ADVERTISEMENT

ಗದಗ: ಸರ್ಕಾರಿ ಶಾಲೆಗಳಿಗೆ ಬೇಕಿದೆ ಸ್ವಚ್ಛ ಶೌಚಾಲಯ

ಶೌಚಾಲಯಗಳ ದುರಸ್ತಿಗೆ ವಿಶೇಷ ಕ್ರಮ; ಜಿಲ್ಲಾ ಪಂಚಾಯಿತಿಯಿಂದ ಮಾದರಿ ಹೆಜ್ಜೆ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 22 ಜೂನ್ 2025, 5:10 IST
Last Updated 22 ಜೂನ್ 2025, 5:10 IST
ಗದಗ ನಗರದ ಹೆಲ್ತ್‌ ಕ್ಯಾಂಪ್‌ನಲ್ಲಿರುವ ಸರ್ಕಾರಿ ಶಾಲೆಯ ಶೌಚಾಲಯದ ದುಃಸ್ಥಿತಿ
ಗದಗ ನಗರದ ಹೆಲ್ತ್‌ ಕ್ಯಾಂಪ್‌ನಲ್ಲಿರುವ ಸರ್ಕಾರಿ ಶಾಲೆಯ ಶೌಚಾಲಯದ ದುಃಸ್ಥಿತಿ   

ಗದಗ: ಜಿಲ್ಲೆಯಲ್ಲಿರುವ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ಹೆಸರಿಗಷ್ಟೇ ಎಂಬಂತೆ ಇದ್ದು, ವಿದ್ಯಾರ್ಥಿಗಳು ಶೌಚ ಹಾಗೂ ಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶೌಚಾಲಯಗಳು ಸ್ವಚ್ಛವಾಗಿರುವುದು ಮುಖ್ಯ. ಹಾಗಾಗಿ, ಶಾಲೆಗಳಲ್ಲಿನ ಶೌಚಾಲಯಗಳನ್ನು ದುರಸ್ತಿ ಮಾಡುವುದರ ಜತೆಗೆ ಅವು ವಿದ್ಯಾರ್ಥಿಸ್ನೇಹಿ, ಬಳಕೆಸ್ನೇಹಿ ಆಗುವಂತೆ ಮಾಡುವಲ್ಲಿ ಶಿಕ್ಷಣ ಇಲಾಖೆ ಕ್ರಮವಹಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಈ ನಿಟ್ಟಿನಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ಉತ್ತಮ ಹೆಜ್ಜೆ ಇರಿಸಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ಆಶಾಭಾವ ಮೂಡಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಅವರು ಜಿಲ್ಲೆಯಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶೌಚಾಲಯಗಳು ವ್ಯವಸ್ಥಿತವಾಗಿ ಇರಲು ಕ್ರಮ ವಹಿಸುವಂತೆ ಕಳೆದ ತಿಂಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅದರಂತೆ, ಶಿಕ್ಷಣ ಇಲಾಖೆಯು ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳ ಶೌಚಾಲಯಗಳ ಸದ್ಯದ ಸ್ಥಿತಿಗತಿ ಕುರಿತಂತೆ ಸಮಗ್ರ ಮಾಹಿತಿ ಸಂಗ್ರಹಿಸಿದೆ. ಅವುಗಳ ದುರಸ್ತಿಗೆ ವೆಚ್ಚವಾಗುವ ಹಣಕ್ಕೆ ಅನುಗುಣವಾಗಿ ಎ, ಬಿ, ಸಿ ಮತ್ತು ಡಿ ಕೆಟಗರಿ ಮಾಡಿ, ದುರಸ್ತಿಗೆ ಯೋಜನೆ ಸಿದ್ಧಪಡಿಸಿದೆ.

ADVERTISEMENT

ಗದಗ ಜಿಲ್ಲೆಯಲ್ಲಿ ₹10 ಸಾವಿರದ ಒಳಗೆ ದುರಸ್ತಿ ಮಾಡಬಹುದಾದ 64 ಶೌಚಾಲಯಗಳನ್ನು ಶಿಕ್ಷಣ ಇಲಾಖೆ ಗುರುತಿಸಿದೆ. ಈ ಪೈಕಿ 27 ಶೌಚಾಲಯಗಳ ದುರಸ್ತಿ ಮಾಡಿಸಿದೆ. 27 ಶೌಚಾಲಯಗಳ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ. ಗದಗ ನಗರ 7, ಗ್ರಾಮೀಣ 3 ಹಾಗೂ ರೋಣ ತಾಲ್ಲೂಕಿನಲ್ಲಿ 3 ಶೌಚಾಲಯಗಳು ಸೇರಿದಂತೆ ಒಟ್ಟು 10 ಶೌಚಾಲಯಗಳ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ.

ಅದೇರೀತಿ, ಬಿ ಕೆಟಗರಿಯಲ್ಲಿ ₹10 ಸಾವಿರದಿಂದ ₹50 ಸಾವಿರದ ಒಳಗಡೆ ದುರಸ್ತಿಗೊಳ್ಳಬಹುದಾದ 225 ಶೌಚಾಲಯಗಳನ್ನು ಗುರುತಿಸಿದೆ. ಈ ಪೈಕಿ ವಿವಿಧ ಅನುದಾನ ಬಳಸಿ 43 ಶೌಚಾಲಯಗಳ ದುರಸ್ತಿ ಪೂರ್ಣಗೊಳಿಸಿದೆ. 54 ಶೌಚಾಲಯಗಳ ದುರಸ್ತಿ ಪ್ರಗತಿಯಲ್ಲಿದೆ. ಸಿ ಕೆಟಗರಿಯಲ್ಲಿ ₹50 ಸಾವಿರದಿಂದ ₹70 ಸಾವಿರ ವೆಚ್ಚ ತಗಲುವ ಒಟ್ಟು 15 ಶೌಚಾಲಯಗಳನ್ನು ದುರಸ್ತಿಗೆ ಗುರುತಿಸಿದೆ. ಈ ಪೈಕಿ ಒಂದು ಶೌಚಾಲಯದ ದುರಸ್ತಿ ಮುಗಿದಿದ್ದು, ಉಳಿದವು ಆರಂಭವಾಗಬೇಕಿದೆ.

₹70 ಸಾವಿರದಿಂದ ₹1 ಲಕ್ಷಕ್ಕೂ ಅಧಿಕ ದುರಸ್ತಿ ವೆಚ್ಚ ಇರುವ 34 ಶಾಲಾ ಶೌಚಾಲಯಗಳು ಜಿಲ್ಲೆಯಲ್ಲಿವೆ. ಇದರಲ್ಲಿ ಏಳು ಶೌಚಾಲಯಗಳ ದುರಸ್ತಿ ಕಾರ್ಯ ಮುಗಿದಿದೆ. ಐದು ಶೌಚಾಲಯಗಳ ಕೆಲಸ ಪ್ರಗತಿಯಲ್ಲಿದೆ. 22 ಶೌಚಾಲಯಗಳ ದುರಸ್ತಿ ಇನ್ನಷ್ಟೇ ಪ್ರಾರಂಭಗೊಳ್ಳಬೇಕಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಶೌಚಾಲಯವೇ ಇಲ್ಲದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ನರೇಗಾ ಯೋಜನೆ ಅಡಿ ಕಟ್ಟಲು ಅವಕಾಶ ಇದೆ. ಆದರೆ ದುರಸ್ತಿಗೆ ವಿವಿಧ ಅನುದಾನ ಬಳಸಿ ಸರಿಪಡಿಸಲು ಕ್ರಮವಹಿಸಲಾಗಿದೆ
ಭರತ್‌ ಎಸ್‌. ಜಿಲ್ಲಾ ಪಂಚಾಯಿತಿ ಸಿಇಒ
ಜಿಲ್ಲೆಯಲ್ಲಿ 689 ಶಾಲಾ ಶೌಚಾಲಯಗಳಿದ್ದು ಅವುಗಳ ಪೈಕಿ 338 ಶೌಚಾಲಯಗಳನ್ನು ದುರಸ್ತಿಗೆ ಗುರುತಿಸಲಾಗಿದೆ. ಈ ಪೈಕಿ 78 ಶೌಚಾಲಯಗಳ ದುರಸ್ತಿ ಮುಗಿದಿದೆ. 88 ಶೌಚಾಲಯಗಳ ದುರಸ್ತಿ ಪ್ರಗತಿಯಲ್ಲಿದೆ.
ಆರ್‌.ಎಸ್‌.ಬುರಡಿ ಡಿಡಿಪಿಐ
ಗದಗ ನಗರ ಬಿಇಒ ಮಾದರಿ ಹೆಜ್ಜೆ
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ನೀರು ಮತ್ತು ಸ್ವಚ್ಛತೆಯ ಕೊರತೆ ಕಾರಣದಿಂದಾಗಿ ಅವು ಬಳಸಲಾಗದ ಸ್ಥಿತಿಯಲ್ಲಿವೆ. ಈ ಸಮಸ್ಯೆ ಅರಿತ ಗದಗ ನಗರ ಬಿಇಒ ಆರ್‌.ವಿ.ಶೆಟ್ಟಪ್ಪನವರ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಶೌಚಾಲಯಗಳನ್ನು ಸ್ವಚ್ಛವಾಗಿಡಲು ನಗರಸಭೆ ಅಧಿಕಾರಿಗಳನ್ನು ಸಂಪರ್ಕಿಸಿದ್ದು ಸ್ವಚ್ಛತೆಗೆ ಪೌರಕಾರ್ಮಿಕರ ನೆರವು ಒದಗಿಸುವಂತೆ ವಿನಂತಿಸಿದ್ದಾರೆ. ‘ನಗರ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛವಾಗಿಡುವ ಸಂಬಂಧ ನಗರಸಭೆ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. 10 ಶಾಲೆಗೆ ಒಬ್ಬರಂತೆ ತಿಂಗಳಿಗೆ ನಾಲ್ಕು ಅಥವಾ ಆರು ಬಾರಿ ಸ್ವಚ್ಛಗೊಳಿಸಲು ಪೌರಸಿಬ್ಬಂದಿಗೆ ಒದಗಿಸಲು ಮನವಿ ಮಾಡಲಾಗಿದೆ. ನಮ್ಮ ಮನವಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದಕ್ಕೆ ತಗಲುವ ವೆಚ್ಚವನ್ನು ದಾನಿಗಳ ನೆರವಿನಿಂದ ಭರಿಸಲು ಪ್ರಯತ್ನಿಸಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಶೌಚಾಲಯ ದುರಸ್ತಿಗೆ ಕಾರ್ಯಯೋಜನೆ ಸಿದ್ಧ: ಸಿಇಒ
‘ಗದಗ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಶೌಚಾಲಯಗಳ ದುರಸ್ತಿಗೆ ವಿಶೇಷ ಕ್ರಮವಹಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಕಾರ್ಯಯೋಜನೆ ಸಿದ್ಧಗೊಂಡಿದ್ದು ಅದರ ಅನುಸಾರ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭರತ್‌ ಎಸ್‌. ತಿಳಿಸಿದ್ದಾರೆ. ₹10 ಸಾವಿರದ ಒಳಗೆ ಮುಗಿಯಬಹುದಾದ ದುರಸ್ತಿಯನ್ನು ಸರ್ಕಾರದಿಂದ ಶಾಲೆಗಳಿಗೆ ಸಿಗುವ ನಿರ್ವಹಣಾ ವೆಚ್ಚದಿಂದಲೇ ಮಾಡಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಹೆಚ್ಚು ವೆಚ್ಚ ಬೇಡುವ ಶೌಚಾಲಯಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸಿಗುವ ಅನುದಾನ ಮತ್ತು ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ಶೌಚಾಲಯಗಳನ್ನು ಖನಿಜ ನಿಧಿ ಬಳಸಿ ದುರಸ್ತಿಗೊಳಿಸಲು ಯೋಜಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.