ADVERTISEMENT

ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಅವ್ಯವಹಾರ: ಆರೋಪ

ಗಜೇಂದ್ರಗಡ ತಾಲ್ಲೂಕಿನ 7,605 ರೈತರಿಗೆ ₹14.41 ಕೋಟಿ ವಿತರಣೆ; ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:19 IST
Last Updated 1 ಜನವರಿ 2026, 6:19 IST
ನರೇಗಲ್‌ ಪಟ್ಟಣದ ಶರಣಪ್ಪ ಧರ್ಮಾಯತ ಅವರು ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯ(ಪ್ರಕೃತಿ ವಿಕೋಪ ಶಾಖೆ) ದಿಂದ ಪಡೆದಿರುವ ಪರಿಹಾರ ವಿತರಣೆ ಮಾಹಿತಿ
ನರೇಗಲ್‌ ಪಟ್ಟಣದ ಶರಣಪ್ಪ ಧರ್ಮಾಯತ ಅವರು ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯ(ಪ್ರಕೃತಿ ವಿಕೋಪ ಶಾಖೆ) ದಿಂದ ಪಡೆದಿರುವ ಪರಿಹಾರ ವಿತರಣೆ ಮಾಹಿತಿ   

ನರೇಗಲ್: ನರೇಗಲ್ ಹೋಬಳಿ ಸೇರಿದಂತೆ ಗಜೇಂದ್ರಗಡ ತಾಲ್ಲೂಕಿನಾದ್ಯಂತ ಬಹುತೇಕ ರೈತರ ಮುಂಗಾರು ಬೆಳೆಗಳು ಹಾಳಾಗಿ ಹೋಗಿದ್ದವು. ಆದರೆ, ಗಜೇಂದ್ರಗಡ ತಾಲ್ಲೂಕಿನ ಬಹಳಷ್ಟು ರೈತರಿಗೆ ಬೆಳೆಹಾನಿ ಪರಿಹಾರ ಸಿಕ್ಕಿಲ್ಲ. ಇದರಿಂದಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ.

ಅತಿವೃಷ್ಟಿಯಿಂದ ಬೆಳೆಹಾನಿಯಾದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಮುಂಗಾರಿನ ಅತಿವೃಷ್ಟಿ ಪರಿಹಾರ ವಿತರಣೆಗಾಗಿ ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿತ್ತು. ಅದರಂತೆ ಜಿಲ್ಲೆಗೆ ₹135 ಕೋಟಿ ಪರಿಹಾರ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ತಾಲ್ಲೂಕಿನ ಅನೇಕ ರೈತರಿಗೆ ಈವರೆಗೆ ಬೆಳೆ ಪರಿಹಾರ ಸಿಕ್ಕಿಲ್ಲ.

ವಿಪತ್ತು ನಿರ್ವಹಣಾ ಮಾರ್ಗಸೂಚಿಯಂತೆ ಪ್ರಸ್ತುತ ಗರಿಷ್ಠ 2 ಹೆಕ್ಟೇರ್‌ ಪ್ರದೇಶದ ಮಿತಿಗೊಳಪಟ್ಟು ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಮಳೆಯಾಶ್ರಿತ ಬೆಳೆಗೆ ₹8,500, ನೀರಾವರಿ ಪ್ರದೇಶದ ಬೆಳೆಗೆ ₹17,000, ದೀರ್ಘಾವಧಿ (ತೋಟಗಾರಿಕೆ) ಬೆಳೆಗೆ ₹22,500 ಘೋಷಿಸಲಾಗಿತ್ತು. ಅದರಂತೆ ಹಂತ ಹಂತವಾಗಿ ಎಲ್ಲ ರೈತರಿಗೂ ಬೆಳೆ ಹಾನಿ ಪರಿವಾರ ಜಮೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೆಲ ರೈತರಿಗೆ ಎರಡು ಕಂತುಗಳಲ್ಲಿ ಹಣ ಜಮೆಯಾಗಿವೆ. ಇನ್ನೊಂದೆಡೆ ಕೆಲ ರೈತರಿಗೆ ಒಂದು ಬಿಡಿಗಾಸು ಜಮೆಯಾಗಿಲ್ಲ.

ADVERTISEMENT

ಬೆಳೆ ಹಾನಿ ವಿತರಣೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದು ರೈತರಿಗೆ ಅನ್ಯಾಯವಾಗಿದೆ ಎಂದು ರೈತರು ಪ್ರತಿಭಟನೆ ಮಾಡಿದ್ದರೂ ಜಿಲ್ಲಾಡಳಿತ ಮಾತ್ರ ಎಲ್ಲ ರೈತರಿಗೆ ಬೆಳೆ ಹಾನಿ ಜಮೆಯಾಗಿದೆ ಎಂದು ಹೇಳಿತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯದ (ಪ್ರಕೃತಿ ವಿಕೋಪ ಶಾಖೆ) ಪ್ರಕಾರ 2025-26ನೇ ಸಾಲಿನಲ್ಲಿ ಗಜೇಂದ್ರಗಡ ತಾಲ್ಲೂಕಿನ 7,605 ರೈತರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳನ್ವಯ ₹7,20,97,827 ಪರಿಹಾರ ಮತ್ತು ರಾಜ್ಯ ಸರ್ಕಾರದ ಹೆಚ್ಚುವರಿ ₹7,20,97,357 ಗಳ ಪರಿಹಾರ ಸೇರಿದಂತೆ ಒಟ್ಟು₹14,41,95,184 ಮೊತ್ತದ ಪರಿಹಾರ ವಿತರಿಸಲಾಗಿದೆ. ಆದರೆ, ತಾಲ್ಲೂಕಿನ ಬಹಳಷ್ಟು ಜನರಿಗೆ ಬೆಳೆ ಹಾನಿ ಪರಿಹಾರ ವಿತರಣೆಯೇ ಆಗಿಲ್ಲ. ಹಾಗಿದ್ದರೆ, ₹14 ಕೋಟಿಗೂ ಅಧಿಕ ಹಣ ಎಲ್ಲಿ ಹೋಗಿದೆ ಎಂಬ ಪ್ರಶ್ನೆ ರೈತರದ್ದಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರ ವಿತರಣೆಯ್ಲಲಿ ಸಾಕಷ್ಟು ಅವ್ಯವಹಾರ ನಡೆದ ಸಂಶಯವಿದೆ. ಗಜೇಂದ್ರಗಡ ತಾಲ್ಲೂಕಿನ 7605 ರೈತರಿಗೆ ಬೆಳೆ ಹಾನಿ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದು, ಯಾವ ರೈತರ ಖಾತೆಗೆ ಎಷ್ಟು ಪರಿಹಾರ ವಿತರಣೆಯಾಗಿದೆ ಎಂಬ ವಿವರವನ್ನು ಕೇಳಲಾಗಿದೆ. ಅದರ ವಿವರ ಬಂದಲ್ಲಿ ಸತ್ಯ ಹೊರ ಬರಲಿದೆ ಎಂದು ನರೇಗಲ್ ರೈತರ ಸೇನಾ ಅಧ್ಯಕ್ಷ ಶರಣಪ್ಪ ಧರ್ಮಾಯತ ಹೇಳಿದರು.

ಬೆಳೆಹಾನಿ ವಿತರಣೆಯು ಡಿಬಿಟಿ ಮುಖಾಂತರ ನಡೆದಿದ್ದು ಅವ್ಯವಹಾರಕ್ಕೆ ಆಸ್ಪದವಿಲ್ಲ. ರೈತರ ಎಫ್‌ಐಡಿಯಲ್ಲಿನ ವ್ಯತ್ಯಾಸ ಸೇರಿದಂತೆ ಇತರೆ ತಾಂತ್ರಿಕ ಕಾರಣಗಳಿಂದ ಪರಿಹಾರ ವಿತರಣೆಯಲ್ಲಿ ತೊಡಕಾಗಿದೆ. ಅದಕ್ಕಾಗಿ ಎಲ್ಲ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸುವಂತೆ ತಿಳಿಸಲಾಗಿದೆ.
–ಕಿರಣಕುಮಾರ ಕುಲಕರ್ಣಿ, ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.