ADVERTISEMENT

ಗದಗ: ಬಿಸಿಲ ಧಗೆಗೆ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2018, 10:04 IST
Last Updated 17 ಸೆಪ್ಟೆಂಬರ್ 2018, 10:04 IST
ಗದುಗಿನಲ್ಲಿ ಸೋಮವಾರ ಸುರಿದ ಧಾರಾಕಾರ ಮಳೆಯು ಗಣೇಶ ವಿಸರ್ಜನಾ ಮೆರವಣಿಗೆಗೆ ಅಡ್ಡಿಯಾಯಿತು. ಟ್ರ್ಯಾಕ್ಟರ್‌ನಲ್ಲಿದ್ದ ಗಣೇಶಮೂರ್ತಿಗೆ ಟಾರ್ಪಾಲ್‌ ಹೊದೆಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ದೃಶ್ಯ ಭೂಮರೆಡ್ಡಿ ವೃತ್ತದ ಬಳಿ ಕಂಡುಬಂತು
ಗದುಗಿನಲ್ಲಿ ಸೋಮವಾರ ಸುರಿದ ಧಾರಾಕಾರ ಮಳೆಯು ಗಣೇಶ ವಿಸರ್ಜನಾ ಮೆರವಣಿಗೆಗೆ ಅಡ್ಡಿಯಾಯಿತು. ಟ್ರ್ಯಾಕ್ಟರ್‌ನಲ್ಲಿದ್ದ ಗಣೇಶಮೂರ್ತಿಗೆ ಟಾರ್ಪಾಲ್‌ ಹೊದೆಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ದೃಶ್ಯ ಭೂಮರೆಡ್ಡಿ ವೃತ್ತದ ಬಳಿ ಕಂಡುಬಂತು   

ಗದಗ: ಬಿಸಿಲ ಧಗೆಯಿಂದ ತತ್ತರಿಸಿದ್ದ ಜಿಲ್ಲೆಯ ಜನತೆಗೆ ಸೋಮವಾರ ಮಧ್ಯಾಹ್ನ ಸುರಿದ ಮಳೆ ತಂಪೆರೆದಿದೆ. ಗದಗ ನಗರ, ಮುಂಡರಗಿ, ಡಂಬಳ ಹೋಬಳಿ ವ್ಯಾಪ್ತಿಯಲ್ಲಿ 1 ಗಂಟೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಸುರಿಯಿತು.

ಭಾನುವಾರ ನಗರದಲ್ಲಿ 35 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಸಾಮಾನ್ಯವಾಗಿ ಸೆಪ್ಟೆಂಬರ್‌ ತಿಂಗಳಲ್ಲಿ ಗದುಗಿನಲ್ಲಿ 30ರಿಂದ 31 ಡಿಗ್ರಿ ಸೆಲ್ಸಿಯಸ್‌ ವಾಡಿಕೆ ಉಷ್ಣಾಂಶ ಇರುತ್ತದೆ. ಆದರೆ, ಭಾನುವಾರ ದಶಕದಲ್ಲೇ ದಾಖಲೆ ಉಷ್ಣಾಂಶ ದಾಖಲಾಗಿತ್ತು. ಅಸಹನೀಯ ಧಗೆಯಿಂದ ಜನರು ಕಂಗಟ್ಟಿದ್ದರು.

ಸೋಮವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಆಗಾಗ್ಗ ತುಂತುರು ಮಳೆಯಾಗುತ್ತಿತ್ತು. ಮಧ್ಯಾಹ್ನ 2 ಗಂಟೆ ವೇಳೆಗೆ ಮಳೆ ಬಿರುಸು ಪಡೆದು,ಆರ್ಭಟಿಸಿತು.ಮಳೆಯ ಹಿನ್ನೆಲೆಯಲ್ಲಿ ವಾತಾವರಣ ತಂಪಾಗಿದೆ. ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್‌ಗೆ ತಗ್ಗಿದೆ.

ADVERTISEMENT

ಮತ್ತೆ ಮೂಡಿದ ಭರವಸೆ: ಮಳೆ ಕೊರತೆಯಿಂದಾಗಿ ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನ ಈರುಳ್ಳಿ, ಬಳ್ಳಿ ಶೇಂಗಾ, ಗೋವಿನಜೋಳ ಮೆಣಸಿನಕಾಯಿ ಬೆಳೆಗಳು ಒಣಗಲು ಪ್ರಾರಂಭಿಸಿದ್ದವು. ರೈತರು ಮುಂಗಾರು ಬೆಳೆಯ ಆಸೆಯನ್ನೇ ಕೈಬಿಟ್ಟಿದ್ದರು.ಈಗ ಮಳೆ ಸುರಿದಿರುವುದರಿಂದ ಮತ್ತೆ ಭರವಸೆ ಮೂಡಿದೆ. ಇದೇ ರೀತಿಯಲ್ಲಿ ಇನ್ನೊಂದೆರಡು ಮಳೆ ಲಭಿಸಿದರೆ ಬೆಳೆಗಳು ಬದುಕಿ ಉಳಿಯಲಿವೆ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.