
ಗದಗ: ಜಲಶಕ್ತಿ ಅಭಿಯಾನದ ಮಹತ್ವದ ಭಾಗವಾಗಿರುವ ‘ಜಲಸಂಚಾಯಿ ಜನಭಾಗಿದಾರಿ 1.0’ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆ ಐತಿಹಾಸಿಕ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದೆ.
ಜಲ ಸಂರಕ್ಷಣೆ ಕಾಮಗಾರಿಗಳ ಅನುಷ್ಠಾನದಲ್ಲಿ ಗದಗ ಜಿಲ್ಲೆಯು ಕರ್ನಾಟಕದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ದೇಶದ 780 ಜಿಲ್ಲೆಗಳಲ್ಲಿ (ಝೋನ್ 3, ಕೆಟಗರಿ 3ರಲ್ಲಿ) ನಾಲ್ಕನೇ ಸ್ಥಾನ ಪಡೆಯುವ ಮೂಲಕ ₹25 ಲಕ್ಷ ನಗದು ಬಹುಮಾನಕ್ಕೆ ಭಾಜನವಾಗಿದೆ.
ಪ್ರತಿ ಹನಿನೀರನ್ನು ಸಂರಕ್ಷಿಸಿ ಎಂಬ ಧ್ಯೇಯದೊಂದಿಗೆ ಜಲಸಂಚಾಯಿ ಜನಭಾಗಿದಾರಿ 1.0 ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಮಳೆ ನೀರನ್ನು ಸಂಗ್ರಹಿಸುವುದು, ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಬೆಳೆಸುವುದು, ನೀರಿನ ಗುಣಮಟ್ಟವನ್ನು ಸುಧಾರಿಸುವುದು, ನೀರಿನ ಕೊರತೆಯ ಸವಾಲಿಗೆ ಸಮುದಾಯದ ಸಹಭಾಗಿತ್ವದೊಂದಿಗೆ ಸಮರ್ಥ ಪರಿಹಾರ ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿತ್ತು.
11,971 ಕಾಮಗಾರಿಗಳ ಸಾಧನೆ:
2024 ಏಪ್ರಿಲ್ 1ರಿಂದ 2025 ಮಾರ್ಚ್ 31ರ ವರೆಗಿನ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಬೃಹತ್ ಜಲ ಕ್ರಾಂತಿಗೆ ನಾಂದಿ ಹಾಡಿದವು. ಈ ಅವಧಿಯಲ್ಲಿ ಒಟ್ಟು 11,971 ಜಲ ಸಂರಕ್ಷಣೆ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಜಲಸಂಚಾಯಿ ಪೋರ್ಟಲ್‌ನಲ್ಲಿ ದಾಖಲಿಸಲಾಯಿತು.
ಮುಖ್ಯವಾಗಿ 11,329 ವೈಯಕ್ತಿಕ ಮತ್ತು ಸಮುದಾಯ ಬದು ನಿರ್ಮಾಣ ಮಾಡಲಾಯಿತು. 465 ಮಳೆ ನೀರು ಕೊಯ್ಲು ಕಾಮಗಾರಿಗಳು, 75 ಕೊಳವೆಬಾವಿ ಮರುಪೂರಣ, 10 ಚೆಕ್ ಡ್ಯಾಂ ನಿರ್ಮಾಣದಿಂದ ಗದಗ ಜಿಲ್ಲೆಯ ಜಲ ಸಂರಕ್ಷಣೆಯ ಚಿತ್ರಣವೇ ಬದಲಾಗಿದೆ.
ಕೇಂದ್ರ ತಂಡದಿಂದ ಮನ್ನಣೆ:
ಗದಗ ಜಿಲ್ಲಾ ಪಂಚಾಯಿತಿಯ ಈ ಶ್ರಮಕ್ಕೆ ಕೇಂದ್ರ ತಂಡದಿಂದಲೂ ಮನ್ನಣೆ ದೊರೆತಿದೆ. ಕೇಂದ್ರ ನೋಡಲ್ ಅಧಿಕಾರಿಗಳು 2025 ಜೂನ್ 16ರಿಂದ 21ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ಪರಿಶೀಲನೆ ನಡೆಸಿ, ಕಾಮಗಾರಿಗಳು ಉನ್ನತ ಮಾನದಂಡಗಳನ್ನು ಪೂರೈಸಿರುವುದು ಖಚಿತಪಡಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಶಸ್ತಿಗೆ ಭಾಜನವಾಗಲು ಕಾರಣವಾಗಿದೆ.
ಜಲಸಂಚಾಯಿ ಜನಭಾಗಿದಾರಿ ಅಭಿಯಾನದಲ್ಲಿ ಕರ್ನಾಟಕದಲ್ಲೇ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ಸಂತಸ ತಂದಿದೆ. ಬರುವ ಅನುದಾನವನ್ನು ಅಭಿಯಾನದ ಉದ್ದೇಶ ಈಡೇರಿಕೆಗೆ ಬಳಸಿಕೊಳ್ಳಲಾಗುವುದುಸಿ.ಎನ್. ಶ್ರೀಧರ್ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಹಲವು ಪರಿಸರ ಸ್ನೇಹಿ ಕಾಮಗಾರಿ ಅನುಷ್ಟಾನ ಮಾಡಲಾಗಿದೆ. ಕೇಂದ್ರ ಅಧ್ಯಯನ ತಂಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆಸಿ.ಆರ್. ಮುಂಡರಗಿ ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ
ಇನ್ನಷ್ಟು ಕಾಮಗಾರಿಗೆ ಆದ್ಯತೆ
‘ಜಿಲ್ಲೆಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ 11971 ಕಾಮಗಾರಿ ಮಾಹಿತಿಯನ್ನು ಜಲಸಂಚಾಯಿ ಜನಭಾಗಿದಾರಿ 1.0 ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅತಿ ಹೆಚ್ಚು ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಿರುವುದರಿಂದಲೇ ಈ ಪ್ರಶಸ್ತಿ ಬಂದಿದೆ’ ಎಂದು ಜಿಲ್ಲಾ ಪಂಚಾಯಿತಿ ನರೇಗಾ ವಿಭಾಗದ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ ಕಿರಣಕುಮಾರ್ ಎಸ್.ಎಚ್. ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಇನ್ನಷ್ಟು ಕಾಮಗಾರಿಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.