ADVERTISEMENT

ಗದಗ ಜಿಲ್ಲಾ ಬ್ರಾಹ್ಮಣರ ಬೃಹತ್ ಸಮಾವೇಶ 7ರಂದು

​ಪ್ರಜಾವಾಣಿ ವಾರ್ತೆ
Published 5 ಮೇ 2022, 2:36 IST
Last Updated 5 ಮೇ 2022, 2:36 IST

ಗದಗ: ತಾಲ್ಲೂಕು ಬ್ರಾಹ್ಮಣ ಸಂಘ ಹಾಗೂ ಜಿಲ್ಲೆಯ ವಿವಿಧ ಬ್ರಾಹ್ಮಣ ಸಂಘಟನೆಗಳ ವತಿಯಿಂದ ಮೇ 7ರಂದು ಸಂಜೆ 4ಕ್ಕೆ ನಗರದ ಸಂಭಾಪೂರ ರಸ್ತೆಯಲ್ಲಿರುವ ಶಂಕರ ಮಠದ ಸಮುದಾಯ ಭವನದಲ್ಲಿ ಗದಗ ಜಿಲ್ಲಾ ಬ್ರಾಹ್ಮಣರ ಬೃಹತ್ ಸಮಾವೇಶ ನಡೆಯಲಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ ನಾಡಜೋಶಿ ಹೇಳಿದರು.

ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಹಾರನಹಳ್ಳಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಹಿರಿಯರಾದ ಹಿರಣ್ಯಸ್ವಾಮಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ವಸಂತ ನಾಡಜೋಶಿ ಉಪಸ್ಥಿತರಿರುವರು’ ಎಂದು ತಿಳಿಸಿದರು.

ರಾಜ್ಯದಲ್ಲಿ 40ರಿಂದ 45 ಲಕ್ಷದಷ್ಟಿರುವ ಬ್ರಾಹ್ಮಣರನ್ನು ಒಗ್ಗೂಡಿಸಲು ಸಮಾವೇಶ ಮಾಡಲಾಗುತ್ತಿದೆ. ಜಿಲ್ಲೆಯಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿರುವ ಗುರಣ್ಣ ಬಳಗಾನೂರ ಅವರು ಸಂಘಟನೆ ಜೊತೆಗೆ ಸದಸ್ಯತ್ವ ಹೆಚ್ಚಿಸಲು ಪ್ರತಿ ಜಿಲ್ಲೆಯಲ್ಲೂ ರಾಜ್ಯ ಘಟಕದ ಅಧ್ಯಕ್ಷರು ಪ್ರವಾಸ ಮಾಡುತ್ತಿದ್ದಾರೆ ಎಂದರು ಹೇಳಿದರು.

ADVERTISEMENT

ಗದಗ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ‘ನಿಗಮದಿಂದ ಸಮಾಜದವರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು. ಸಮಾವೇಶದಲ್ಲಿ 500 ಜನ ಸೇರುವ ನಿರೀಕ್ಷೆ ಇದೆ. ಅಶೋಕ ಹಾರನಹಳ್ಳಿ ಅವರು ಕಾರ್ಯಕ್ರಮಕ್ಕೂ ಮುನ್ನ ಮಧ್ಯಾಹ್ನ 2.30ಕ್ಕೆ ತ್ರಿಕೂಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಅಲ್ಲಿಂದ ಅವರನ್ನು ಬೈಕ್ ರ‍್ಯಾಲಿ ಮೂಲಕ ವೀರನಾರಾಯಣ ದೇವಸ್ಥಾನವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು’ ಎಂದು ಹೇಳಿದರು.

ಗದಗ ಜಿಲ್ಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಿರೀಶ ಕುಲಕರ್ಣಿ, ಮುಖಂಡರಾದ ರಾಜಗೋಪಾಲಾಚಾರ್ಯ ಮಳಗಿ, ವೆಂಕಟೇಶ ಗುಡಿ, ಅನೀಲ ತೆಂಬದಮನಿ, ಬನೇಶ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.