋಂಟದಾರ್ಯ ಜಾತ್ರಾ ಸಮಿತಿಯವರು ಹಲವು ದಿನಗಳಿಂದ ಬಂದ್‌ಗೆ ಕಿವಿಗೊಡದಿರಿ ಎಂದು ಸ್ಪಷ್ಟನೆ ನೀಡುತ್ತಲೇ ಬಂದಿದ್ದರಿಂದ ನಗರದಲ್ಲಿ ಸೋಮವಾರ ಯಥಾಸ್ಥಿತಿ ಇತ್ತು. ಮಧ್ಯಾಹ್ನವಾಗುತ್ತಿದ್ದಂತೆ ಜಾತ್ರೆ ಆರಂಭಗೊಂಡಿತು. ಸಂಜೆ ಆಗುತ್ತಿದ್ದಂತೆ ಜನರು ಬಂದರು. ಯಥಾರೀತಿ ಜಾತ್ರೆ ಕಳೆಗಟ್ಟಿತು.

ಸೋಮವಾರ ಬೆಳಿಗ್ಗೆ ಬಿಕೋ ಎನ್ನುತ್ತಿದ್ದ ಜಾತ್ರೆ
ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು
ಗದಗ ಬಂದ್‌ಗೆ ಅವಕಾಶ ನೀಡದ ಕಾರಣ ಸೋಮವಾರ ಜಾತ್ರೆ ಎಂದಿನಂತೆ ನಡೆಯಿತು
ಪ್ರತಿಭಟನೆಗೆ ಮುಂದಾದ ಶ್ರೀರಾಮ ಸೇನೆ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಹಾಗೂ ಸಂಗಡಿಗರನ್ನು ಪೊಲೀಸರು ತಡೆದರು

ನಾಲ್ಕು ದಿಕ್ಕಿನಲ್ಲೂ ಪೊಲೀಸ್‌ ಬಿಗಿಭದ್ರತೆ

ಅನ್ಯ ರಾಜ್ಯದ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟು ಸ್ಥಳೀಯ ಬೀದಿಬದಿ ವ್ಯಾಪಾರಿಗಳ ಜೀವನಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಆರೋಪಿಸಿದ್ದರಿಂದ ಕಾರ್ಯಕರ್ತರು ಹಾಗೂ ಮಠದ ಭಕ್ತರ ನಡುವೆ ತಿಕ್ಕಾಟ ಆರಂಭಗೊಂಡಿತ್ತು. ಇದು ಗದಗ ಬಂದ್‌ ಕರೆಗೂ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಸೋಮವಾರ ತೋಂಟದಾರ್ಯ ಮಠ ಹಾಗೂ ಜಾತ್ರೆಗೆ ಪ್ರವೇಶ ಇರುವ ಮಾರ್ಗಗಳಲ್ಲೆಲ್ಲಾ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿತ್ತು. ಪ್ರತಿಭಟನಕಾರರು ಯಾವ ಮಾರ್ಗದಿಂದಲೂ ಜಾತ್ರೆ ನಡೆಯುವ ಸ್ಥಳಕ್ಕೆ ಬರಲು ಅವಕಾಶ ಇಲ್ಲದಂತೆ ಪೊಲೀಸ್‌ ವ್ಯೂಹ ರಚಿಸಲಾಗಿತ್ತು. ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ ಸೋಮವಾರ ಬೆಳಿಗ್ಗೆಯಿಂದಲೇ ತೋಂಟದಾರ್ಯ ಮಠ ಹಾಗೂ ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಸರ್ಪಗಾವಲು ಕಾವಲು ಕಾಯುತ್ತಿತ್ತು. ಎಎಸ್‌ಪಿ ನಾಲ್ವರು ಡಿವೈಎಸ್‌ಪಿ ಹತ್ತು ಸಿಪಿಐ ಹತ್ತು ಪಿಎಸ್ಐ 200ಕ್ಕೂ ಹೆಚ್ಚು ಸಿಬ್ಬಂದಿ ಸೇರಿದಂತೆ ಎರಡು ಕೆಎಸ್‌ಆರ್‌ಪಿ ತುಕಡಿಗಳು ಹಾಗೂ ಆರು ಡಿಆರ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ನೇಮಗೌಡ ತೋಂಟದಾರ್ಯ ಮಠ ಹಾಗೂ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸಿಬ್ಬಂದಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.