ADVERTISEMENT

ಗದಗ: ಹಿಂದೂ ಸಮಾಜೋತ್ಸವ, ಶೋಭಾಯಾತ್ರೆ ಫೆ.28ರಂದು

ಮುಳಗುಂದ ರಸ್ತೆಯ ಅಂಬಾಭವಾನಿ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 8:33 IST
Last Updated 27 ಫೆಬ್ರುವರಿ 2026, 8:33 IST
ಗದಗ ಶಿವಾನಂದ ಉಪನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಸಮ್ಮೇಳನ ಸಮಿತಿ ಕಾರ್ಯದರ್ಶಿ ರಾಘವೇಂದ್ರ ಹಬೀಬ ಮಾತನಾಡಿದರು
ಗದಗ ಶಿವಾನಂದ ಉಪನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಸಮ್ಮೇಳನ ಸಮಿತಿ ಕಾರ್ಯದರ್ಶಿ ರಾಘವೇಂದ್ರ ಹಬೀಬ ಮಾತನಾಡಿದರು   

ಗದಗ: ‘ಹಿಂದೂ ಹಬ್ಬಗಳು ಹಾಗೂ ಮಹಾಪುರುಷರ ಜಯಂತ್ಯುತ್ಸವ ಆಚರಣೆ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸುವ ಮನಃಸ್ಥಿತಿ ದೇಶದಲ್ಲಿ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಾತಿ, ಮತ, ಪಂಥ, ಪ್ರಾಂತ್ಯ ಬದಿಗಿರಿಸಿ ಸಮಸ್ತ ಹಿಂದೂ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಫೆ.28ರಂದು ನಗರದಲ್ಲಿ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ’ ಎಂದು ಗದಗ ಶಿವಾನಂದ ಉಪನಗರ ಹಿಂದೂ ಸಮ್ಮೇಳನ ಸಮಿತಿ ಕಾರ್ಯದರ್ಶಿ ರಾಘವೇಂದ್ರ ಹಬೀಬ ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಹಿಂದೂಗಳನ್ನು ವಿರೋಧಿಸುವ ಮತ್ತು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಸಮಸ್ತ ಹಿಂದೂಗಳು ನಾವೆಲ್ಲರೂ ಒಂದು ಎಂದಾದಾಗ ಸದೃಢ ಸಮಗ್ರ ಭಾರತ ನಿರ್ಮಾಣ ಸಾಧ್ಯವಾಗಲಿದ್ದು, ಸಮಾವೇಶ ಇದಕ್ಕೆ ಪೂರಕವಾಗಲಿದೆ’ ಎಂದರು.

‘ಫೆ. 28ರ ಶನಿವಾರ ಮಧ್ಯಾಹ್ನ 3ಕ್ಕೆ ನಗರದ ಮುಳಗುಂದ ರಸ್ತೆಯ ಅಂಬಾಭವಾನಿ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದ್ದು, ತಾಯಿ ಭಾರತಾಂಭೆಯ ಜತೆಯಲ್ಲಿ ಮಹಾಪುರುಷರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ಶೋಭಾಯಾತ್ರೆಯಲ್ಲಿ ಇರಲಿವೆ. ಶೋಭಾಯಾತ್ರೆ ಮುಳಗುಂದನಾಕಾ, ತ್ರಿಕೂಟೇಶ್ವರ ದೇವಸ್ಥಾನ, ಜೋಡಮಾರುತಿ ದೇವಸ್ಥಾನ, ಪಟೇಲ ರಸ್ತೆ, ಬಸವೇಶ್ವರ ಸರ್ಕಲ್ ಮೂಲಕ ಸಭಾಸ್ಥಳ ವೀರಶೈವ ಜನರಲ್ ಲೈಬ್ರರಿ ಬಳಿ ಸಮಾರೋಪಗೊಳ್ಳಲಿದೆ’ ಎಂದು ತಿಳಿಸಿದರು.

ADVERTISEMENT

ನಂತರ ಸಂಜೆ 6ಕ್ಕೆ ನಡೆಯುವ ಹಿಂದೂ ಸಮಾಜೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದು, ದಿಕ್ಸೂಚಿ ಭಾಷಣವನ್ನು ಜಗದೀಶ ಕಾರಂತ ಮಾಡಲಿದ್ದು, ಸಮಸ್ತ ಹಿಂದೂ ಸಮಾಜ ಬಾಂಧವರು ಶೋಭಾಯಾತ್ರೆ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುಬೇಕು ಎಂದು ಮನವಿ ಮಾಡಿದರು.

ಅರುಣ ವೇರ್ಣೇಕರ, ಸೂರಜ್‌ ನಾಯ್ಕರ, ರಾಮಚಂದ್ರ ಪಾಲನಕರ, ರತ್ನಾ ಕುರುಗೋಡ, ಅಶ್ವಿನಿ ಜಗತಾಪ ಇದ್ದರು. 

ಶೋಭಾಯಾತ್ರೆಯಲ್ಲಿ ಸಹಕುಟುಂಬ ಪರಿವಾರದೊಡನೆ ಹಾಗೂ ಸಾಂಸ್ಕೃತಿಕ ಉಡುಗೆ ತೊಡುಗೆ ತೊಟ್ಟು ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳಲಿದ್ದು ಚಿಕ್ಕಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿ ಪಾಲ್ಗೊಳ್ಳಲಿದ್ದಾರೆ.
–ಅಶ್ವಿನಿ ಜಗತಾಪ, ಸಮ್ಮೇಳನ ಸಮಿತಿ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.