ADVERTISEMENT

ಗದಗ: ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಶೂನ್ಯ ಅವಧಿಯಲ್ಲಿ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 8:43 IST
Last Updated 17 ಡಿಸೆಂಬರ್ 2025, 8:43 IST
ಎಸ್‌.ವಿ.ಸಂಕನೂರ
ಎಸ್‌.ವಿ.ಸಂಕನೂರ   

ಗದಗ: ಜಿಲ್ಲೆ ರಚನೆಯಾಗಿ ಮೂರು ದಶಕಗಳು ಕಳೆದರೂ ಗದಗ–ಬೆಟಗೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿಯೇ ಮುಂದುವರಿದಿದ್ದು, ಸಾರ್ವಜನಿಕರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ತಿನ ಶೂನ್ಯ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಪ್ರಸ್ತಾಪಿಸಿದರು.

ನಗರದ ಹಲವಾರು ವಾರ್ಡ್‌ಗಳಲ್ಲಿ 15ರಿಂದ 20 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದ್ದು, ಕೆಲ ವಾರ್ಡ್‌ಗಳಲ್ಲಿ ವಿಶೇಷವಾಗಿ 11ನೇ ವಾರ್ಡ್‌ನಲ್ಲಿ ತಿಂಗಳಿಗೆ ಒಂದೇ ಬಾರಿ ನೀರು ಬರುತ್ತಿರುವುದು ನಾಗರಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮಹಿಳೆಯರು ನಗರಸಭೆ ವಿರುದ್ಧ ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನಗರಸಭೆಯು ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದು ಯಾವುದೇ ಶಾಶ್ವತ ಪರಿಹಾರವಾಗಿಲ್ಲ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಸರ್ಕಾರವು ತಕ್ಷಣ ಹಾಗೂ ಶಾಶ್ವತ ಪರಿಹಾರ ಒದಗಿಸಬೇಕೆಂದು ಶೂನ್ಯ ಅವಧಿಯಲ್ಲಿ ಆಗ್ರಹಿಸಲಾಗಿದೆ. ವಿಶೇಷವಾಗಿ ಹಮ್ಮಿಗಿಯಲ್ಲಿರುವ ಎತ್ತುವರಿ ಮೋಟಾರ್‌ಗಳು ಪದೇಪದೇ ಹಾಳಾಗುತ್ತಿರುವುದರಿಂದ ಹೊಸ ಮೋಟಾರ್ ಅಳವಡಿಕೆ, ಎತ್ತುವರಿ ಕೇಂದ್ರಕ್ಕೆ 24/7 ವಿದ್ಯುತ್ ಪೂರೈಕೆ ವ್ಯವಸ್ಥೆ ಹಾಗೂ ಹಮ್ಮಿಗಿಯಿಂದ ಗದಗಕ್ಕೆ ಬರುವ ಮಾರ್ಗದಲ್ಲಿನ ಹಳೆಯ ಹಾಗೂ ಶಕ್ತಿ ಕಳೆದುಕೊಂಡ ಪೈಪ್‍ಗಳನ್ನು ಬದಲಿಸಿ ಹೊಸ ಪೈಪ್‍ಲೈನ್ ಜೋಡಿಸಲು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ.

ADVERTISEMENT

ಈ ವಿಷಯವನ್ನು ಹಿಂದೆಯೂ ಹಲವು ಬಾರಿ ಸದನದಲ್ಲಿ ಪ್ರಸ್ತಾಪಿಸಿದರೂ ಸಂಬಂಧಪಟ್ಟ ಸಚಿವರಿಂದ ಸಮರ್ಪಕ ಸ್ಪಂದನೆ ದೊರಕದಿರುವುದು ವಿಷಾದಕರ ಸಂಗತಿಯಾಗಿದೆ. ಆದ್ದರಿಂದ ಈಗಲಾದರೂ ನಗರಾಭಿವೃದ್ಧಿ ಸಚಿವರು ಸ್ವತಃ ಗದಗ–ಬೆಟಗೇರಿ ನಗರಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ ಎಂದು ಎಸ್.ವಿ. ಸಂಕನೂರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.