ADVERTISEMENT

ಗದಗ: ಸ್ವಚ್ಛತೆಗೆ ಪೌರ ಕಾರ್ಮಿಕರ ಕೊರತೆಯೇ ಸಮಸ್ಯೆ

50 ಸಾವಿರ ಜನಸಂಖ್ಯೆಯ ಪಟ್ಟಣದಲ್ಲಿ ನಿತ್ಯ 12 ರಿಂದ 13 ಟನ್ ಕಸ ಉತ್ಪತ್ತಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:15 IST
Last Updated 13 ಸೆಪ್ಟೆಂಬರ್ 2025, 6:15 IST
ಲಕ್ಷ್ಮೇಶ್ವರದ ಪುರಸಭೆ
ಲಕ್ಷ್ಮೇಶ್ವರದ ಪುರಸಭೆ   

ಲಕ್ಷ್ಮೇಶ್ವರ: ಜಿಲ್ಲೆಯಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣದ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊರತೆಯೇ ದೊಡ್ಡ ಸಮಸ್ಯೆ ಆಗಿದೆ.

ಪಟ್ಟಣದ ಜನಸಂಖ್ಯೆ ಐವತ್ತು ಸಾವಿರ ಮೀರಿದ್ದು, ಅದಕ್ಕೆ ತಕ್ಕಂತೆ ಕಸದ ಸಮಸ್ಯೆಯೂ ಪೆಡಂಭೂತವಾಗಿ ಬೆಳೆಯುತ್ತಿದೆ. ಲಕ್ಷ್ಮೇಶ್ವರದಲ್ಲಿ ಪ್ರತಿದಿನ 12 ರಿಂದ 13 ಟನ್ ಕಸ ಉತ್ಪತ್ತಿ ಆಗುತ್ತಿದ್ದು, ಅದನ್ನು ವಿಲೇವಾರಿ ಮಾಡುವುದು ಪುರಸಭೆಗೆ ದೊಡ್ಡ ಸವಾಲಾಗಿದೆ. 

ಪ್ರತಿ ಏಳುನೂರು ನಾಗರಿಕರಿಗೆ ಒಬ್ಬ ಪೌರ ಕಾರ್ಮಿಕ ಇರಬೇಕು ಎಂಬುದು ಸರ್ಕಾರದ ನಿಯಮ. ಆದರೆ ಐವತ್ತು ಸಾವಿರ ಜನಸಂಖ್ಯೆ ಇರುವ ಪಟ್ಟಣದ ಪುರಸಭೆಯಲ್ಲಿ ಕೇವಲ 19 ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

23 ವಾರ್ಡ್‍ಗಳಲ್ಲೂ ಪ್ರತಿದಿನ ಸ್ವಚ್ಛತೆ ಕಾಪಾಡಲು ಕಾರ್ಮಿಕರಿಗೆ ಆಗುತ್ತಿಲ್ಲ. ಇದರೊಂದಿಗೆ ಪಟ್ಟಣದ ಸುತ್ತ ಒಂದೂವರೆ ಕಿ.ಮೀ ಅಂತರದಲ್ಲಿ ಹತ್ತಾರು ನೂತನ ಬಡಾವಣೆಗಳು ನಿರ್ಮಾಣಗೊಂಡಿದ್ದು, ಅಲ್ಲಿಯೂ ಸ್ವಚ್ಛತೆ ಕಾಪಾಡುವುದು ಪುರಸಭೆಯ ಜವಾಬ್ದಾರಿ. ಆದರೆ ಇರುವ ಪೌರ ಕಾರ್ಮಿಕರಿಂದ ಸ್ವಚ್ಛತೆ ಮಾಡಿಸಲು ಪುರಸಭೆ ಅಧಿಕಾರಿಗಳು ಹೆಣಡಾಗುತ್ತಿದ್ದಾರೆ.

ಬೆಳಿಗ್ಗೆ ಆರು ಗಂಟೆಗೆ 9 ಜನ ಕಸ ಗುಡಿಸಲು ಅಣಿಯಾಗುತ್ತಾರೆ. ಇಬ್ಬರು ದೂದಪೀರಾಂ ದರ್ಗಾದಿಂದ ಹಾವಳಿ ಆಂಜನೇಯ ದೇವಸ್ಥಾನ, ಬಜಾರದಿಂದ ಶಿಗ್ಲಿ ನಾಕಾದ ವರೆಗೆ ಇಬ್ಬರು, ಶಿಗ್ಲಿ ನಾಕಾದಿಂದ ಹೊಸ ಬಸ್ ನಿಲ್ದಾಣದ ವರೆಗೆ ಇಬ್ಬರು, ಸೋಮೇಶ್ವರ ಪಾದಗಟ್ಟಿಯಿಂದ ತೇರಿನ ಮನೆವರೆಗೆ ಒಬ್ಬರು, ಜ್ಯೋತಿ ಹೊಟೇಲ್‌ನಿಂದ ಹಳೇ ಬಸ್ ನಿಲ್ದಾಣದ ವರೆಗೆ ಒಬ್ಬರು ಮತ್ತು ಹೂವಿನ ಮಾರುಕಟ್ಟೆಯಲ್ಲಿ ಒಬ್ಬರು ದಿನಾಲೂ ಕಸ ಗುಡಿಸುತ್ತಾರೆ. ನಂತರ ಅದೇ ಕಾರ್ಮಿಕರಿಂದ ಟ್ರ್ಯಾಕ್ಟರ್‌ಗೆ ಕಸ ತುಂಬಿಸಲಾಗುತ್ತದೆ. ಇನ್ನೊಬ್ಬ ಕಾರ್ಮಿಕ ಪಟ್ಟಣದಲ್ಲಿನ ಐದು ಸಾರ್ವಜನಿಕ ಮೂತ್ರಾಲಯಗಳನ್ನು ಸ್ವಚ್ಛ ಮಾಡುತ್ತಾರೆ. 

ಪೌರ ಕಾರ್ಮಿಕರು ಪ್ರತಿದಿನವೂ ಒತ್ತಡದಲ್ಲಿ ದುಡಿಯಬೇಕಾದ ಅನಿವಾರ್ಯತೆ ಇದೆ. ಈ ಮಧ್ಯೆ ಹಬ್ಬ ಹರಿದಿನಗಳಲ್ಲಿ ಪಟ್ಟಣದಲ್ಲಿ ಬೇರೆ ಬೇರೆ ವಾರ್ಡ್‍ಗಳಲ್ಲಿ ದೊಡ್ಡ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲಿ ಇದೇ ಕಾರ್ಮಿಕರು ಸ್ವಚ್ಛತೆಗೆ ಹೋಗಬೇಕಾದ ಪರಿಸ್ಥಿತಿ ಇದೆ.

‘2011ರ ಜನಗಣತಿ ಪ್ರಕಾರ 56 ಪೌರ ಕಾರ್ಮಿಕರ ಅಗತ್ಯ ಇತ್ತು. ಆದರೆ ಈವರೆಗೆ ಕೇವಲ 19 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದೀಗ ಜನಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಪೌರ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಗಬೇಕಿತ್ತು. ಇರುವ ಕಾರ್ಮಿಕರಿಂದ ಸ್ವಚ್ಛತೆ ಮಾಡಿಸುತ್ತಿದ್ದೇವೆ’ ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ ತಿಳಿಸಿದರು.

‘ಸಮಸ್ಯೆ: ಹಿರಿಯ ಅಧಿಕಾರಿಗಳ ಗಮನಕ್ಕೆ’

‘ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಪೌರ ಕಾರ್ಮಿಕರ ಅಗತ್ಯ ಇದೆ. ಈ ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಲಭ್ಯ ಇರುವ ಕಾರ್ಮಿಕರಿಂದ ಸ್ವಚ್ಛತೆ ಮಾಡಿಸುತ್ತಿದ್ದೇವೆ. ಪ್ರತಿದಿನ ಎಲ್ಲ ವಾರ್ಡ್‍ಗಳಲ್ಲಿ ಕಸ ಸಂಗ್ರಹಣೆಗೆ ವಾಹನಗಳು ಹೋಗುತ್ತವೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಚೆಲ್ಲದೆ ವಾಹನಗಳಲ್ಲಿ ಹಾಕುವ ಮೂಲಕ ಊರಿನ ಸ್ವಚ್ಛತೆಗೆ ಸಹಕರಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.