ADVERTISEMENT

ಗದಗ: ಪ್ರತ್ಯೇಕ ಮೀಸಲಾತಿ ನೀಡದಿದ್ದರೆ ಹೋರಾಟ ತೀವ್ರ

ಅಲೆಮಾರಿ ಸಮುದಾಯದಿಂದ ಬೃಹತ್‌ ಪ್ರತಿಭಟನೆ; ಸಿಎಂಗೆ ಮನವಿ ಸಲ್ಲಿಸಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 4:11 IST
Last Updated 31 ಆಗಸ್ಟ್ 2025, 4:11 IST
ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ 3ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಆಗ್ರಹಿಸಿ ಅಲೆಮಾರಿ ಸಮುದಾಯಗಳ ಮುಖಂಡರು ಶನಿವಾರ ಬೃಹತ್‌ ಪಾದಯಾತ್ರೆ ನಡೆಸಿದರು
ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ 3ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಆಗ್ರಹಿಸಿ ಅಲೆಮಾರಿ ಸಮುದಾಯಗಳ ಮುಖಂಡರು ಶನಿವಾರ ಬೃಹತ್‌ ಪಾದಯಾತ್ರೆ ನಡೆಸಿದರು   

ಗದಗ: ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿಯ 59 ಸೂಕ್ಷ್ಮ, ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ವಂಚಿತ ಹೋರಾಟ ಸಮಿತಿ ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾದ ಗದಗ ಜಿಲ್ಲಾ ಘಟಕ ವತಿಯಿಂದ ಶನಿವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ನಗರದ ಕಿತ್ತೂರರಾಣಿ ಚನ್ನಮ್ಮ ಸರ್ಕಲ್‌ನಿಂದ ಮುಳಗುಂದ ನಾಕಾ, ಟಿಪ್ಪು ಸರ್ಕಲ್‌ ಮಾರ್ಗವಾಗಿ ಬೃಹತ್ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಅಲೆಮಾರಿ ಸಮುದಾಯದ ಕಲಾವಿದರು ವೇಷಭೂಷಣಗಳೊಂದಿಗೆ ಭಾಗವಹಿಸಿ ತಮಗೆ ಆದ ಅನ್ಯಾಯ ಖಂಡಿಸಿದರು. ಅಲೆಮಾರಿಗಳಿಗೆ ಪ್ರತ್ಯೇಕ ಶೇ 3ರಷ್ಟು ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದರು.

ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರಿಂದ ಕೆಲವು ಗಂಟೆಗಳ ಕಾಲ ನಗರದ ಮುಳಗುಂದ ನಾಕಾ, ಕಿತ್ತೂರು ಚನ್ನಮ್ಮ ಸರ್ಕಲ್, ಟಿಪ್ಪು ಸರ್ಕಲ್‍ದಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

ADVERTISEMENT

ಅಲೆಮಾರಿ ಬುಡಕಟ್ಟು ಮಹಾಸಭಾ ಗದಗ ಜಿಲ್ಲಾ ಘಟಕ ಅಧ್ಯಕ್ಷ ದುರಗೇಶ ವಿಭೂತಿ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳು ಗತಿಸಿದರೂ ಅಲೆಮಾರಿ ಸಮುದಾಯಗಳಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಈಗಲೂ ಅಲೆಮಾರಿಗಳು ಗುಡಿಸಲು, ಟೆಂಟ್‌, ಜೋಪಡಿಗಳಲ್ಲಿ ಯಾವುದೇ ಸೌಕರ್ಯ ಇಲ್ಲದೇ ಬದುಕುತ್ತಿದ್ದಾರೆ. ಅಲೆಮಾರಿಗಳು ಇಂದಿಗೂ ಅನಕ್ಷರಸ್ಥರಾಗಿಯೇ ಉಳಿದಿದ್ದಾರೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸರ್ಕಾರ ಮತ್ತೇ ಅನ್ಯಾಯ ಮಾಡಿದೆ. ಅನ್ಯಾಯ ಸರಿಪಡಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

‘ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಆಯೋಗವು ಅಲೆಮಾರಿಗಳಿಗೆ ಪ್ರತ್ಯೇಕ ಶೇ 1 ಮೀಸಲಾತಿ ಶಿಫಾರಸು ಮಾಡಿದೆ. ಆದರೆ, ಮುಖ್ಯಮಂತ್ರಿ ಅಧ್ಯಕ್ಷತೆಯ ಸಚಿವ ಸಂಪುಟದಲ್ಲಿ ಶೇ 1 ಮೀಸಲಾತಿಯನ್ನು ಬಲಾಢ್ಯ ಸಮುದಾಯಗಳ ಜತೆಗೆ ಸಿ ಗ್ರೂಪ್‍ನಲ್ಲಿ ಸೇರಿಸಿದ್ದು ಖಂಡನೀಯ. ಅದನ್ನು ಪ್ರತ್ಯೇಕಿಸಿ ಅಸ್ಪೃಶ್ಯ ಸಂಬಂಧಿತ ಅಲೆಮಾರಿಗಳಿಗೆ ವಿಶೇಷವಾಗಿ ಶೇ 3ರಷ್ಟು ಮೀಸಲಾತಿ ನೀಡಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು.

ಅಲೆಮಾರಿ ಸಮುದಾಯಗಳ ಹೋರಾಟಕ್ಕೆ ದಲಿತ ಸಂಘಟನೆಗಳು, ದಲಿತ ಮುಖಂಡರು, ಎಸ್‌ಸಿ, ಎಸ್‌ಟಿ ದೌರ್ಜನ್ಯ ಸಮಿತಿ ಸದಸ್ಯರು, ಸಾಹಿತಿಗಳು, ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಅಲೆಮಾರಿಗಳ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ 59 ಅಲೆಮಾರಿ ಸಮುದಾಯಗಳ ಪ್ರಮುಖರು, ಚೆನ್ನದಾಸರ, ಗಂಟಿಚೋರ, ಶಿಳ್ಳೇಕ್ಯಾತ, ಸುಡುಗಾಡುಸಿದ್ದ, ಬುಡ್ಗಜಂಗಮ, ದೊಂಬರು, ಗೋಸಂಗಿ, ಸಿಂಧೋಳ, ಹಂದಿಜೋಗಿ, ದಕ್ಕಲಿಗ ಸೇರಿದಂತೆ ಇನ್ನುಳಿದ ಅಲೆಮಾರಿ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

ಅಲೆಮಾರಿ ಸಮುದಾಯಗಳ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಹಾಗೂ ಎಲ್ಲ ತಾಲ್ಲೂಕುಗಳ ಪದಾಧಿಕಾರಿಗಳು, ಜಿಲ್ಲಾ ಘಟಕದ ಅಧ್ಯಕ್ಷರು, ಕಾರ್ಯದರ್ಶಿಗಳು, ತಾಲ್ಲೂಕು ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಚಿಂತಕರು, ಸಮುದಾಯಗಳ ಹಿತೈಷಿಗಳು, ಹೋರಾಟಗಾರರು, ಯುವಕರು, ಮಹಿಳೆಯರು, ಅಲೆಮಾರಿ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.

ಭಿಕ್ಷೆ ಬೇಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಲೆಮಾರಿಗಳು   
ಅಲೆಮಾರಿ ಸಮುದಾಯಗಳ ಜನರು ವೇಷ ಧರಿಸಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು
ದಲಿತ ಸಂಘಟನೆಗಳು ಸಾಹಿತಿಗಳು ಪ್ರಗತಿಪರರು ನಮ್ಮ ಹೋರಾಟಕ್ಕೆ ಒಕ್ಕೂರಲಿನ ಬೆಂಬಲ ವ್ಯಕ್ತಪಡಿಸಿದ್ದು ಬಲ ಹೆಚ್ಚಿಸಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಲೆಮಾರಿ ಸಮುದಾಯವರಿಗೆ ಧನ್ಯವಾದ ಸಲ್ಲಿಸುವೆ
ಫಕ್ಕೀರೇಶ ಕಟ್ಟಿಮನಿ ಅಲೆಮಾರಿ ಬುಡಕಟ್ಟು ಮಹಾಸಭಾ ಗದಗ ಘಟಕದ ಪ್ರಧಾನ ಕಾರ್ಯದರ್ಶಿ
ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದ್ದು ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಲು ಸರ್ಕಾರ ಕ್ರಮವಹಿಸಬೇಕು
ಎಸ್.ಎನ್.ಬಳ್ಳಾರಿ ದಲಿತ ಮುಖಂಡ

ಅಲೆಮಾರಿಗಳಿಗೆ ಮರಣ ಶಾಸನವಾಗಲಿದೆ:

‘ಅಲೆಮಾರಿ ಸಮುದಾಯದವರಿಗೆ ಸರ್ಕಾರಿ ನೌಕರಿ ಇಲ್ಲ. ಪದವೀಧರರೂ ಅಲ್ಲ. ಇನ್ನೂ ರಾಜಕೀಯವಾಗಿ ಯಾವುದೇ ಸ್ಥಾನಮಾನ ಪಡೆದಿಲ್ಲ. ಇಂತಹ ತಬ್ಬಲಿ ಸಮುದಾಯಗಳಾದ ಅಲೆಮಾರಿ ಸಮುದಾಯಗಳಿಗೆ ಶೇ 1 ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಆಯೋಗ ಶಿಫಾರಸು ಮಾಡಿದೆ. ಆದರೆ ಅದನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಈ ನಿರ್ಲಕ್ಷ್ಯ ಬರುವ ದಿನಮಾನಗಳಲ್ಲಿ ಅಲೆಮಾರಿಗಳಿಗೆ ಮರಣ ಶಾಸನವಾಗಲಿದೆ’ ಎಂದು ದುರಗೇಶ ವಿಭೂತಿ ಕಿಡಿಕಾರಿದರು.

ಗಮನ ಸೆಳೆದ ಅಲೆಮಾರಿಗಳ ವೇಷಭೂಷಣ:

ಶನಿವಾರ ನಡೆದ ಪ್ರತಿಭಟನೆಯಲ್ಲಿ ಅಲೆಮಾರಿ ಸಮುದಾಯಗಳ ಜನರು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ಮೈಗೆ ಚಾಟಿಯಿಂದ ಹೊಡೆದುಕೊಂಡು ಭಿಕ್ಷೆ ಬೇಡಿ ಶಂಖ ಜಾಗಟೆ ಭಾರಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದರು. ಚಾಟಿ ಹೊಡೆದುಕೊಳ್ಳುವ ಸಿಂಧೊಳು ರಾಮ ಲಕ್ಷ್ಮಣ ಸೀತೆ ಆಂಜನೇಯ ವೇಷಧಾರಿಗಳಾದ ಬುಡಕ ಜಂಗಮರು ತಂಬೂರಿ ಗೋಪಾಳ ಹಿಡಿದುಕೊಂಡ ಚನ್ನದಾಸರು ತೊಗಲು ಗೊಂಬೆಗಳನ್ನು ಮಾಡುವ ಸಿಳ್ಳೆಕ್ಯಾತರು ಶಂಖ ಜಾಗಟೆ ಬಾರಿಸುವ ಗಂಟಿಚೋರರು ಗೆಜ್ಜೆ ಸದ್ದಿನ ಹಂದಿ ಜೋಗಿ ಕಲ್ಲು ಹೊರುವ ದೊಂಬರು.. ಹೀಗೆ ಅಲೆಮಾರಿಗಳು ತಮ್ಮ ವೇಷ ಭೂಷಣಗಳ ಮೂಲಕ ಪ್ರತಿಭಟನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.