
ಗದಗ: ನಕಲಿ ಠರಾವು ಸೃಷ್ಟಿಸಿದ ಆರೋಪಕ್ಕೆ ಗುರಿಯಾಗಿದ್ದ ಗದಗ ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ನೀಡಿದ್ದ ಆದೇಶವನ್ನು ಧಾರವಾಡ ಹೈಕೋರ್ಟ್‌ನ ಏಕಸದಸ್ಯ ಪೀಠ ಮಂಗಳವಾರ ಎತ್ತಿ ಹಿಡಿದಿದೆ.
ಮುಂದುವರಿದು, ಪ್ರಾದೇಶಿಕ ಆಯುಕ್ತರ ಅನರ್ಹತೆ ಆದೇಶ ಪ್ರಶ್ನಿಸಿ ನಗರಸಭೆ ಸದಸ್ಯರಾದ ಉಷಾ ದಾಸರ, ಅನಿಲ್ ಅಬ್ಬಿಗೇರಿ ಹಾಗೂ ಮುತ್ತು ಮುಶಿಗೇರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಜತೆಗೆ ಮುಂದಿನ 45 ದಿನಗಳ ಒಳಗಾಗಿ ಗದಗ ಬೆಟಗೇರಿ ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸುವಂತೆಯೂ ಆದೇಶಿಸಿದೆ.
ಪ್ರಕರಣದ ಹಿನ್ನಲೆ:
ನಗರಸಭೆಗೆ ಸೇರಿದ್ದ 54 ವಕಾರಸಾಲು ಆಸ್ತಿಯನ್ನು ಅಕ್ರಮವಾಗಿ ಗುತ್ತಿಗೆ ನೀಡಲು ನಕಲಿ ಠರಾವು ಸೃಷ್ಟಿಸಿ, ಅದಕ್ಕೆ ಪೌರಾಯುಕ್ತರ ಸಹಿ ಫೋರ್ಜರಿ ಮಾಡಿದ ಆರೋಪ ಹಿಂದಿನ ಅಧ್ಯಕ್ಷೆಯಾಗಿದ್ದ ಉಷಾ ದಾಸರ, ಸದಸ್ಯರಾದ ಅನಿಲ್ ಅಬ್ಬಿಗೇರಿ ಹಾಗೂ ಗೂಳಪ್ಪ ಮುಶಿಗೇರಿ ಅವರ ಮೇಲಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಪ್ರಾದೇಶಿಕ ಆಯುಕ್ತರು 2025ರ ಫೆಬ್ರುವರಿ 15ರಂದು ಬಿಜೆಪಿಯ ಮೂವರು ನಗರಸಭಾ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಆದೇಶಿಸಿದ್ದರು. ಇದಾದ ಬಳಿಕ, ಗದ್ದುಗೆ ಗುದ್ದಾಟ ಕೋರ್ಟ್ ಅಂಗಳ ತಲುಪಿತ್ತು. ಎರಡೂ ಪಕ್ಷದವರಿಂದ ಕಾನೂನು ಹೋರಾಟಗಳು ನಡೆದಿದ್ದವು.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ 2025ರ ಫೆ.28ರಂದೇ ನಿಗದಿಯಾಗಿದ್ದ ಕಾರಣ ಸದಸ್ಯತ್ವ ಅನರ್ಹ ಆದೇಶ ಬಿಜೆಪಿ ಸದಸ್ಯರಿಗೆ ನಿರಾಸೆ ತರಿಸಿತ್ತು. ಆದರೂ, ಫೆ.28ರಂದು ಬೆಳಿಗ್ಗೆಯೇ ಧಾರಾವಾಡ ಹೈಕೋರ್ಟ್ ಪೀಠದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡುವಂತೆ ಬಿಜೆಪಿ ಸದಸ್ಯರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮಾರ್ಚ್ 5ರವರೆಗೆ ಚುನಾವಣೆ ನಡೆಸದಂತೆ ಆದೇಶ ನೀಡಿತ್ತು. ಆದರೆ, ಚುನಾವಾಣಾಧಿಕಾರಿ ಗಂಗಪ್ಪ ಎಂ., ‘ಕೋರ್ಟ್ ನೀಡಿದ ಆದೇಶ ಪ್ರತಿ ಚುನಾವಣಾ ಪೂರ್ವದಲ್ಲಿ ಸಿಕ್ಕಿಲ್ಲ’ ಎಂದು ಹೇಳಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ, ಅಧ್ಯಕ್ಷ– ಉಪಾಧ್ಯಕ್ಷರ ಆಯ್ಕೆ ಘೋಷಣೆ ಮಾಡಿದ್ದರು. ಅದರಂತೆ ಫೆ. 28ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರಾದ ಕೃಷ್ಣಾ ಪರಾಪುರ ಮತ್ತು ಶಕುಂತಲಾ ಅಕ್ಕಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದನ್ನು ತೀವ್ರವಾಗಿ ವಿರೋಧಿಸಿದ್ದ ಬಿಜೆಪಿ ಸದಸ್ಯರು, ನ್ಯಾಯಾಂಗ ನಿಂದನೆಯ ಅಸ್ತ್ರ ಹಿಡಿದು ಮತ್ತೇ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗೆ ಕಳೆದ ಒಂದು ವರ್ಷದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಕಾನೂನು ಹೋರಾಟದ ಮೂಲಕ ಗದ್ದುಗೆ ಗುದ್ದಾಟವನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ.
ಈ ನಡುವೆ, ಸದಸ್ಯರ ಅನರ್ಹತೆ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದರು ಕೂಡ ಚುನಾವಣಾ ಅಧಿಕಾರಿಗಳಿಂದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದೆ. ಜತೆಗೆ ಮುಂದಿನ 45 ದಿನಗಳ ಒಳಗಾಗಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಬಿಜೆಪಿಯ ಅನರ್ಹ ಸದಸ್ಯರು ಮುಂದೆ ಕೂಡ ಸದಸ್ಯತ್ವ ಪಡೆಯಲು ವಿಫಲರಾದಲ್ಲಿ ನಗರಸಭೆ ಗದ್ದುಗೆ ಕಾಂಗ್ರೆಸ್ ಪಾಲಾಗುವುದು ನಿಶ್ಚಿತ. ಅಲ್ಲೀವರೆಗೆ, ನಗರಸಭೆಯಲ್ಲಿ ಆಡಳಿತಾಧಿಕಾರಿ ಅಧಿಕಾರವೇ ಮುಂದುವರಿಯುವುದು ಸ್ಪಷ್ಟವಾಗಿದೆ.
ಬಿಜೆಪಿ ಸದಸ್ಯರ ನಗರಸಭೆ ಸದಸ್ಯತ್ವ ಅನರ್ಹತೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶದ ಪ್ರತಿ ಇನ್ನೂ ಕೈಸೇರಿಲ್ಲ. ಕೋರ್ಟ್ ಸೂಚನೆಯಂತೆ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ.ಗಂಗಪ್ಪ ಎಂ. ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.