ಸಾಂಕೇತಿಕ ಚಿತ್ರ
ಗದಗ: ‘ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿಯ ಅವೈಜ್ಞಾನಿಕ ವರ್ಗೀಕರಣ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 6ರಿಂದ 17ರ ವರೆಗೆ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಬಂಜಾರ ಹೋರಾಟ ಸಮಿತಿ ಅಧ್ಯಕ್ಷ ರವಿಕಾಂತ ಅಂಗಡಿ ತಿಳಿಸಿದರು.
‘ಅಕ್ಟೋಬರ್ 6ರಂದು ಬೆಳಿಗ್ಗೆ 11ಕ್ಕೆ ನಗರದ ಮಹಾತ್ಮ ಗಾಂಧಿ ಸರ್ಕಲ್‌ನಿಂದ ಗದಗ ಜಿಲ್ಲಾಡಳಿತ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಿ, ಬಳಿಕ ಅಹೋರಾತ್ರಿ ಧರಣಿಗೆ ಚಾಲನೆ ನೀಡಲಾಗುವುದು. ನಾಯಕ, ಡಾವಸಾಣ, ಕಾರಭಾರಿ ಹಾಗೂ ಪಂಚರ ನೇತೃತ್ವದಲ್ಲಿ ಹೋರಾಟ ನಡೆಯಲಿದೆ’ ಎಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸ್ಪೃಶ್ಯ–ಅಸ್ಪೃಶ್ಯ ಎಂಬ ಪದ ಬಳಕೆಯನ್ನು ಕಡತದಿಂದ ತೆಗೆದುಹಾಕಿ, ದಮನಿತ ಜಾತಿಗಳೆಂದು ಹೆಸರಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ‘ಸಿ’ ವರ್ಗದವರಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಶೇ 6 ಮೀಸಲಾತಿ ನೀಡಬೇಕು. ಹಲವು ಆಯೋಗಗಳ ವರದಿಯಲ್ಲಿರುವಂತೆ ಅಲೆಮಾರಿಗಳಿಗೂ ಪ್ರತ್ಯೇಕ ಶೇ 1 ಮೀಸಲಾತಿ ನೀಡಬೇಕು. ಖಾಸಗಿ ವಲಯದಲ್ಲೂ ಮೀಸಲಾತಿ ಕಲ್ಪಿಸಲು ಸರ್ಕಾರ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
‘ವಲಸೆ ಹೋದವರ ಮಾಹಿತಿ ಪಡೆಯದೇ ಹಾಗೂ ನಗರದ ಪ್ರದೇಶದ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಅಪೂರ್ಣ ಮಾಹಿತಿ ಹೊಂದಿರುವ ನಾಗಮೋಹನ್‌ದಾಸ್ ವರದಿ ತಿರಸ್ಕರಿಸಿ, ಕೇಂದ್ರ ಸರ್ಕಾರ ನಡೆಸುವ ಜಾತಿಗಣತಿವರೆಗೆ ಒಳ ಮೀಸಲಾತಿ ವರ್ಗೀಕರಣ ಆದೇಶವನ್ನು ರಾಜ್ಯ ಸರ್ಕಾರ ತಡೆಹಿಡಿಯಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಟಿ.ಎಲ್.ನಾಯಕ, ಚಂದು ನಾಯಕ, ಶಿವಪ್ಪ ನಾಯಕ, ಕೇಶಪ್ಪ ಕಾರಭಾರಿ, ಕುಬೇರಪ್ಪ ನಾಯಕ, ಖೀಮಪ್ಪ ನಾಯಕ, ತೇಜು ನಾಯಕ, ಶಿವಪುತ್ರ ನಾಯಕ, ಸಂಕದ, ಪರಮೇಶ ನಾಯಕ, ಸುರೇಶ ಪೂಜಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.