ADVERTISEMENT

ಜನಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಮೊದಲ ಆದ್ಯತೆ: ಎಸ್‌ಪಿ ರೋಹನ್‌ ಜಗದೀಶ್‌

ಗದಗ ಜಿಲ್ಲಾ ನೂತನ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 7:14 IST
Last Updated 17 ಜುಲೈ 2025, 7:14 IST
ರೋಹನ್‌ ಜಗದೀಶ್‌
ರೋಹನ್‌ ಜಗದೀಶ್‌   

ಗದಗ: ‘ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ರೂಪಿಸುವುದು ನನ್ನ ಮೊದಲ ಆದ್ಯತೆಯಾಗಿದೆ’ ಎಂದು ಗದಗ ಜಿಲ್ಲಾ ನೂತನ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ಹೇಳಿದರು.

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗದಗ ಜಿಲ್ಲೆ ಭೌಗೋಳಿಕವಾಗಿ ದೊಡ್ಡದಿದೆ. ಅದರಂತೆ, ಪೊಲೀಸ್‌ ವ್ಯವಸ್ಥೆ ಬಗ್ಗೆ ಜನರ ನಿರೀಕ್ಷೆಗಳು ಕೂಡ ದೊಡ್ಡದಿವೆ. ಪೊಲೀಸ್‌ ಠಾಣೆಗೆ ಬರುವ ಯಾರೇ ಆಗಲಿ ದುಃಖದಲ್ಲಿ ಇರುತ್ತಾರೆ. ಆ ಸಮಯದಲ್ಲಿ ಅವರ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲು ಸಾಧ್ಯವಿಲ್ಲ. ಆದರೆ, ನಾವು ಅವರ ನೋವು ಅರ್ಥ ಮಾಡಿಕೊಂಡು ಸ್ಪಂದಿಸಿದರೆ, ಅದೇ ಅವರಿಗೆ ಸಹಾಯ ಮಾಡಿದಂತೆ ಆಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್‌ ಮತ್ತು ಜನರ ನಡುವೆ ಉತ್ತಮ ಬಾಂದವ್ಯ ಬೆಳೆಸುವ ಆಸೆ ಇದೆ’ ಎಂದು ತಿಳಿಸಿದರು.

‘ಗದಗ ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಬಾಬಸಾಬ್‌ ನೇಮಗೌಡ ಜನರ ಪ್ರೀತಿಗೆ ಪಾತ್ರರಾಗಿದ್ದರು. ಹಿಂದಿನವರ ಒಳ್ಳೆ ಕೆಲಸಗಳನ್ನು ಮುಂದುವರಿಸುವುದರ ಜತೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉತ್ತಮ ಕೆಲಸ ಮಾಡುವ ಗುರಿ ಇದೆ’ ಎಂದರು.

ADVERTISEMENT

‘ಗದಗ ನಗರದಲ್ಲಿ ಥರ್ಡ್‌ ಐ ವ್ಯವಸ್ಥೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ತಂತ್ರಜ್ಞಾನ ಆಧರಿತ ಪೊಲೀಸ್‌ ವ್ಯವಸ್ಥೆ ಜತೆಗೆ ‘ಎಸ್‌ಪಿ ನಡೆ ಹಳ್ಳಿ ಕಡೆ’ ಎಂಬಂತೆ ಜನರ ಬಳಿಗೆ ಹೋಗಿ ಅವರ ಸಮಸ್ಯೆ ತಿಳಿಯುವ, ಅದಕ್ಕೆ ಸ್ಪಂದಿಸುವ ಕೆಲಸ ಮಾಡಲಾಗುವುದು. ಈ ಮೂಲಕ ಪೊಲೀಸ್‌ ವ್ಯವಸ್ಥೆ ನಮ್ಮ ಜತೆ ಇದೆ ಎಂಬ ನಂಬಿಕೆ ಮತ್ತು ಧೈರ್ಯವನ್ನು ಬೆಳೆಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು’ ಎಂದರು.

‘ಗದಗ ಜಿಲ್ಲೆಯಲ್ಲಿ ಜುಲೈ 15ರಂದು ಅಧಿಕಾರ ಸ್ವೀಕರಿಸಿದ್ದೇನೆ. ಅದೇ ದಿನ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ನನ್ನ ಯೋಜನೆಗಳ ಬಗ್ಗೆ ತಿಳಿಸಿರುವೆ. ಅವರ ಮಾತುಗಳನ್ನೂ ಕೇಳಿಸಿಕೊಂಡಿರುವೆ. ಸಣ್ಣಪುಟ್ಟ ದೂರುಗಳನ್ನೂ ಮುತುವರ್ಜಿಯಿಂದ ಗಮನಿಸಲಾಗುವುದು’ ಎಂದರು.

‘ಸಣ್ಣ ಪುಟ್ಟ ಜಗಳ ಹೊರತು ಪಡಿಸಿ ಬೇರೆ ಪ್ರಕರಣಗಳಲ್ಲಿ ರಾಜಿ ಸಂಧಾನದಲ್ಲಿ ನನಗೆ ನಂಬಿಕೆ ಇಲ್ಲ. ನಿಯಮಿತವಾಗಿ ಪೊಲೀಸ್‌ ಠಾಣೆಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಲಾಗುವುದು. ಬೀಟ್‌ ಬಲಪಡಿಸುವುದು, ಕಳವು ಪ್ರಕರಣಗಳಲ್ಲಿ ರಿಕವರಿ, ಸೈಬರ್‌ ಕ್ರೈಂ ಕುರಿತು ಜನಜಾಗೃತಿ ಸೇರಿದಂತೆ ಯಾವುದೇ ವಿಷಯಗಳಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಐತಿಹಾಸಿಕ ಗದಗ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವ ಅವಕಾಶ ಮಾಡಿಕೊಟ್ಟಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮಗಳನ್ನು ಅನುಸರಿಸಲಾಗುವುದು
ರೋಹನ್‌ ಜಗದೀಶ್‌ ಎಸ್‌ಪಿ ಗದಗ

ಯುವ ಅಧಿಕಾರಿಯ ಪರಿಚಯ

33 ವರ್ಷ ವಯಸ್ಸಿನ ಯುವ ಅಧಿಕಾರಿ ರೋಹನ್‌ ಜಗದೀಶ್‌ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದವರು. ಓದಿದ್ದು ಬೆಂಗಳೂರಿನಲ್ಲಿ. ಬಿಎ ಎಲ್‌ಎಲ್‌ಬಿ ಮುಗಿಸಿದ ನಂತರ ಸ್ವಲ್ಪ ಸಮಯ ವಕೀಲರಾಗಿ ಕೆಲಸ ನಿರ್ವಹಣೆ. ನಂತರ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ. 224ನೇ ರ‍್ಯಾಂಕ್‌ನೊಂದಿಗೆ 2019ರಲ್ಲಿ ಕರ್ನಾಟಕ ಕೇಡರ್‌ ಐಪಿಎಸ್‌ ಅಧಿಕಾರಿಯಾಗಿ ನೇಮಕ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಕೆಲಸ ಪ್ರಾರಂಭ. ನಂತರ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಎಎಸ್‌ಪಿಯಾಗಿ ಒಂದು ವರ್ಷ ಎಂಟು ತಿಂಗಳು ಕೆಲಸ. ನಂತರ ಬಡ್ತಿಯೊಂದಿಗೆ ಬೆಳಗಾವಿ ನಗರದ ಡಿಎಸ್‌ಪಿಯಾಗಿ ನೇಮಕ. ಅಲ್ಲಿ ಒಂದು ವರ್ಷ ಹತ್ತು ತಿಂಗಳು ಕೆಲಸ ನಿರ್ವಹಣೆ. ಜುಲೈ 15ರಿಂದ ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕೆಲಸ ಪ್ರಾರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.