ನರಗುಂದ: ‘ಮಠಗಳು ಸರ್ವ ಧರ್ಮದ ಶ್ರದ್ಧಾ ಕೇಂದ್ರಗಳಾಗಿದ್ದು, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಮಠಗಳ ಮೂಲಕ ಸಮಾಜದಲ್ಲಿ ಜಾಗೃತಿ ಸಂದೇಶ ಸಾರುತ್ತಿರುವ ಕರ್ನಾಟಕದ ಆಧ್ಯಾತ್ಮಿಕ ಪರಂಪರೆ ವಿಶ್ವಮಾನ್ಯವಾಗಿದೆ’ ಎಂದು ಕೇಂದ್ರ ಸರ್ಕಾರದ ಆಹಾರ ನಾಗರಿಕ ಸರಬರಾಜು ನಿಗಮದ ಸದಸ್ಯ ರವಿ ದಂಡಿನ ಹೇಳಿದರು.
ತಾಲ್ಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಈಚೆಗೆ ನಡೆದ ಮಾಸಿಕ ಶಿವಾನುಭವ ಹಾಗೂ ಸಾಹಿತ್ಯ ಶ್ರಾವಣ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕನ್ನಡ ಸಾಹಿತ್ಯ ಲೋಕದಲ್ಲಿ ಸಾವಿರಾರು ಸಾಹಿತಿಗಳು ತಮ್ಮ ಸಾಹಿತ್ಯ ಮೂಲಕ ಕನ್ನಡ ಭಾಷೆಗೆ ಜೀವ ತುಂಬಿದ್ದಾರೆ. ಪುಣ್ಯ ಪುರುಷರ ಜೀವನ ಚರಿತ್ರೆಯನ್ನು 30 ದಿನಗಳ ಕಾಲ ಸಾಹಿತ್ಯ ಶ್ರಾವಣದ ಮೂಲಕ ಜನಮಾನಸಕ್ಕೆ ತಿಳಿಸುತ್ತಿರುವ ಶ್ರೀಮಠದ ಕಾರ್ಯ ಶ್ಲಾಘನೀಯ. ಎಲ್ಲರಲ್ಲೂ ಓದುವ ಅಭಿರುಚಿ ಕ್ಷೀಣಿಸುತ್ತಿದ್ದು, ಕವಿಗಳ ಕುರಿತು ಉಪನ್ಯಾಸ ನೀಡುವುದರ ಮೂಲಕ ಸಾಹಿತ್ಯಾ ಅಭಿಮಾನ ಮೂಡಿಸುತ್ತಿರುವುದು ಅಭಿನಂದನೀಯ’ ಎಂದು ಹೇಳಿದರು.
ಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಜಾನಪದ ಸಾಹಿತ್ಯ ಲೋಕದಲ್ಲಿ ಅದ್ವೀತಿಯ ಕೊಡುಗೆ ನೀಡಿದ ಚಂದ್ರಶೇಖರ ಕಂಬಾರ ಅವರು ಈ ನಾಡಿನ ಅನರ್ಘ್ಯ ರತ್ನ. ಅವರ ಕಾಡು ಕುದುರೆ, ಸಿಂಗಾರವ್ವ ಮತ್ತು ಅರಮನೆ, ಕರಿಮಾಯಿ ಅಂತಹ ಪ್ರಸಿದ್ಧ ಕಾದಂಬರಿಗಳು ಅವರ ಮೇರು ಸಾಹಿತ್ಯಕ್ಕೆ ಸಾಕ್ಷಿ’ ಎಂದರು.
ರವಿ ದಂಡಿನ ಅವರನ್ನು ಶ್ರೀಮಠದಿಂದ ಅಭಿನಂದಿಸಿ ಸತ್ಕರಿಸಲಾಯಿತು. ಬಸವರಾಜ ಬಿಂಗಿ, ಸುರೇಶ ಕುಲಕರ್ಣಿ, ಅನಂತ ದೇಶಪಾಂಡೆ, ಸಂಗಮೇಶ ತಮ್ಮನಗೌಡ್ರ, ಬಿ.ಎಂ. ಗೊಜನೂರ, ಶಿವಾನಂದ ಮಣ್ಣೂರಮಠ, ಆರ್.ಕೆ. ಐನಾಪೂರ, ಬಿ.ಬಿ. ಐನಾಪೂರ, ಎ.ಆಯ್. ಹುಯಿಲಗೋಳ, ಮಹಾಂತೇಶ ಸಾಲಿಮಠ, ಮಂಗಳಾ ಪಾಟೀಲ ಇದ್ದರು. ಆರ್.ಬಿ. ಚಿನಿವಾಲರ ನಿರೂಪಿಸಿ, ಮಹಾಂತೇಶ ಹಿರೇಮಠ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.