ADVERTISEMENT

ಥಟ್‌ ಅಂತ ಉತ್ತರಿಸುವ ಬಾಲೆ! ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮೆಚ್ಚುಗೆ ಪತ್ರ

ಲೋಹಿತಾಶ್ರೀಗೆ ಕೌಶಲಕ್ಕೆ ಮೆಚ್ಚುಗೆಪತ್ರದ ಗೌರವ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 6:07 IST
Last Updated 20 ಜುಲೈ 2021, 6:07 IST
ಎರಡೂವರೆ ವರ್ಷದ ಲೋಹಿತಾಶ್ರೀ ಕುಷ್ಟಗಿಗೆ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸನ್ಮಾನ ಮಾಡಲಾಯಿತು
ಎರಡೂವರೆ ವರ್ಷದ ಲೋಹಿತಾಶ್ರೀ ಕುಷ್ಟಗಿಗೆ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸನ್ಮಾನ ಮಾಡಲಾಯಿತು   

ಗದಗ: ಎರಡೂವರೆ ವರ್ಷದ ಬಾಲೆ ಲೋಹಿತಾಶ್ರೀ ತನ್ನ ಅದ್ಭುತ ನೆನಪಿನ ಶಕ್ತಿಯಿಂದ ಎಲ್ಲರಲ್ಲೂ ಬೆರಗು ಮೂಡಿಸಿದ್ದಾಳೆ. ಈ ಪುಟಾಣಿ ಹುಡುಗಿಯ ನೆನಪಿನ ಶಕ್ತಿಯನ್ನು ನೋಡಿ, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನವರು ಮೆಚ್ಚುಗೆಪತ್ರ ನೀಡಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.

30 ಮಂದಿ ವಿಜ್ಞಾನಿಗಳು, 30 ದೇಶಗಳ ರಾಷ್ಟ್ರಧ್ವಜ, 16 ಐತಿಹಾಸಿಕ ಸ್ಥಳಗಳು, ಎಂಟು ಸ್ಮಾರಕಗಳನ್ನು ಗುರುತಿಸುವುದು, 12 ಹಬ್ಬಗಳ ಹೆಸರು, ದೇಹದ ವಿವಿಧ ಅಂಗಗಳನ್ನು ಗುರುತಿಸುವುದು ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರನ್ನು ಈಕೆ ಥಟ್‌ ಹೇಳುವ ಕೌಶಲ ಬೆಳೆಸಿಕೊಂಡಿದ್ದಾಳೆ. ಜತೆಗೆ ದೇಶದ ನಕಾಶೆಯಲ್ಲಿ ರಾಜ್ಯ ಮತ್ತು ಅವುಗಳ ರಾಜಧಾನಿಯನ್ನು ಕ್ರಮವಾಗಿ ಜೋಡಿಸುವ ಜಾಣ್ಮೆಯನ್ನೂ ಬೆಳೆಸಿಕೊಂಡಿದ್ದಾಳೆ.

‘ಲೋಹಿತಾಶ್ರೀ ಹುಟ್ಟಿದಾಗಿನಿಂದಲೂ ಚುರುಕಿನ ಕೂಸು. ಒಂದು ವರ್ಷ ತುಂಬುತ್ತಿದ್ದಂತೆ ಅವಳು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಒಂದೂವರೆ, ಎರಡು ವರ್ಷ ಆಗುತ್ತಿದ್ದಂತೆ ಅವಳ ಗ್ರಹಿಕಾಶಕ್ತಿ ನಮ್ಮ ಅರಿವಿಗೆ ಬಂತು. ಈ ಸಂದರ್ಭದಲ್ಲಿ ಅವಳ ತಂದೆ ತಾಯಿ ಮಗಳ ಪ್ರತಿಭೆಯನ್ನು ಗುರುತಿಸಿ ಸ್ವಲ್ಪ ಸಾಣೆ ಹಿಡಿದರು. ಅವರ ಮಾರ್ಗದರ್ಶನದಲ್ಲಿ ಮಗು ಹಲವು ಕೌಶಲಗಳನ್ನು ಕರಗತ ಮಾಡಿಕೊಂಡು ಅಚ್ಚರಿ ಮೂಡಿಸುವಂತೆ ಬೆಳೆದಿದೆ’ ಎಂದು ಲೋಹಿತಾಶ್ರೀ ಅಜ್ಜಿ ಇಂದ್ರಾಣಿ ಜಗದೀಶ್‌ ಕುಷ್ಟಗಿ ಹೇಳಿದರು.

ADVERTISEMENT

‘ಚೂಟಿಯಾಗಿದ್ದ ಮಗಳ ಆಸಕ್ತಿಗೆ ನಾವು ಸರಿಯಾದ ಮಾರ್ಗದರ್ಶನ ನೀಡಿದೆವು. ಅವಳ ಗ್ರಹಿಕಾಶಕ್ತಿ ಅದ್ಭುತವಾಗಿದೆ. ಹೇಳಿಕೊಟ್ಟಿದ್ದನ್ನು ಚೆನ್ನಾಗಿ ಕಲಿಯುತ್ತಾಳೆ. ನೆನಪಿನಲ್ಲಿ ಇಟ್ಟುಕೊಳ್ಳುತ್ತಾಳೆ. ಅವಳಿಗೆ ಕಲಿಸಿಕೊಟ್ಟ ಕೌಶಲವನ್ನು ವಿಡಿಯೊ ಮಾಡಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಕಳಿಸಿದ್ದೆವು. ಅವರು ಮಗುವಿನ ಕೌಶಲ ನೋಡಿ ಮೆಚ್ಚುಗೆಪತ್ರ ನೀಡಿದ್ದಾರೆ’ ಎಂದು ಮಗುವಿನ ತಾಯಿ ಹಿಮಶೈಲಾ ತಿಳಿಸಿದರು.

ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಮಗು ಹಲವು ಪ್ರಶ್ನೆಗಳಿಗೆ ತನ್ನ ತೊದಲು ನುಡಿಯಲ್ಲಿ ಉತ್ತರಿಸಿತು. ಭಾರತದ ನಕಾಶೆಯಲ್ಲಿ ರಾಜ್ಯ ಮತ್ತು ಅವುಗಳ ರಾಜಧಾನಿಯನ್ನು ಕ್ರಮವಾಗಿ ಜೋಡಿಸುವ ಮೂಲಕ ಬೆರಗು ಮೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.