ADVERTISEMENT

ರಾಜಕಾಲುವೆಗೆ ಆಗ್ರಹಿಸಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 3:46 IST
Last Updated 7 ಸೆಪ್ಟೆಂಬರ್ 2022, 3:46 IST
ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಬೆಟಗೇರಿಯ ಮಂಜುನಾಥ ನಗರ ಹಾಗೂ ಭಜಂತ್ರಿ ಓಣಿ ನಿವಾಸಿಗಳು ಪಾಲಾಬಾದಾಮಿ ರಸ್ತೆ ತಡೆದು ಸೋಮವಾರ ಪ್ರತಿಭಟಿಸಿದರು
ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಬೆಟಗೇರಿಯ ಮಂಜುನಾಥ ನಗರ ಹಾಗೂ ಭಜಂತ್ರಿ ಓಣಿ ನಿವಾಸಿಗಳು ಪಾಲಾಬಾದಾಮಿ ರಸ್ತೆ ತಡೆದು ಸೋಮವಾರ ಪ್ರತಿಭಟಿಸಿದರು   

ಗದಗ: ಸೋಮವಾರ ರಾತ್ರಿ ಸುರಿದ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಮಂಜುನಾಥ ನಗರ ಹಾಗೂ ಭಜಂತ್ರಿ ಓಣಿ ನಿವಾಸಿಗಳು ಮಂಗಳವಾರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಾಲಾಬಾದಾಮಿ ರಸ್ತೆಯಲ್ಲಿ ಎರಡು ಗಂಟೆಗಳ ಕಾಲ ಧರಣಿ ಕುಳಿತು ಮೂಲಸೌಕರ್ಯ ಕಲ್ಪಿಸಲು ಕ್ರಮವಹಿಸುವಂತೆ ಆಗ್ರಹಿಸಿದರು.

‘ಈ ಮಳೆಗಾಲದಲ್ಲಿ ಮೂರು ನಾಲ್ಕು ಬಾರಿ ಮನೆಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳು ಕುಸಿದು ಬಿದ್ದಿವೆ. ಮಳೆಯಿಂದ ಹಾನಿಗೊಳಗಾದ ಸಂದರ್ಭದಲ್ಲಿ ವೀಕ್ಷಣೆ ಮಾಡಿ ಹೋಗುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈವರೆಗೂ ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಟ್ಟಿಲ್ಲ. ಬಿದ್ದ ಮನೆಯಲ್ಲಿಯೇ ವಾಸ ಮಾಡುವ ಪರಿಸ್ಥಿತಿ ಮುಂದುವರಿದಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.

‘ಸರ್ಕಾರಕ್ಕೆ ಬಡವರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಟರ್ನಲ್‌ಪೇಟೆಯಲ್ಲಿ ಸುಮಾರು 10 ಮನೆಗಳು ಕುಸಿದಿವೆ. ತಾಯಂದಿರು ಅಲ್ಲೇ ವಾಸ ಮಾಡುತ್ತಿದ್ದಾರೆ. ಜನರು ಕಟ್ಟುವ ತೆರಿಗೆ ಹಣದಲ್ಲೇ ಸಚಿವರು, ಜಿಲ್ಲಾಧಿಕಾರಿ, ತಹಶೀಲ್ದಾರ್‌ಗಳು ಎಸಿ ಕಾರ್‌ನಲ್ಲಿ ಅಡ್ಡಾಡುತ್ತಾರೆ. ಇವರೆಲ್ಲರಿಗೂ ಬಡಜನರ ಬಗ್ಗೆ ಕಾಳಜಿ ಇದ್ದರೆ ತಕ್ಷಣವೇ ₹25 ಸಾವಿರ ಹಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ, ಸಾಮೂಹಿಕವಾಗಿ ವಿಷ ಸೇವಿಸುತ್ತೇವೆ. ಜನರಿಗೆ ಏನಾದರೂ ತೊಂದರೆ ಆದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಭಜಂತ್ರಿ ಓಣಿಯಿಂದ ನರಸಾಪುರದವರೆಗೆ ರಾಜಕಾಲುವೆ ಆದರೆ ಮಾತ್ರ ಈ ಸಮಸ್ಯೆ ಬಗೆಹರಿಯುತ್ತದೆ. ಇಲ್ಲವಾದಲ್ಲಿ ಸಮಸ್ಯೆ ಮುಂದುವರಿಯುತ್ತದೆ. ಆದ್ದರಿಂದ, ಸ್ಥಳೀಯ ಆಡಳಿತ ರಾಜಕಾಲುವೆ ಮಾಡಲು ಕ್ರಮವಹಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

‘ಸೋಮವಾರ ಸುರಿದ ಮಳೆಯಿಂದಾಗಿ ಆಹಾರ ಪದಾರ್ಥಗಳು ಹಾಳಾಗಿವೆ. ಬಡವರ ಪರಿಸ್ಥಿತಿ ಚಿಂತಾಜನಕವಾಗಿದೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಕೂಡಲೇ ಸಮಸ್ಯೆಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಪಾಲಾಬಾದಾಮಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದಾಗಿ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಪೊಲೀಸರು ಪ್ರತಿಭಟನಕಾರರ ಮನ ಒಲಿಸಿ, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.