ADVERTISEMENT

ಗದಗ: 18ನೇ ರಾಷ್ಟ್ರೀಯ ಪಂಚಾಯತ್ ಪರಿಷತ್ ಸಮ್ಮೇಳನ ಇಂದಿನಿಂದ

ಅಖಿಲ ಭಾರತ ಪಂಚಾಯತ್ ಪರಿಷತ್ ಅಧ್ಯಕ್ಷ ಸುಬೋಧ್ ಕಾಂತ್ ಸಹಾಯ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:22 IST
Last Updated 13 ಡಿಸೆಂಬರ್ 2025, 5:22 IST
ಸುಭೋಧ್‌ ಕಾಂತ್‌ ಸಹಾಯ್‌
ಸುಭೋಧ್‌ ಕಾಂತ್‌ ಸಹಾಯ್‌   

ಗದಗ: ‘ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣಕ್ಕೆ ಹೆಚ್ಚಿನ ಶಕ್ತಿ ತುಂಬುವ ಉದ್ದೇಶದಿಂದ 18ನೇ ರಾಷ್ಟ್ರೀಯ ಪಂಚಾಯತ್ ಪರಿಷತ್ ಸಮ್ಮೇಳನವನ್ನು ಡಿ.13 ಮತ್ತು 14ರಂದು ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ’ ಎಂದು ಅಖಿಲ ಭಾರತ ಪಂಚಾಯತ್ ಪರಿಷತ್ ಅಧ್ಯಕ್ಷ ಸುಬೋಧ್ ಕಾಂತ್ ಸಹಾಯ್ ಹೇಳಿದರು.

‘ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಮತ್ತು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ ನಡೆಯುವ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಿಂದ 1,500ಕ್ಕೂ ಅಧಿಕ ಮಂದಿ ಭಾಗವಹಿಸುವರು’ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

‘ಅಖಿಲ ಭಾರತ ಪಂಚಾಯತ್ ಪರಿಷತ್ 1958ರಿಂದ ಪಂಚಾಯತ್ ಸಂಸ್ಥೆಗಳ ಬಲವರ್ಧನೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಪಂಚಾಯತ್ ಸಂಸ್ಥೆಗಳ ಬಲವರ್ಧನೆ, ವಿಕೇಂದ್ರೀಕೃತ ಆಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ನಿರಂತರ ಕೊಡುಗೆ ನೀಡುತ್ತಿದ್ದು, ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರಾಷ್ಟ್ರ ಮಟ್ಟದ ಮಾದರಿಯಾಗಿ ರೂಪಿಸಲು ಸಹಕಾರಿಯಾಗಿದೆ’ ಎಂದು ತಿಳಿಸಿದರು.

ADVERTISEMENT

ಕರ್ನಾಟಕ ರಾಜ್ಯ ವಿಕೇಂದ್ರಿಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ ಮಾತನಾಡಿ, ‘ಸಮ್ಮೇಳನದಲ್ಲಿ ತಾಂತ್ರಿಕ ಅಧಿವೇಶನಗಳು ನಡೆಯಲಿವೆ. ಮೊದಲ ದಿನ ಗ್ರಾಮ ಸ್ವರಾಜ್ಯಕ್ಕೆ ಗಾಂಧೀಜಿ ತತ್ವಗಳು, ಪಂಚಾಯತ್ ಕಾಯ್ದೆಗಳು, ವಿಕೇಂದ್ರೀಕೃತ ಆಡಳಿತ, ನೀತಿ-ನಿಯಮಗಳು ಮತ್ತು ಸಮುದಾಯ ಸಬಲೀಕರಣ ಕುರಿತಂತೆ ತಾಂತ್ರಿಕ ಅಧಿವೇಶನಗಳು ನಡೆಯಲಿವೆ. ದೇಶದ ವಿವಿಧೆಡೆಯ ಕ್ಷೇತ್ರ ತಜ್ಞರು, ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರು ಮತ್ತು ಪಂಚಾಯತ್ ಚಳವಳಿಯ ನಾಯಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಚರ್ಚೆ ನಡೆಸಲಿದ್ದು, ಪ್ರಶೋತ್ತರ ಅವಧಿಗೂ ಅವಕಾಶ ನೀಡಲಾಗಿದೆ’ ಎಂದರು.

‘ಎರಡನೇ ದಿನದ ಸಮ್ಮೇಳನದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣ, ಗ್ರಾಮೀಣಾಭಿವೃದ್ಧಿಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ ವಿಷಯಗಳ ಕುರಿತು ಪ್ರಮುಖ ತಾಂತ್ರಿಕ ಅಧಿವೇಶನಗಳು ನಡೆಯಲಿವೆ. ನಂತರ ಸಮಾರೋಪ ಸಮಾರಂಭ ನಡೆಯಲಿದೆ’ ಎಂದರು.

ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷ ವಿ.ವೈ.ಘೋರ್ಪಡೆ, ತ್ರಿಪುರ ರಾಜ್ಯದ ಶಾಸಕ ರಾಜೀವ್‌ ಸಿನ್ಹಾ, ಪಂಚಾಯತ್ ಪರಿಷತ್ ಕಾರ್ಯದರ್ಶಿ ಅಶೋಕ ಚೌಹಾಣ್‌, ವಾಸಣ್ಣ ಕುರಡಗಿ, ಜೆ.ಕೆ.ಜಮಾದಾರ, ಪ್ರಕಾಶ ಮಾಚೇನಹಳ್ಳಿ ಇದ್ದರು. 

ಡಿ.ಆರ್.ಪಾಟೀಲ
ದಿ. ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನಬದ್ಧ ಸ್ಥಾನಮಾನ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡು ಗ್ರಾಮಮಟ್ಟದ ಆಡಳಿತವನ್ನು ಭಾರತದ ಜನತಾಂತ್ರಿಕ ವ್ಯವಸ್ಥೆಯ ಆಧಾರಸ್ತಂಭವಾಗಿ ಬಲಪಡಿಸಲು ಅಡಿಪಾಯ ಹಾಕಿದರು
–ಸುಬೋಧ್ ಕಾಂತ್ ಸಹಾಯ್ ಅಖಿಲ ಭಾರತ ಪಂಚಾಯತ್ ಪರಿಷತ್ ಅಧ್ಯಕ್ಷ
ರಾಷ್ಟ್ರೀಯ ಸಮ್ಮೇಳನವು ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಬಲವರ್ಧನೆ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಮತ್ತು ಗ್ರಾಮೀಣ ಭಾರತದ ಸುಸ್ಥಿರ ಅಭಿವೃದ್ಧಿ ಕುರಿತಾದ ಸಮಗ್ರ ಚಿಂತನೆಗೆ ವೇದಿಕೆಯಾಗಲಿದೆ
–ಡಿ.ಆರ್.ಪಾಟೀಲ ಕರ್ನಾಟಕ ರಾಜ್ಯ ವಿಕೇಂದ್ರಿಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ
1500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿ
‘ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ಡಿ.13ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಸಮ್ಮೇಳನದ ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರಿಯಾಂಕ್‌ ಖರ್ಗೆ ಭಾಗವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸುವರು’ ಎಂದು ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡ ತಿಳಿಸಿದರು. ‘ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಕರ್ನಾಟಕ ರಾಜ್ಯ ವಿಕೇಂದ್ರಿಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ ಅಖಿಲ ಭಾರತ ಪಂಚಾಯತ್ ಪರಿಷತ್ ಅಧ್ಯಕ್ಷ ಸುಬೋಧ್ ಕಾಂತ್ ಸಹಾಯ್ ಜಿಲ್ಲೆಯ ಸಂಸದರು ಶಾಸಕರು ಜಿಲ್ಲಾ-ತಾಲ್ಲೂಕು-ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಸಹ ಪಾಲ್ಗೊಳ್ಳಲಿದ್ದಾರೆ’ ಎಂದರು. ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷ ವಿ.ವೈ.ಘೋರ್ಪಡೆ ಉಪಾಧ್ಯಕ್ಷೆ ಸೌಭಾಗ್ಯ ಬಸವರಾಜ್ ಉಪಸ್ಥಿತರಿರುವರು. ಸಮ್ಮೇಳನದಲ್ಲಿ ರಾಜ್ಯ ಮತ್ತು ರಾಷ್ಟ್ರದ ವಿವಿಧ ಭಾಗಗಳಿಂದ 1500ಕ್ಕೂ ಹೆಚ್ಚು ಪಂಚಾಯತ್ ಪ್ರತಿನಿಧಿಗಳು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ವಿಷಯ ತಜ್ಞರು ವಿಶ್ವವಿದ್ಯಾಲಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.