ಗದಗ: ‘ಕಾಯಕ ಮತ್ತು ದಾಸೋಹ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ಶರಣ ನುಲಿಯ ಚಂದಯ್ಯನವರೂ ಒಬ್ಬರು. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಶ್ರದ್ದೆಯಿಂದ ಮಾಡಬೇಕು ಎಂದು ವಚನಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ನುಲಿಯ ಚಂದಯ್ಯನವರ ಜಯಂತಿ ಉದ್ಘಾಟಿಸಿ ಮಾತನಾಡಿದರು.
‘ನುಲಿಯ ಚಂದಯ್ಯನವರು ಅನುಭವ ಮಂಟಪದಲ್ಲಿ ಶ್ರೇಷ್ಠ ಶರಣರಾಗಿದ್ದರು. ಹಗ್ಗ ಮಾರಿ ಬಂದ ಹಣದಿಂದ ಅವರು ದಾಸೋಹ ಕೈಗೊಳ್ಳುತ್ತಿದ್ದರು. ಕಾಯಕ ನಿಷ್ಠೆ, ಜಂಗಮ ದಾಸೋಹ ಇವರ ವಚನಗಳಲ್ಲಿ ಗಮನಾರ್ಹ’ ಎಂದರು.
ನುಲಿಯ ಚಂದಯ್ಯ ಸಮುದಾಯದವರು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದವರಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಉನ್ನತ ಮಟ್ಟದ ಕ್ರೀಡಾ ಸೌಲಭ್ಯಗಳು ಸುಲಭವಾಗಿ ಲಭ್ಯವಾಗುವಂತೆ ಈಗಾಗಲೇ ಕ್ರೀಡಾಂಗಣ, ಈಜು ಕೊಳಗಳನ್ನು ತೆರೆಯಲಾಗಿದೆ. ಇವುಗಳ ಸದ್ಭಳಕೆ ಮಾಡಿಕೊಂಡು ಇನ್ನಷ್ಟು ಸಾಧನೆ ಮಾಡಬೇಕು ಎಂದರು.
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಸಮಾಜದ ಪ್ರಮುಖರಾದ ಮೋಹನ ಕಟ್ಟಿಮನಿ, ಎಸ್.ಎನ್.ಬಳ್ಳಾರಿ, ವಾಜಿ ಗಡಾದ, ಪರಶುರಾಮ ಕಟ್ಟಿಮನಿ, ಮೇದಾಪೂರ, ಸುರೇಶ ಕಟ್ಟಿಮನಿ, ಮೋಹನ ಭಜಂತ್ರಿ, ಲಕ್ಷ್ಮವ್ವ ಭಜಂತ್ರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರೋಹನ್ ಜಗದೀಶ ಇದ್ದರು.
ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್. ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ ವಂದಿಸಿದರು. ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ ಉಪನ್ಯಾಸ ನೀಡಿದರು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ನುಲಿಯ ಚಂದಯ್ಯ ಚಿತ್ರ ಮೆರವಣಿಗೆ ವಿವಿಧ ಕಲಾ ಪ್ರಕಾರಗಳೊಂದಿಗೆ ಅದ್ದೂರಿಯಾಗಿ ಆರಂಭಗೊಂಡು ಮುಳಗುಂದ ನಾಕಾ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿತು. ಮೆರವಣಿಗೆಗೆ ಶಾಸಕ ಎಸ್.ವಿ. ಸಂಕನೂರು ಚಾಲನೆ ನೀಡಿದರು.
Quote - ನುಲಿಯ ಚಂದಯ್ಯ ಸಮುದಾಯದ ಮಕ್ಕಳು ಶಿಕ್ಷಣವಂತರಾಗಿ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸುವ ಮೂಲಕ ಶ್ರೇಷ್ಠ ವ್ಯಕ್ತಿಗಳಾಗಬೇಕು ಎಚ್.ಕೆ.ಪಾಟೀಲ ಸಚಿವ
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ; ಸಾಧಕರಿಗೆ ಸನ್ಮಾನ
ಪ್ರತಿಭಾ ಪುರಸ್ಕಾರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 93.80 ಅಂಕ ಪಡೆದ ಭೂಮಿಕಾ ಪ್ರಶಾಂತ ಬಾಗಲಕೋಟಿ ಯಶಸ್ವಿನಿ ಮಾರುತಿ ಕಟ್ಟಿಮನಿ (ಶೇ 86) ಚಂದ್ರಶೇಖರ ಹನಮಂತಪ್ಪ ಭಜಂತ್ರಿ (ಶೇ 82.30) ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 92.80 ಅಂಕ ಪಡೆದ ಸ್ಪೂರ್ತಿ ತಿಪ್ಪಣ್ಣ ಸೀತಾರಹಳ್ಳಿ ಪೂಜಾ ಪ್ರಶಾಂತ ಬಾಗಲಕೋಟಿ (ಶೇ 71.20) ಬಿವಿಎ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಪ್ರಸನ್ನ ರಮೇಶ ಗಡಾದ ಹಾಗೂ ಎಂಬಿಬಿಎಸ್ ವಿದ್ಯಾರ್ಥಿನಿ ಪ್ರತಿಭಾ ಕಟ್ಟಿಮನಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಮಾಜದ ಮುಖಂಡರಿಗೆ ಸನ್ಮಾನ: ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿವಾನಂದ ಫಕೀರಪ್ಪ ಭಜಂತ್ರಿ ಹಾಗೂ ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಎಚ್.ಬಿ. ವೀರಾಪೂರ ಪರಶುರಾಮ ಎಫ್. ಕಟ್ಟಿಮನಿ ಮೋಹನ್ ಎಚ್. ಕಟ್ಟಿಮನಿ ಮೋಹನ ಭಜಂತ್ರಿ ಹುಲ್ಲಪ್ಪ ಭಜಂತ್ರಿ ವಿಜಯ ಮುಳಗುಂದ ಕೆ. ಲೋಕೇಶ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.