ADVERTISEMENT

ಗದಗ | ಮಣ್ಣು, ನೀರು ಸಂರಕ್ಷಣೆಗೆ ಕ್ರಮವಹಿಸಿ: ಪ್ರೊ. ಪಿ.ಎಲ್‌.ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 13:51 IST
Last Updated 10 ಏಪ್ರಿಲ್ 2025, 13:51 IST
ಗದುಗಿತ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಕೃಷಿಗೋಷ್ಠಿ ಕಾರ್ಯಕ್ರಮಕ್ಕೆ ಧಾರವಾಡ ಕೃಷಿ ವಿ.ವಿ ಕುಲಪತಿ ಪ್ರೊ. ಪಿ.ಎಲ್‌.ಪಾಟೀಲ ಚಾಲನೆ ನೀಡಿದರು
ಗದುಗಿತ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಕೃಷಿಗೋಷ್ಠಿ ಕಾರ್ಯಕ್ರಮಕ್ಕೆ ಧಾರವಾಡ ಕೃಷಿ ವಿ.ವಿ ಕುಲಪತಿ ಪ್ರೊ. ಪಿ.ಎಲ್‌.ಪಾಟೀಲ ಚಾಲನೆ ನೀಡಿದರು   

ಗದಗ: ‘ಗದಗ ಜಿಲ್ಲೆ ಮಳೆ ಆಧಾರಿತ ಕೃಷಿ ಅವಲಂಬಿಸಿದ್ದು, ಇಲ್ಲಿ ನಿಸರ್ಗದತ್ತ ಸಂಪನ್ಮೂಲಗಳಾದ ಮಣ್ಣು ಹಾಗೂ ನೀರನ್ನು ಸಂರಕ್ಷಿಸಬೇಕಿದೆ. ಯಾವ ಪ್ರದೇಶದಲ್ಲಿ ಮಣ್ಣು ಹಾಗೂ ನೀರನ್ನು ಸಂರಕ್ಷಿಸುವುದಿಲ್ಲವೋ ಅಲ್ಲಿ ಕೃಷಿ ಸಮೃದ್ಧವಾಗಿರಲು ಸಾಧ್ಯವಿಲ್ಲ’ ಎಂದು ಧಾರವಾಡದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್‌.ಪಾಟೀಲ ಹೇಳಿದರು.

ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಕೃಷಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

‘ಹೊಲಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು ಸರ್ಕಾರ ಅನೇಕ ಅವಕಾಶಗಳನ್ನು ನೀಡಿದ್ದು, ರೈತರು ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕಿದೆ. ರೈತರು ಮಾರುಕಟ್ಟೆ ಲಾಭಕ್ಕಾಗಿ ಒಂದೇ ರೀತಿಯ ಬೆಳೆ ಬೆಳೆಯದೇ ವೈವಿಧ್ಯ ಬೆಳೆಗಳನ್ನು ಬೆಳೆದಾಗ ಮಣ್ಣಿನ ಪೋಷಕಾಂಶ ಉಳಿಸಬಹುದು. ನಾವು ಆರೋಗ್ಯವನ್ನು ಪರೀಕ್ಷಿಸಿಕೊಂಡಂತೆ ಜಮೀನಿನ ಮಣ್ಣನ್ನು ಸಹ ಕಾಲಕಾಲಕ್ಕೆ ಪರೀಕ್ಷೆಗೆ ಒಳಪಡಿಸಬೇಕು’ ಎಂದರು.

ADVERTISEMENT

‘ತೋಂಟದಾರ್ಯ ಜಾತ್ರೆಗೆ ವಿಶಿಷ್ಟ ಇತಿಹಾಸ ಇದ್ದು, ಪ್ರತಿ ವರ್ಷ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಈ ಬಾರಿ ಕೃಷಿಯ ಉನ್ನತೀಕರಣಕ್ಕೆ ಪೂರಕವಾದ ಹಲವು ಮೌಲಿಕ ಗೋಷ್ಠಿಗಳನ್ನು ಏರ್ಪಡಿಸಿರುವುದು ಶ್ಲಾಘನೀಯ’ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್‌. ಮಾತನಾಡಿ, ‘ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಮುಂಗಾರು-ಹಿಂಗಾರು ಕಾಲದ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ. ಇದಿಷ್ಟೇ ಅಲ್ಲದೇ ಕೃಷಿ ಉಪಕರಣ, ಸಾವಯವ ಗೊಬ್ಬರ, ಕೂರಿಗೆಗಳಂಥ ಸಲಕರಣೆಗಳು ಶೇ 90 ರಿಯಾಯಿತಿ ದರದಲ್ಲಿ ಲಭ್ಯವಿದ್ದು, ರೈತರು ಇವುಗಳ ಲಾಭ ಪಡೆಯಬೇಕು’ ಎಂದರು.

ಜಾತ್ರಾ ಮಹೋತ್ಸವದ ಕೃಷಿ ಮೇಳದ ಅಧ್ಯಕ್ಷ ಸುರೇಶ ಕುಂಬಾರ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವು ರೈತರಿಗೆ ಹಾಗೂ ಗ್ರಾಮಗಳ ಉನ್ನತೀಕರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ತೋಂಟದ ಸಿದ್ಧರಾಮ ಸ್ವಾಮೀಜಿ ಸಾನೀದ್ಯ ವಹಿಸಿದ್ದರು. ಜಾತ್ರಾ ಸಮಿತಿಯ ಕಾರ್ಯದರ್ಶಿ ಶಿವಪ್ಪ ಕತ್ತಿ ಸ್ವಾಗತಿಸಿದರು. ಜಾತ್ರಾ ಸಮಿತಿ ಅಧ್ಯಕ್ಷ ಧನೇಶ ದೇಸಾಯಿ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಡಿಎಫ್‌ಒ ಸಂತೋಷ್‌ ಕುಮಾರ್‌ ಕೆಂಚಪ್ಪನವರ, ಎಸ್.ಎಲ್.ಪಾಟೀಲ, ಗುರುನಾಥಗೌಡ ಓದುಗೌಡ್ರ, ಯೋಗೇಶ ಅಪ್ಪಾಜಯ್ಯ ಇದ್ದರು.

Quote - ಆಧುನಿಕ ದಿನಗಳಲ್ಲಿ ಭಾರತ ಸ್ವಾವಲಂಬಿಯಾಗಿ ಆಹಾರ ಭದ್ರತೆ ಪಡೆದಿದೆ. ಅದರ ಜೊತೆಗೆ ಪೌಷ್ಟಿಕ ಭದ್ರತೆ ಸಾಧಿಸಲು ಸಾವಯವ ಕೃಷಿ ಅಗತ್ಯವಾಗಿದೆ ಪ್ರೊ. ಪಿ.ಎಚ್.ಪಾಟೀಲ ಧಾರವಾಡ ಕೃಷಿ ವಿ.ವಿ ಕುಲಪತಿ

Quote - ನರೇಗಾ ಯೋಜನೆ ಅಡಿಯಲ್ಲಿ ಕೃಷಿ ಕವಚ್ ಹೆಸರಲ್ಲಿ ಹೊಲಗಳಿಗೆ ಬದು ನಿರ್ಮಾಣ ಮಾಡಿಕೊಳ್ಳುವ ಅವಕಾಶ ಲಭ್ಯವಿದೆ. ರೈತರು ಇದರ ಲಾಭ ಪಡೆಯಬೇಕು ತಾರಾಮಣಿ ಜಿ.ಎಚ್‌. ಕೃಷಿ ಇಲಾಖೆ ಜಂಟಿ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.