ಡಂಬಳ: ಪ್ರವಾಸಿತಾಣಕ್ಕೆ ಹೆಸರಾಗಿರುವ ಡಂಬಳ ಗ್ರಾಮದಲ್ಲಿ ‘ಡಂಬಳ ಉತ್ಸವ’ದ ಭಾಗ್ಯ ಮಾತ್ರ ಮರೀಚಿಕೆಯಾಗಿದ್ದು, ಇದು ಇಲ್ಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ವಾಯವ್ಯ ಭಾಗದಲ್ಲಿ ಬರುವ ದೊಡ್ಡಬಸಪ್ಪನ ಸ್ಮಾರಕವು ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಸುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಿದೆ.
ಎರಡು ಶತಮಾನಗಳ ಈ ಸ್ಮಾರಕವು ಕೆಲವು ಚಿಕ್ಕ-ಪುಟ್ಟ ದುರಸ್ತಿ ಕಾರ್ಯಗಳಿಗೆ ಒಳಗಾಗಿರುವುದನ್ನು ಬಿಟ್ಟರೆ ತನ್ನ ಮೂಲ ಸೌಂದರ್ಯವನ್ನು ಉಳಿಸಿಕೊಂಡಿದೆ. ವಿಶೇಷ ಅಂದರೆ ಅಡಿಯಿಂದ ಮುಡಿಯವರೆಗೆ ನಕ್ಷತ್ರಾಕಾರದ ವಿನ್ಯಾಸವನ್ನು ಹೊಂದಿರುವ ಈ ದೇವಾಲಯ ಕರ್ನಾಟಕದ ವಾಸ್ತುಶಿಲ್ಪ ಅಧ್ಯಯನಕ್ಕೆ ವಿಶೇಷ ಉದಾಹರಣೆಯಾಗಿದೆ.
ಕಲ್ಯಾಣ ಚಾಲುಕ್ಯ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿಯಾಗಿದೆ. ಸುಂದರವಾದ ಸ್ಮಾರಕವು ಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ ಹಾಗೂ ನಂದಿಮಂಟಪಗಳನ್ನು ಹೊಂದಿದೆ. ನಕ್ಷತ್ರಾಕಾರದ ವಿನ್ಯಾಸವು ಈ ಗುಡಿಯ ಇನ್ನೊಂದು ವಿಶೇಷ.
ಶಿಖರವು ಅದ್ಬುತವಾಗಿದೆ. ಪ್ರತಿಹಂತದಲ್ಲೂ ಬಿಡಿಶಿಲ್ಪಗಳನ್ನು ಹಾಗೂ ಚಿಕ್ಕಮಂಟಪ ಅಲಂಕಾರದಿಂದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಇಡೀ ಶಿಖರವು ನಕ್ಷತ್ರಾಕಾರದಲ್ಲಿದ್ದು ಮೊದಲ ನೋಟದಲ್ಲಿ ಕಣ್ಮನ ಸೆಳೆಯುತ್ತದೆ.
ದೊಡ್ಡ ಬಸಪ್ಪನ ಗುಡಿಯನ್ನು ಪ್ರಾಚೀನ ಕಾಲದಲ್ಲಿ ಅಜ್ಜೇಶ್ವರನೆಂದು ಕರೆಯಲಾಗುತ್ತಿತ್ತು ಎಂಬ ಲಿಖಿತ ಆಧಾರಗಳಿವೆ. ಈ ಗುಡಿಯ ಮುಂಭಾಗದಲ್ಲಿ ಕಲ್ಯಾಣ ಚಾಲುಕ್ಯ ನಾಲ್ಕನೆಯ ಸೋಮೇಶ್ವರನ ಕ್ರಿ.ಶ.1184ರ ತೇದಿವುಳ್ಳ ಶಾಸನವಿದೆ.
ಸಂಬಂಧಿಸಿದ ಇಲಾಖೆಯ ಸಚಿವರಿಗೆ, ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಡಂಬಳ ಉತ್ಸವ ಮಾಡುವಂತೆ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಡಂಬಳದ ಸಾಮಾಜಿಕ ಕಾರ್ಯಕರ್ತ ಈರಣ್ಣ ನಂಜಪ್ಪನವರ.
ಗ್ರಾಮದ ಮುಂಡರಗಿ-ಗದಗ ರಸ್ತೆಯಲ್ಲಿ ಡಬ್ಬುಗಲ್ಲು ಗುಡಿ (ಸೋಮೇಶ್ವರ) ದೇವಾಲಯ ಕಂಡುಬರುತ್ತದೆ. ಈ ದೇವಾಲಯ ಎತ್ತರದ ಕಟ್ಟೆಯ ಮೇಲೆ ನಿರ್ಮಾಣವಾಗಿದ್ದು, ಇದನ್ನು ಡಬ್ಬುಗಲ್ಲು ಗುಡಿ ಸೋಮೇಶ್ವರ ಹಾಗೂ ಮಧುಮೇಶ್ವರ ಎಂಬ ನಾನಾ ಹೆಸರುಗಳಿಂದ ಕರೆಯುತ್ತಾರೆ.
ಉಸುಕು ಕಲ್ಲಿನಲ್ಲಿ ರಚನೆಯಾಗಿರುವ ಈ ಸ್ಮಾರಕ ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ನವರಂಗ ಮಂಟಪಕ್ಕೆ ಮೂರು ಕಡೆ ಪ್ರವೇಶ ದ್ವಾರಗಳನ್ನು ನಿರ್ಮಿಸಿದ್ದು ಅವುಗಳ ಮೂಲಕ ಗುಡಿಯನ್ನು ಪ್ರವೇಶಿಸಬಹುದಾಗಿದೆ. ಸಮುದ್ರದಂತೆ ಕಾಣುವ ಗ್ರಾಮದ ವಿಕ್ಟೋರಿಯಾ ಮಹಾರಾಣಿ ಕೆರೆ (ಗೋಣಸಮುದ್ರ) ಭರ್ತಿಯಾಗಿದ್ದರಿಂದ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಜಗದ್ಗರು ತೋಂಟದಾರ್ಯ ಮಧಾರ್ಧನಾರೀಶ್ವರ ದೇವಸ್ಥಾನ, ಜಪದಬಾವಿ, ಗಣೇಶ ದೇವಸ್ಥಾನ, ಗ್ರಾಮದ ಕೋಟೆ ಪ್ರವಾಸಿ ಮಂದಿರ ಮುಂತಾದ ಸ್ಮಾರಕಗಳು ಆಧುನಿಕ ದೇವಸ್ಥಾನಗಳು ಗ್ರಾಮದ ಇತಿಹಾಸಕ್ಕೆ ಸಾಕ್ಷಿಯಾಗಿವೆ. ಗ್ರಾಮದಲ್ಲಿ ಪುರಾತತ್ವ ಇಲಾಖೆಗೆ ಒಳಪುಡುವ ಹಲವು ದೇವಸ್ಥಾನ ಹಾಗೂ ಸ್ಥಳಗಳ ಜೀರ್ಣೋದ್ಧಾರವಾಗಬೇಕು.
ಸ್ಥಳಗಳ ಜೀರ್ಣೋದ್ಧಾರಕ್ಕೆ ಆಗ್ರಹ ಉತ್ಸವ ಆಚರಿಸಲು ಗ್ರಾಮಸ್ಥರ ಮನವಿ ನಿತ್ಯ ಪ್ರವಾಸಿಗರು ಭೇಟಿ
ಸರ್ಕಾರದ ವತಿಯಿಂದ ಲಕ್ಕುಂಡಿ ಉತ್ಸವದಂತೆ ಡಂಬಳ ಉತ್ಸವ ಆಚರಿಸಿದರೆ ಎಲ್ಲರಿಗೂ ಗ್ರಾಮದ ಇತಿಹಾಸ ತಿಳಿಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ಯುವಪೀಳಿಗೆಗೆ ತುಂಬಾ ಉಪಯೋಗವಾಗಲಿದೆ.
- ರಮೇಶ ಹೊಂಬಳ ಶಿಕ್ಷಕ
ಸರ್ಕಾರದ ವತಿಯಿಂದ ಡಂಬಳ ಉತ್ಸವ ಮಾಡಬೇಕು ಎನ್ನುವುದು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು
-ಜಿ.ಎಸ್.ಪಾಟೀಲ ರೋಣ ಕ್ಷೇತ್ರದ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.