ಗದಗ: ‘ಸನಾತನ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವುದು ಹಾಗೂ ಜನಿವಾರಧಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸುವ ಪ್ರಮುಖ ಉದ್ದೇಶದೊಂದಿಗೆ ಸರ್ವ ಜನಿವಾರಧಾರಿಗಳ ಒಕ್ಕೂಟ ರಚಿಸಲಾಗಿದೆ’ ಎಂದು ಬ್ರಾಹ್ಮಣ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ತಿಳಿಸಿದರು.
‘ಈ ಒಕ್ಕೂಟದಲ್ಲಿ ಬ್ರಾಹ್ಮಣ ಸಮಾಜ, ಎಸ್‌ಎಸ್‌ಕೆ ಸಮಾಜ, ದೇವಾಂಗ, ದೈವಜ್ಞ, ಕ್ಷತ್ರಿಯ, ಆರ್ಯವೈಶ್ಯ ಸೇರಿದಂತೆ ಜನಿವಾರ ಧರಿಸುವ 28 ಸಣ್ಣ ಸಣ್ಣ ಸಮುದಾಯಗಳು ಸೇರಿವೆ’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಯಾವುದೇ ಸಮಾಜದ ವಿರುದ್ಧದ ಸಂಘರ್ಷಕ್ಕಾಗಿ ಈ ಒಕ್ಕೂಟ ರಚಿಸಿಲ್ಲ. ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು, ದಬ್ಬಾಳಿಕೆ ನಡೆದಾಗ ಪ್ರತಿಭಟಿಸಲು ಒಕ್ಕೂಟ ಕಟ್ಟಲಾಗಿದೆ’ ಎಂದರು.
‘ಸಿಇಟಿ ಪರೀಕ್ಷೆ ವೇಳೆ ಬೀದರ್ ಹಾಗೂ ಶಿವಮೊಗ್ಗದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಯಿಸಲಾಯಿತು. ಇದನ್ನು ಖಂಡಿಸಿ ಹಿಂದೆ ಸರ್ಕಾರಕ್ಕೆ ಮನವಿ ಕೊಟ್ಟಿದ್ದೆವು. ಈಗ ಒಕ್ಕೂಟ ರಚಿಸಿರುವ ಹಿನ್ನಲೆಯಲ್ಲಿ ಅಂಗವಾಗಿ 28 ಸಮುದಾಯಗಳ ಮುಖಂಡರು, ಮಾತೆಯರು, ಯುವಜನರು 15ರಂದು ಗದಗ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವುದೇ ಪರೀಕ್ಷೆ ನಡೆಸಬೇಕಾದರೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ಕ್ರಮ ಅನುಸರಿಸಬಾರದು. ಜನಿವಾರ ತೆಗೆಸುವುದು, ಬಳೆ, ಮೂಗುತಿ, ಕಾಲುಂಗರ, ತಾಳಿ ತೆಗೆಯುವಂತೆ ಹೇಳುವ ನಿಯಮಗಳನ್ನು ಬದಲು ಮಾಡಬೇಕು ಎಂದು ಪ್ರತಿಭಟನೆ ವೇಳೆ ಆಗ್ರಹಿಸಲಾಗುವುದು’ ಎಂದರು.
ಎಸ್‌ಎಸ್‌ಕೆ ಸಮಾಜ ಶ್ರೀಕಾಂತ ಖಟವಟೆ ಮಾತನಾಡಿ, ‘ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ನಡೆಸುವ ಸರ್ಕಾರಗಳು ಸೂಕ್ತ ನಿಯಮಾವಳಿ ರೂಪಿಸಬೇಕು. ಜನಿವಾರ ಧರಿಸಿ ನಕಲು ಮಾಡಲು ಸಾಧ್ಯವೇ? ನಕಲು ತಡೆಗಟ್ಟಲು ಈಗಂತೂ ಅನೇಕ ತಂತ್ರಜ್ಞಾನಗಳು ಬಂದಿವೆ. ಅಂತಹ ವೈಜ್ಞಾನಿಕ ಉಪಕರಣಗಳನ್ನು ಬಳಸುವ ಮೂಲಕ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
‘ಗದಗ ಜಿಲ್ಲೆಯಲ್ಲಿ ಹುಟ್ಟು ಹಾಕಿರುವ ಜನಿವಾರಧಾರಿಗಳ ಸಂಘಟನೆಯನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲು ಮುಂದೆ ಜಿಲ್ಲಾ ಪ್ರವಾಸ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಗಣೇಶ್ ಸಿಂಗ್ ಬ್ಯಾಳಿ ಮಾತನಾಡಿ, ‘ಸಂಸತ್ ಭವನ, ವಿಧಾನಸೌಧಕ್ಕೆ ಸಾರ್ವಜನಿಕರಿಗೆ ಪ್ರವೇಶ ನೀಡಲು ಯಾವ ರೀತಿ ಭದ್ರತಾ ಪರೀಕ್ಷೆಗಳನ್ನು ನಡೆಸುತ್ತೀರೋ ಅದೇರೀತಿ, ಪರೀಕ್ಷಾ ಕೇಂದ್ರದಲ್ಲೂ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು. ವಿದ್ಯಾರ್ಥಿಗಳಿಗೆ ಮಾನಸಿಕ ನೋವು ಆಗದಂತೆ ಸರ್ಕಾರ ನಡೆದುಕೊಳ್ಳಬೇಕು’ ಎಂದು ಹೇಳಿದರು.
ರತ್ನಾಕರಭಟ್ ಜೋಶಿ, ಬಲವಂತ ಪಾಟಲ, ಕೃಷ್ಣಾಜಿ ನಾಡಿಗೇರ, ಶ್ರೀಕಾಂತಸಾ ಕಬಾಡಿ, ಸಂಜೀವ್ ಕುಮಾರ ಖಟವಟೆ, ದಶರಥರಾಜ ಕೊಳ್ಳಿ, ಅನಿಲ್ ಗಡ್ಡಿ, ರಾಘವೇಂದ್ರ ಪಾಲನಕರ, ಅನಂತ ಅರ್ಕಸಾಲಿ, ಲೋಹಿತ್‌ಕುಮಾರ, ದೇವದಾಸ ವಜ್ರೇಶ್ವರಿ, ಕಡ್ಲಿಕೊಪ್ಪ ಸಮುದಾಯಗಳ ಮುಖಂಡರು ಇದ್ದರು.
ಮೇ 15ರಂದು ಸಮಾಜದ ಸಾವಿರಾರು ಜನರು ರ‍್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗುವುದು
-ವೆಂಕಟೇಶ ಕುಲಕರ್ಣಿ ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.