ಬಂಧನ
(ಪ್ರಾತಿನಿಧಿಕ ಚಿತ್ರ)
ಗದಗ: ನಗರದ ಮುಳಗುಂದನಾಕಾ ಬಳಿಯ ದುರ್ಗಾ ಬಾರ್ ಎದುರು ಬುಧವಾರ ರಾತ್ರಿ ಮೂವರು ಕಿಡಿಗೇಡಿಗಳು ಯುವಕನ ಮೇಲೆ ತಲ್ವಾರ್, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ದಾಸರಓಣಿಯ ಅರುಣ್‌ಕುಮಾರ್ ಕೋಟೆಗಲ್ಲ (30) ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆಯುವುದಕ್ಕೂ ಮುನ್ನ ಅರುಣ್‌ಕುಮಾರ್ ಹೋಟೆಲ್‌ನಲ್ಲಿ ಆಹಾರ ಸೇವಿಸುತ್ತಿದ್ದರು. ಈ ವೇಳೆ ಆರೋಪಿಗಳಾದ ಮುಷ್ತಾಕ್, ಅಭಿಷೇಕ್ ಮತ್ತು ಸಾಹಿಲ್ ಏಕಾಏಕಿ ಅರುಣ್ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿದ್ದಾರೆ. ಆಗ ಅರುಣ್ ತಪ್ಪಿಸಿಕೊಂಡು ಹೊರಕ್ಕೆ ಓಡಿದ್ದಾರೆ. ಅಲ್ಲಿಗೂ ಅಟ್ಟಾಡಿಸಿಕೊಂಡು ಬಂದ ಆರೋಪಿಗಳು ಬಿಯರ್ ಬಾಟಲಿಯಿಂದ ಅರುಣ್ ತಲೆಗೆ ಹೊಡೆದಿದ್ದಾರೆ.
ಯುವಕನ ಮೇಲೆ ಆರೋಪಿಗಳು ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.
‘ಅರುಣ್ ಕುಮಾರ್ ಮೇಲೆ ಆರೋಪಿಗಳಾದ ಮುಷ್ತಾಕ್, ಅಭಿಷೇಕ್ ಮತ್ತು ಸಾಹಿಲ್ ತಲ್ವಾರ್ ಮತ್ತು ಬಿಯರ್ ಬಾಟಲಿಯಿಂದ ಹೊಡೆದ ಪರಿಣಾಮ ಅರುಣ್ ದೇಹದಲ್ಲಿ ಕೊಯ್ದ ಗಾಯಗಳಾಗಿವೆ. ತಲೆಗೆ ಪೆಟ್ಟುಬಿದ್ದಿದೆ. ಅರುಣ್ ಮತ್ತು ಆರೋಪಿಗಳು ಸ್ನೇಹಿತರಿದ್ದು, ಹಳೆ ವೈಷಮ್ಯದ ಕಾರಣ ಹಲ್ಲೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.
‘ಅರುಣ್ ತರಕಾರಿ ವ್ಯಾಪಾರಿ. ಆರೋಪಿಗಳಾದ ಅಭಿಷೇಕ್ ಮತ್ತು ಮುಷ್ತಾಕ್ ಮಂದಿ ಆಟೊ ಡ್ರೈವರ್‌ಗಳು. ಸಾಹಿಲ್ ಬಾರ್‌ಬೆಂಡಿಂಗ್ ಕೆಲಸ ಮಾಡುತ್ತಾನೆ. ಘಟನೆ ನಡೆದ ಒಂದೂವರೆ ಗಂಟೆ ಒಳಗಾಗಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.