ADVERTISEMENT

ಗದಗ: ನಾಲ್ವರ ಬರ್ಬರ ಹತ್ಯೆ; ಹಂತಕರ ಪತ್ತೆಗೆ ನಾಲ್ಕು ವಿಶೇಷ ತಂಡಗಳ ರಚನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 9:27 IST
Last Updated 19 ಏಪ್ರಿಲ್ 2024, 9:27 IST
   

ಗದಗ: ಇಲ್ಲಿನ ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿದಂತೆ ನಾಲ್ವರನ್ನು ಗುರುವಾರ ಮಧ್ಯರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ನಗರದ ದಾಸರ ಓಣಿಯಲ್ಲಿರುವ ಸುನಂದಾ ಬಾಕಳೆ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಕಾರ್ತಿಕ್‌ ಬಾಕಳೆ (27), ಪರುಶುರಾಮ (58), ಲಕ್ಷ್ಮೀಬಾಯಿ (50) ಹಾಗೂ ಆಕಾಂಕ್ಷಾ (17) ಕೊಲೆಯಾದವರು.

ಪ್ರಕಾಶ್‌ ಬಾಕಳೆ ಹಾಗೂ ಸುನಂದಾ ಬಾಕಳೆ ಪುತ್ರ ಕಾರ್ತಿಕ್‌ ಬಾಕಳೆ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಕೊಪ್ಪಳದ ಭಾಗ್ಯನಗರ ನಿವಾಸಿಯಾದ ಪರುಶುರಾಮ ಅವರು ಪ್ರಕಾಶ್‌ ಬಾಕಳೆ ಅವರ ಮೊದಲನೇ ಪತ್ನಿಯ ಅಣ್ಣ. ಇವರು ಪತ್ನಿ ಲಕ್ಷ್ಮೀಬಾಯಿ ಹಾಗೂ ದತ್ತುಪುತ್ರಿ ಆಕಾಂಕ್ಷಾ ಜತೆಗೆ ಏ.17ರಂದು ಲಕ್ಷ್ಮೇಶ್ವರದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಏ.18ರಂದು ಕೊಪ್ಪಳಕ್ಕೆ ಹೊರಟ್ಟಿದ್ದ ಅವರಿಗೆ ರೈಲು ತಪ್ಪಿದ್ದರಿಂದ ಪ್ರಕಾಶ್‌ ಬಾಕಳೆ ಮನೆಯಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ.

ADVERTISEMENT

ಮನೆಯ ಮೊದಲ ಮಹಡಿಯಲ್ಲಿರುವ ಕೋಣೆಯಲ್ಲಿ ಕಾರ್ತಿಕ್‌ ಮತ್ತು ಪರುಶುರಾಮ ಮಲಗಿದ್ದರು. ಗ್ರೌಂಡ್‌ ಫ್ಲೋರ್‌ನಲ್ಲಿರುವ ಕೋಣೆಯಲ್ಲಿ ಲಕ್ಷ್ಮೀಬಾಯಿ ಮತ್ತು ಆಕಾಂಕ್ಷಾ ಮಲಗಿದ್ದರು. ಇವರು ಮಲಗುವಾಗ ಕೋಣೆಯ ಚಿಲಕ ಹಾಕಿರಲಿಲ್ಲ. ಹಂತಕರು ಮನೆಯ ಹಿಂಬದಿಯ ಕಿಟಕಿಯಿಂದ ಪ್ರವೇಶಿಸಿ, ನಾಲ್ವರನ್ನು ಹತ್ಯೆ ಮಾಡಿದ್ದಾರೆ.

ಕೆಳಮಹಡಿಯ ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಪ್ರಕಾಶ್‌ ಬಾಕಳೆ ಮತ್ತು ಸುನಂದಾ ಬಾಕಳೆ ರೂಮ್‌ ಒಳಗಿನಿಂದ ಲಾಕ್‌ ಆಗಿತ್ತು. ಹಂತಕರು ಆ ಕೋಣೆಯ ಬಾಗಿಲನ್ನೂ ಒಡೆಯುವ ಪ್ರಯತ್ನ ಮಾಡಿದ್ದರು. ಶಬ್ದ ಕೇಳಿ ಎಚ್ಚರಗೊಂಡ ಪ್ರಕಾಶ್‌ ಬಾಕಳೆ ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಇದರಿಂದ ಬೆದರಿದ ಹಂತಕರು ಅಲ್ಲಿಂದ ಪರಾರಿ ಆಗಿದ್ದಾರೆ.

ಹಲವು ಆಯಾಮಗಳಲ್ಲಿ ತನಿಖೆ: ಐಜಿಪಿ

‘ಇದೊಂದು ಗಂಭೀರ ಹಾಗೂ ಸೂಕ್ಷ್ಮ ಪ್ರಕರಣ. ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿ, ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕವಾಗಿ ಸಿಕ್ಕಿರುವ ಮಾಹಿತಿಗಳ ಆಧಾರ ಮೇಲೆ ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿ, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು’ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಶ್‌ ಕುಮಾರ್‌ ವಿಕಾಶ್‌ ತಿಳಿಸಿದರು.

‘ಕೃತ್ಯ ನಡೆದಿರುವ ರೀತಿ ಗಮನಿಸಿದರೆ ದರೋಡೆಗಾಗಿ ನಡೆದಿರುವಂತೆ ಕಾಣಿಸುವುದಿಲ್ಲ. ಮನೆಯಲ್ಲಿ ಚಿನ್ನಾಭರಣ ಕಳವು ಆಗಿಲ್ಲ. ಘಟನೆಯಲ್ಲಿ ನಾಲ್ಕು ಮಂದಿ ಕೊಲೆಯಾಗಿದ್ದಾರೆ. ಇನ್ನಿಬ್ಬರನ್ನೂ ಕೊಲೆ ಮಾಡುವ ಉದ್ದೇಶ ಹಂತಕರಿಗೆ ಇದ್ದಿರಬಹುದು. ಪ್ರಕಾಶ್‌ ಬಾಕಳೆ ಕುಟುಂಬ ಹಾಗೂ ಅವರ ಸಂಬಂಧಿಕರ ಹಿನ್ನಲೆಯನ್ನು ಪರಿಶೀಲಿಸಲಾಗುತ್ತಿದೆ. ಹಂತಕರ ಟಾರ್ಗೆಟ್‌ ಯಾರಾಗಿದ್ದರು? ಕೊಲೆಗೆ ನಿಖರ ಕಾರಣ ಏನು? ಎಂಬುದು ಇನ್ನೂ ತಿಳಿದುಬಂದಿಲ್ಲ. ಎಲ್ಲ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.